ಪ್ರೀತಿಯಷ್ಟೇ ಬಯಸಿದ್ದು; ಹಣವನ್ನಲ್ಲ; 200 ಕೋಟಿ ರೂ ಜೀವನಾಂಶ ನಿರಾಕರಿಸಿದ ನಟಿ ಸಮಂತಾ!

ತೆಲುಗಿನ ಅದ್ಭುತ ಜೋಡಿ ಎಂದೇ ಖ್ಯಾತವಾಗಿದ್ದ ಸಮಂತಾ ಪ್ರಭು ಹಾಗೂ ನಾಗಚೈತನ್ಯ ಅವರು ವಿಚ್ಛೇದನ ಪಡೆದಿದ್ದಾರೆ. ಇಬ್ಬರೂ ವಿಚ್ಛೇದನಾ ಪಡೆದಿರುವುದಾಗಿ ಸಮಂತಾ ಅವರು ತಮ್ಮ ಇನ್ಸ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಿಳಿಸಿದ್ದಾರೆ.

ಸಮಂತಾ ಹೀಗೆ ಬರೆದುಕೊಂಡಿದ್ದಾರೆ: “ಸಾಕಷ್ಟು ಆಲೋಚಿಸಿ ಈ ನಿರ್ಧಾರ ಕೈಗೊಂಡಿದ್ದೇವೆ. ನಾವು ಸ್ವಂತ ಮಾರ್ಗಗಳನ್ನು ಅನುಸರಿಸಲು ಹಾಗೂ ಗಂಡ, ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ಒಂದು ದಶಕದ ಸ್ನೇಹವನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ. ಅದು ನಮ್ಮ ಸಂಬಂಧದ ಮೂಲಸೆಲೆಯಾಗಿತ್ತು. ಅದು ನಮ್ಮ ನಡುವೆ ವಿಶೇಷ ಬಾಂಧವ್ಯವನ್ನು ಉಳಿಸಿಕೊಳ್ಳುತ್ತದೆ ಎಂದು ನಾವು ನಂಬುತ್ತೇವೆ. ಈ ಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮಗೆ ಸಹಕರಿಸಬೇಕು, ನಾವು ಮುಂದುವರಿಯಲು ನಮಗೆ ಖಾಸಗಿತನವನ್ನು ನೀಡಬೇಕು” ಎಂದು ಬರೆದುಕೊಂಡಿದ್ದಾರೆ.

ವಿಚ್ಛೇದನ ಪಡೆದಿರುವ ಸಮಂತಾ ಅವರು ಐವತ್ತು ಕೋಟಿ ರೂ. ಜೀವನಾಂಶವನ್ನು ಪಡೆಯುತ್ತಾರೆ ಎಂಬ ವರದಿಗಳಾಗಿದ್ದು, ಅದನ್ನು ಸಮಂತಾ ನಿರಾಕರಿಸಿದ್ದಾರೆ. ಅಧಿಕೃತ ಮೂಲವೊಂದರ ಪ್ರಕಾರ ಸಮಂತಾ ಅವರಿಗೆ 200 ಕೋಟಿ ರೂ.ಗಿಂ ಹೆಚ್ಚು ಜೀವನಾಂಶದ ಅವಕಾಶ ಬಂದಿತ್ತು. ಆದರೆ ತನ್ನ ಸಂಬಂಧವನ್ನು ಕೊನೆಗೊಳಿಸಲು ಸಮಂತಾ ಒಂದು ರೂಪಾಯಿ ಕೂಡ ಬಯಸಿಲ್ಲ ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

“ಹೃದಯ ಘಾಸಿಗೊಂಡ ಮತ್ತು ದಿಗ್ಭ್ರಮೆಯಾದ ಸಮಂತಾ ಅವರಿಗೆ ಈ ವಿವಾಹದಿಂದ ಪ್ರೀತಿ ಮತ್ತು ಒಡನಾಟ ಮಾತ್ರ ಬೇಕಿತ್ತು. ಆದರೆ ಈಗ ಅದು ಮುಗಿದಿದೆ. ಸಮಂತಾ ಅವರಿಗೆ ಪ್ರೀತಿ ಮತ್ತು ಒಡನಾಟದ ಹೊರತಾಗಿ ಬೇರೇನೂ ಅಗತ್ಯವಿರಲಿಲ್ಲ” ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.

ಸಮಂತಾ ಹಾಗೂ ನಾಗಚೈತನ್ಯ ಅವರ ನಡುವಿನ ಪ್ರೀತಿ 2010ರಲ್ಲಿ ‘ಯೇ ಮಾಯಾ ಚೇಸವೆ’ ಸಿನಿಮಾದಲ್ಲಿ ಕೆಲಸ ಮಾಡುವಾಗ ಆರಂಭವಾಗಿತ್ತು. 2017ರಲ್ಲಿ ವಿವಾಹವಾಗಿದ್ದರು. ಇತ್ತೀಚೆಗೆ ಈ ಜೋಡಿಯ ನಡುವೆ ಬಿರುಕು ಮೂಡಿರುವ ವಿಷಯಗಳು ಹರಿದಾಡಿದ್ದವು.  ಸಮಂತಾ ಅಕ್ಕಿನೇನಿ ಎಂಬುದನ್ನು ‘ಎಸ್‌’ ಎಂಬುದಾಗಿ ಅವರು ಬದಲಿಸಿದ್ದರಿಂದ ವಿಚ್ಛೇದನ ಕುರಿತು ಸುದ್ದಿಗಳು ಹರಿದಾಡಿದ್ದವು. ಚೈತನ್ಯ ಅವರ ಕುಟುಂಬವು ಅಮೀರ್‌ ಖಾನ್‌ ಅವರಿಗೆ ಆಯೋಜಿಸಿದ್ದ ಔತಣ ಕೂಟವು ಈ ಅನುಮಾನಗಳಿಗೆ ಬಲ ನೀಡಿತ್ತು. ಈಗ ವಿಚ್ಛೇದನ ವಿಷಯವನ್ನು ಬಹಿರಂಗಪಡಿಸಲಾಗಿದೆ.

ಈ ಆಘಾತದಿಂದ ಹೊರ ಬರಲು ಸಮಂತಾ ಅವರು ತಮ್ಮ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ತನ್ನ ವೈಯಕ್ತಿಕ ಜೀವನದ ಕಾರಣದಿಂದ ತನಗೆ ಸಂಬಂಧಿಸಿರುವ ಯಾವುದೇ ಪ್ರಾಜೆಕ್ಟ್‌ ನರಳಬಾರದು ಎಂದು  ಸಮಂತಾ ಬಯಸುತ್ತಾರೆ. ಸಮಂತಾ ಅವರು ತಮ್ಮ ವೃತ್ತಿಗೆ ಬದ್ಧರಾಗಿದ್ದು, ಅದನ್ನು ಸಾಕಷ್ಟು ಪ್ರೀತಿಸುತ್ತಾರೆ ಎಂದು ಮೂಲಗಳು ಹೇಳಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights