ಶಾಲೆಯಲ್ಲಿ ಜಾತೀಯತೆ ಆಚರಣೆ: ಮುಖ್ಯ ಶಿಕ್ಷಕಿ ಅಮಾನತು; ಅಡುಗೆ ಸಿಬ್ಬಂದಿಗಳ ವಜಾ
ಶಾಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಕ್ಕಳು ಊಟ ಮಾಡುವ ತಟ್ಟೆಗಳನ್ನು ಪ್ರತ್ಯೇಕ ಇರಿಸಿ, ಅಸ್ಪೃಷ್ಯತೆ ಆಚರಿಸಿರುವ ಘಟನೆ ಉತ್ತರಪ್ರದೇಶದ ಮಣಿಪುರಿ ಜಿಲ್ಲೆಯ ದೌಡಾಪುರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಶಾಲೆಯ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಿದ್ದು, ಇಬ್ಬರು ಅಡುಗೆ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಶಾಲೆಯಲ್ಲಿದ್ದ 80 ಮಕ್ಕಳ ಪೈಕಿ 60 ಮಕ್ಕಳು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಈ ಮಕ್ಕಳು ಊಟ ಮಾಡಿದ ತಟ್ಟೆಗಳನ್ನು ಶಾಲೆಯ ಕೆಲಸಗಾರರು ಮುಟ್ಟಲು ಹಿಂಜರಿಯುತ್ತಿದ್ದರು ಎಂದು ತಿಳಿದು ಬಂದಿದ್ದು, ಈ ಶಾಲೆಯದ್ದು ಎನ್ನಲಾದ ವೀಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ನೂತನವಾಗಿ ಆಯ್ಕೆಯಾದ ಸರಪಂಚ್ (ಗ್ರಾಮ ಪಂಚಾಯತಿ ಸದಸ್ಯ) ಮಂಜುದೇವಿ ಅವರ ಪತಿ ಸಹಾಬ್ ಸಿಂಗ್ ಎಂಬವರು ಈ ಬಗ್ಗೆ ಸಿಡಿಒ ಅವರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಸಿಡಿಒ ಶಾಲೆಗೆ ತೆರಳಿ ಪರಿಶೀಲನೆ ನಡೆಸಿದ್ದು, ಕರ್ತವ್ಯ ಲೋಪದ ಆರೋಪದಲ್ಲಿ ಮುಖ್ಯ ಶಿಕ್ಷಕಿಯಾದ ಗರಿಮಾ ರಜಪೂತ್ ಅವರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ, ತಕ್ಷಣದಿಂದ ಜಾರಿಗೆ ಬರುವಂತೆ ಅಡುಗೆಯವರನ್ನು ವಜಾ ಮಾಡಲಾಗಿದೆ.
ಆದಾಗ್ಯೂ ಕೆಲವು ಮೇಲ್ಜಾತಿಗೆ ಸೇರಿದ ಸ್ಥಳೀಯರು ಅಮಾನತ್ತನ್ನು ವಿರೋಧಿಸಿದ್ದಾರೆ. ಮುಖ್ಯ ಶಿಕ್ಷಕಿ ಪ್ರತಿದಿನ ಶಾಲೆಗೆ ಬರುತ್ತಾರೆ, ಅವರ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕೆಲವರು ವಾದಿಸಿದ್ದಾರೆ.
ಇದನ್ನೂ ಓದಿ: ಸೆ.27 ಭಾರತ್ ಬಂದ್ಗೆ ವಿವಿಧ ಸಂಘಟನೆಗಳ ಬೆಂಬಲ; ಸೋಮವಾರ ಏನಿರತ್ತೆ? ಏನಿರಲ್ಲ?

