ನಾನು ಜನರಿಂದ ಸೋಲಲಿಲ್ಲ; ಬಿಜೆಪಿ, ಆರ್‌ಎಸ್‌ಎಸ್‌ ಪಿತೂರಿಯಿಂದ ಸೋತೆ: ಮಲ್ಲಿಕಾರ್ಜುನ ಖರ್ಗೆ

2019ರ ಲೋಕಸಭಾ ಚುನಾವಣೆಯಲ್ಲಿ ನಾನು ಜನರಿಂದ‌‌ ಸೋಲಲಿಲ್ಲ ಬಿಜೆಪಿ-ಆರ್‌ಎಸ್‌ಎಸ್‌ನವರ ಪಿತೂರಿಯಿಂದ ಸೋಲನ್ನು ಅನುಭವಿಸಿದೆ ಎಂದು‌ ರಾಜ್ಯಾಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರ್ಗಿಯಲ್ಲಿ‌ ಹೇಳಿದ್ದಾರೆ.

ನಾನು ಸತತ 11 ಬಾರಿ ಚುನಾವಣೆ ಗೆದ್ದಿದೆ. 12ನೇ ಚುನಾವಣೆಯಲ್ಲಿ ಸೋಲಾಯ್ತು. ಈ‌ ಸೋಲಿಗೆ ಕಲಬುರಗಿ ಜನ ಕಾರಣರಲ್ಲ. ಮೋದಿ, ಶಾ ಹಾಗೂ ಆರ್‌ ಎಸ್‌ ಎಸ್ ಕುತತಂತ್ರ ಕಾರಣ ಎಂದು ಅವರು ಆರೋಪಿಸಿದ್ದಾರೆ.

ನೀವು ಬರುವ ಲೋಕಸಭೆಯಲ್ಲಿ ಇದ್ದರೆ ತಾನೆ ಇವೆಲ್ಲ ಚರ್ಚೆ ನಡೆಯೋದು ಎಂದು ಒಗಟಾಗಿ ಮೋದಿಯವರು ಲೋಕಸಭೆಯಲ್ಲೇ ಹೇಳಿದ್ದರು. ಅದಕ್ಕಾಗಿ ಬಿಜೆಪಿ‌, ಆರ್‌ಎಸ್‌ಎಸ್ ಪಿತೂರಿ ನಡೆಸಿತು ಎಂದು ಖರ್ಗೆ ಹೇಳಿದ್ದಾರೆ.

ಪಾರ್ಲಿಮೆಂಟ್‌ನಲ್ಲಿ ಸೋಲಿಸೋದಾಗಿ ನನಗೆ ವಾರ್ನಿಂಗ್ ಕೊಟ್ಟಿದ್ದರು. ಅದರಂತೆ ನಡೆದುಕೊಂಡು ಸೋಲಿಸಿದರು. ಅವರು ಎಚ್ಚರಿಕೆ ನೀಡಿದ ನಂತರವಾದರೂ ನಮ್ಮವರು ನೀವೆಲ್ಲರು ಎಚ್ಚರಗೊಳ್ಳಬೇಕಿತ್ತು. ಆದರೆ, ಅವರ ಕುತಂತ್ರ ಅರಿಯಲು ನೀವು ವಿಫಲರಾದಿರಿ. ಮೋದಿ… ಮೋದಿ… ಎಂದು ಚಪ್ಪಾಳೆ ತಟ್ಟಿದಿರಿ. ಅದರ ಫಲ ನಾನು ಸೋಲುಂಡೆ. ನರೇಂದ್ರ ಮೋದಿ, ಅಮಿತ್‌ ಶಾ, ಆರ್‌ಎಸ್‌ಎಸ್‌ನವರ ಕುತಂತ್ರದಿಂದ ನಾನು ಸೋಲುಕಂಡೆ. ನನ್ನನ್ನು ಕಲಬುರಗಿ ಜನ ಸೋಲಿಸಿಲ್ಲ. ಇಲ್ಲಿಗೆ ಬರಬೇಕಿದ್ದ ಅನೇಕ ಯೋಜನೆಗಳು ದೂರ ಹೋದವು ಎಂದು ಕಲರ್ಬುಗಿ‌ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಹೇಳಿದ್ದಾರೆ.

ಇವತ್ತು ಸಂವಿಧಾನದ ಹಕ್ಕು ಕಸಿಯಲಾಗುತ್ತಿದೆ. ಕೇಂದ್ರದಲ್ಲಿ ಹಿಂದುಳಿದ, ಅಲ್ಪಸಂಖ್ಯಾತರಿಗೆ ಮಂತ್ರಿಗಿರಿ ಕೊಟ್ಟಿದ್ದೀವಿ ಅಂತ ಹೇಳುತ್ತಾರೆ. ಆದ್ರೆ ಮಂತ್ರಿಗಳಿಗೆ ಅಧಿಕಾರ ಕೊಟ್ಟಿಲ್ಲ, ಕೇವಲ ಹೀಗಂತ ಬೋರ್ಡ್ ಹಾಕಿಕೊಂಡು ಓಡಾಡಬೇಕು. ಹೊಸದು ಏನೂ ಕೊಡೋದಿಲ್ಲ, ಇದ್ದಿದನ್ನು ಕಿತ್ತುಕೊಂಡು ಹೋಗೋದು ಮೋದಿ ಸರ್ಕಾರದ ಕೆಲಸ. 70 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಅಂತಾ ಬಿಜೆಪಿ, ಮೋದಿ ಕೇಳ್ತಾರೆ. ನಾವು ಮಾಡಿದ್ದೇವೆ ಅಂತಾ ಇವತ್ತು ನೀವು ಜೀವಂತ ಇದ್ದೀರಿ ಎಂದು ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟರು.

ಈಗ ನರೇಂದ್ರ ಮೋದಿ ಅವರು ಹೊಸ ಆಟ ಆರಂಭಿಸಿದ್ದಾರೆ. ನಾವೇನು ಮಾಡುತ್ತೇವೆ ಅದರ ಹೆಸರನ್ನು ಬದಲಾವಣೆ ಮಾಡುತ್ತಾ ಹೋಗುತ್ತಿದ್ದಾರೆ ಅಷ್ಟೇ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಇತ್ತು. ಇವತ್ತು ತೈಲ ಬೆಲೆ ಏರಿಕೆ ಆಗಿದೆ. ತೈಲ ಬೆಲೆ ಏರಿಕೆಯಿಂದ 7 ವರ್ಷದಲ್ಲಿ 25 ಲಕ್ಷ ಕೋಟಿ ಆದಾಯ ಆಗಿದೆ. ಕೇಂದ್ರ ಸರ್ಕಾರಕ್ಕೆ 1 ಲಕ್ಷ 35 ಸಾವಿರ ಕೋಟಿ ಮಾತ್ರ ಸಾಲ ಇತ್ತು. ಅದನ್ನು ತೀರಿಸಬಹುದಿತ್ತಲ್ಲ? ಅದನ್ನು ಬಿಟ್ಟು ಮೋದಿ ಬರಿ ಸುಳ್ಳು ಹೇಳ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 7 ಕೋಟಿ ಜನ ನಿರುದ್ಯೋಗಿಗಳಾಗಿದ್ದಾರೆ. ಸಾರ್ವಜನಿಕ ಉದ್ಯಮಗಳಲ್ಲಿ ನೌಕರಿಗಳನ್ನು ಕಡಿಮೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಉದ್ಯೋಗವನ್ನು ಸಂಪೂರ್ಣವಾಗಿ ಕಡಿಮೆ ಮಾಡ್ತಿದೆ. ಒಂದೆಡೆ ಉದ್ಯೋಗ ಕೊಡುತ್ತೇವೆ ಎಂದು ಹೇಳಿ, ಇನ್ನೊಂದು ಕಡೆ ಉದ್ಯೋಗ ಕಡಿತ ಮಾಡ್ತಿದ್ದಾರೆ. ಒಟ್ಟಾರೆ ಕೇಂದ್ರ ಸರಕಾರ 1 ಕೋಟಿ 30 ಲಕ್ಷ ಉದ್ಯೋಗ ಕಡಿತ ಮಾಡಿದೆ ಎಂದು ಮೋದಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights