ಯುಟ್ಯೂಬ್ ವಿಡಿಯೋ ನೋಡಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ; ಯುವಕನ ಬಂಧನ
ಯುಟ್ಯೂಬ್ನಲ್ಲಿ ಹೆರಿಗೆ ಮಾಡುವುದು ಹೇಗೆ ಎಂಬ ವಿಡಿಯೋ ನೋಡಿಕೊಂಡು 17 ವರ್ಷದ ಅಪ್ರಾಪ್ತ ಯುವತಿಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.
ಅಪ್ರಾಪ್ತೆ 21 ವರ್ಷದ ಯುವಕನ್ನು ಪ್ರೀತಿಸುತ್ತಿದ್ದಳು. ಅವರಿಬ್ಬರ ದೈಹಿಕ ಸಂಬಂಧದಿಂದಾಗಿ ಅಪ್ರಾಪ್ತೆ ಗರ್ಭ ಧರಿಸಿದ್ದಳು ಎನ್ನಲಾಗಿದೆ. ಆದರೆ, ಆಕೆ ಗರ್ಭಿಣಿಯಾಗಿರುವುದನ್ನು ತನ್ನ ಪೋಷಕರಿಂದ ಮುಚ್ಚಿಟ್ಟಿದ್ದಳು. ಹೀಗಾಗಿ, ಆಕೆ ಯಾರಿಗೂ ತಿಳಿಯದಂತೆ ತನ್ನ ಕೊಠಡಿಯಲ್ಲಿ ಅಕ್ಟೋಬರ್ 20ರಂದು ಮಗುವಿಗೆ ಜನ್ಮ ನೀಡಿದ್ದಾಳೆ.
ಅಪ್ರಾಪ್ತೆಯ ತಾಯಿ ಕುರುಡಿಯಾಗಿದ್ದಾರೆ, ತಂದೆ ರಾತ್ರಿ ಪಾಳಿಯಲ್ಲಿ ವಾಚ್ಮ್ಯಾನ್ ಆಗಿ ಕೆಲಸ ಮಾಡುತ್ತಾರೆ. ಹೀಗಾಗಿ, ಅಪ್ರಾಪ್ತೆ ಮಗುವಿಗೆ ಜನ್ಮ ನೀಡಿರುವ ವಿಚಾರ ತಿಳಿದಿರಲಿಲ್ಲ. 2 ಎರಡು ದಿನಗಳ ಬಳಿಕ ಮಗು ಅಳುತ್ತಿರುವ ಶಬ್ದ ಕೇಳಿಸಿದೆ. ಇದರಿಂದ ಪ್ರಕರಣ ಪೋಷಕರಿಗೆ ತಿಳಿದು, ಬೆಳಕಿಗೆ ಬಂದಿದೆ.
ನಂತರ, ಆಕೆಯನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪ್ತಾಪ್ತೆ ಮತ್ತು ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ.
ಆಸ್ಪತ್ರೆಯ ಆಡಳಿತ ಮಂಡಳಿಯು ಮಲಪ್ಪುರಂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದೆ. ಬಳಿಕ ಸಮಿತಿಯು ಪೊಲೀಸರಿಗೆ ಮಾಹಿತಿ ನೀಡಿದೆ. ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸರು ಅಪ್ರಾಪ್ತೆಯನ್ನು ವಿಚಾರಿಸಿದ್ದಾರೆ.
ಪ್ರಾಥಮಿಕ ತನಿಖೆಯ ವೇಳೆ ಈ ಹುಡುಗಿ ಹೆರಿಗೆ ಸಂದರ್ಭದಲ್ಲಿ ಯಾರಿಂದಲೂ ಸಹಾಯ ಪಡೆಯದೇ, ಯುಟ್ಯೂಬ್ ವಿಡಿಯೋ ನೋಡಿಯೇ ಮಗುವಿಗೆ ಜನ್ಮ ನೀಡಿದ್ಧಾಳೆ ಮತ್ತು ಕರಳುಬಳ್ಳಿಯನ್ನು ತಾನೇ ಕತ್ತರಿಸಿದ್ದಾಳೆ ಎಂದು ತಿಳಿದು ಬಂದಿದೆ.
ಆಕೆ ನೀಡಿರುವ ಮಾಹಿತಿಯ ಮೇಲೆ ಪೊಲೀಸರು ಆಕೆಯ ಪ್ರೇಮಿಯನ್ನು ಬಂಧಿಸಿದ್ದಾರೆ. ಆತನ ವಿರುದ್ದ ಪೋಸ್ಕೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತೆ ಹಾಗೂ ಯುವಕ ಪ್ರೀತಿಸುತ್ತಿರುವ ವಿಚಾರ ಮನೆಯವರಿಗೂ ತಿಳಿದಿತ್ತು. ಆಕೆ ಅಪ್ತಾಪ್ತೆಯಾಗಿದ್ದರಿಂದ ಆಕೆಗೆ 18 ವರ್ಷ ತುಂಬಿದ ಬಳಿಕ ಮದುವೆ ಮಾಡಲು ಎರಡೂ ಕುಟುಂಬದವರೂ ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕೇರಳ: ಯುವತಿಯ ಮೇಲೆ 15 ವರ್ಷದ ಬಾಲಕನಿಂದ ಅತ್ಯಾಚಾರ, ಕೊಲೆಗೆ ಯತ್ನ