ಕೇರಳ: ಯುವತಿಯ ಮೇಲೆ 15 ವರ್ಷದ ಬಾಲಕನಿಂದ ಅತ್ಯಾಚಾರ, ಕೊಲೆಗೆ ಯತ್ನ

15 ವರ್ಷದ ಬಾಲಕ 23 ವರ್ಷದ ಯುವತಿಯನ್ನು ಬಾಳೆ ತೋಟಕ್ಕೆ ಎಳೆದೊಯ್ದು, ಆಕೆಯ ಮುಖಕ್ಕೆ ಕಲ್ಲಿನಿಂದ ಹೊಡೆದು ಅತ್ಯಾಚಾರಕ್ಕೆ ಯತ್ನಿಸಿರುವ ಅಮಾನಷ ಘಟನೆ ಕೇರಳದ ಕೊಂಡೊಟ್ಟಿಯ ಕೊಟ್ಟುಕ್ಕರ ಎಂಬಲ್ಲಿ ಸೋಮವಾರ ನಡೆದಿದೆ.

ಜಿಲ್ಲಾ ಮಟ್ಟದ ಜೂಡೋ ಚಾಂಪಿಯನ್ ಕೂಡ ಆಗಿರುವ 10 ನೇ ತರಗತಿ ವಿದ್ಯಾರ್ಥಿಯೇ ಆರೋಪಿ ಎಂದು ಯುವತಿ ನೀಡಿದ ವಿವರಣೆ ಮತ್ತು ಸಿಸಿಟಿವಿ ದೃಶ್ಯಗಳಿಂದ ಗುರುತಿಸಲಾಗಿತ್ತು. ಮಂಗಳವಾರ ಆತನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ. ಆತನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಮಧ್ಯಾಹ್ನ 12.45ರ ಸುಮಾರಿಗೆ ಈ ಘಟನೆ ನಡೆದಿದೆ. ಯುವತಿ ತಾನು ಓದುತ್ತಿರುವ ಕೊಂಡೊಟ್ಟಿಯಲ್ಲಿರುವ ಕಂಪ್ಯೂಟರ್ ಸೆಂಟರ್‌ಗೆ ಹೋಗಲು ತನ್ನ ಮನೆಯಿಂದ ಕೊಟ್ಟುಕ್ಕರ ಜಂಕ್ಷನ್‌ಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಆಕೆಯನ್ನು ಬಾಲಕ ಹಿಂಬಾಲಿಸಿಕೊಂಡು ಹೋಗಿದ್ದಾನೆ. ಆಕೆಯನ್ನು ಹಿಂದಿನಿಂದ ಹಿಡಿದು ಬಾಳೆ ತೋಟಕ್ಕೆ ಎಳೆದೊಯ್ದು ಅತ್ಯಾಚಾರ ಯತ್ನಿಸಿದ್ದಾನೆ. ಆಕೆ ವಿರೋಧಿಸಿದಾಗ ಕಲ್ಲಿನಿಂದ ಆಕೆಯ ಮುಖಕ್ಕೆ ಹೊಡೆದಿದ್ದಾನೆ. ಅಲ್ಲದೆ, ಆಕೆಯ ಮೇಲಂಗಿಯನ್ನು ಬಳಸಿ ಆಕೆಯ ಕೈಗಳನ್ನು ಕಟ್ಟಿದ್ದಾನೆ.

“ಬಾಲಕ, ತನ್ನ ಮೇಲೆ ದಾಳಿ ಮಾಡಲು ಮತ್ತೊಂದು ಕಲ್ಲನ್ನು ಹುಡುಕುತ್ತಿದ್ದಾಗ, ಆಕೆ ಅವನ ಹಿಡಿತದಿಂದ ತಪ್ಪಿಕೊಂಡು ಹತ್ತಿರದ ಮನೆಗೆ ಓಡಿಹೋದ್ದಾರೆ. ಮನೆಯವರು ಬಾಲಕನ್ನು ಬೆದರಿಸಿದಾಗ ಆತ ಓಡಿಹೋಗಿದ್ದಾನೆ” ಎಂದು ಕೊಂಡೊಟ್ಟಿ ಪುರಸಭೆಯ ಕೊಟ್ಟುಕ್ಕರ ವಾರ್ಡ್ ಕೌನ್ಸಿಲರ್ ಉಮ್ಮರ್ ಫಾರೂಕ್ ತಿಳಿಸಿದ್ದಾರೆ.

“ಯುವತಿಯ ಮುಖ ಊದಿಕೊಂಡಿತ್ತು. ದಾಳಿಕೋರ ಆಕೆಯ ಉಡುಪನ್ನು ಹರಿದು ಹಾಕಿದ್ದ. ಸಂತ್ರಸ್ತ ಯುವತಿಗೆ ಪ್ರಥಮ ಚಿಕಿತ್ಸೆ ನೀಡಿ ಕೊಂಡೊಟ್ಟಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ, ಆಕೆಯನ್ನು ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಿದೆವು” ಎಂದು ಫಾರೂಕ್ ತಿಳಿಸಿದ್ದಾರೆ.

ಯುವತಿ ಸಾಮಾನ್ಯವಾಗಿ ಕಂಪ್ಯೂಟರ್ ಸೆಂಟರ್‌ಗೆ ಹೋಗಲು ಜಂಕ್ಷನ್‌ನಲ್ಲಿ ಬಸ್‌ ಹತ್ತುತ್ತಾರೆ. ಆಕೆಯ ಮನೆಯಿಂದ, ಕೊಟ್ಟುಕ್ಕರ ಜಂಕ್ಷನ್‌ಗೆ ಹೋಗಲು ಆಕೆ ಒಂದು ಕಿಲೋಮೀಟರ್ ನಡೆಯಬೇಕು. ಜಂಕ್ಷನ್ ತಲುಪಲು ಆಕೆ ಸಾಮಾನ್ಯವಾಗಿ ಭತ್ತದ ಗದ್ದೆಗಳ ಮಧ್ಯೆ ಇರುವ ಕಾಲುದಾರಿಯಲ್ಲಿ ಓಡಾಡುತ್ತಾರೆ ಎಂದು ಫಾರೂಪ್ ವಿವರಿಸಿದ್ದಾರೆ.

ದಾಳಿಕೋರ ಹೇಗಿದ್ದನು ಎಂಬುದನ್ನು ಪೊಲೀಸ್ ಅಧಿಕಾರಿಗಳಿಗೆ ಸಂತ್ರಸ್ತೆ ವಿವರಿಸಿದ್ದಾರೆ. ಮತ್ತೆ ಅತನನ್ನು ನೋಡಿದರೆ ಗುರುತಿಸಬಹುದು. ಆತ ಮಲಯಾಳಂನಲ್ಲಿ ಮಾತನಾಡಿದ್ದನು. ಅವನನ್ನು ಕೆಲವು ಬಾರಿ ಈ ಪ್ರದೇಶದಲ್ಲಿ ನೋಡಿದ್ದೇನೆ ಎಂದು ಆಕೆ ತಿಳಿಸಿದ್ದರು.

ಆರೋಪಿ ಬಾಲಕನನ್ನು ಬಂಧಿಸಲಾಗಿದೆ. ಆತ ತಾನು ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತನನ್ನು ಬಾಲನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಕೊಂಡೊಟ್ಟಿ ಇನ್ಸ್‌ಪೆಕ್ಟರ್ ಪ್ರಮೋದ್ ಎಂ ಸಿ ತಿಳಿಸಿದ್ದಾರೆ.

“ನಾವು ಮಂಡಳಿಗೆ ವರದಿಯನ್ನು ಸಲ್ಲಿಸುತ್ತೇವೆ, ಅದರಲ್ಲಿ ಬಾಲಕನು ಯುವತಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಉಲ್ಲೇಖಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ತ್ರಿಪುರಾ: VHP, ಬಜರಂಗದಳ ರ್‍ಯಾಲಿ ವೇಳೆ ಮಸೀದಿ ಮತ್ತು ಅಂಗಡಿಗಳ ಧ್ವಂಸ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.