ತ್ರಿಪುರಾ: VHP, ಬಜರಂಗದಳ ರ್‍ಯಾಲಿ ವೇಳೆ ಮಸೀದಿ ಮತ್ತು ಅಂಗಡಿಗಳ ಧ್ವಂಸ
ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ದುರ್ಗಾಪೂಜಾ ಮಂಟಪವನ್ನು ಧ್ವಂಸಗೊಳಿಸಿದ್ದನ್ನು ವಿರೋಧಿಸಿ ಬಿಜೆಪಿ ಬೆಂಬಲಿತ ಸಂಘಟನೆಗಳಾದ ವಿಎಚ್‌ಪಿ ಮತ್ತು ಬಜರಂಗದಳ ರ್‍ಯಾಲಿ ನಡೆಸುತ್ತಿದ್ದ ವೇಳೆ, ಮಸೀದಿ ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಿರುವ ಘಟನೆ ತ್ರಿಪುರಾದ ಪಾಣಿಸಾಗರ್‌ನಲ್ಲಿ ಮಂಗಳವಾರ ನಡೆದಿದೆ.
“ಪಾಣಿಸಾಗರದಲ್ಲಿ ವಿಎಚ್‌ಪಿ ಸುಮಾರು 3,500 ಜನರ ಪ್ರತಿಭಟನಾ ರ್‍ಯಾಲಿಯನ್ನು ಆಯೋಜಿಸಿತ್ತು. ರ್‍ಯಾಲಿಯಲ್ಲಿ ವಿಎಚ್‌ಪಿ ಕಾರ್ಯಕರ್ತರ ಒಂದು ವಿಭಾಗವು ಚಮ್ಟಿಲ್ಲಾ ಪ್ರದೇಶದಲ್ಲಿ ಮಸೀದಿಯನ್ನು ಧ್ವಂಸಗೊಳಿಸಿದೆ. ನಂತರ, ಅಲ್ಲಿಂದ ಸುಮಾರು 800 ಗಜಗಳಷ್ಟು ದೂರದಲ್ಲಿರುವ ರೋವಾ ಬಜಾರ್ ಪ್ರದೇಶದ ಮೂರು ಮನೆಗಳು ಮತ್ತು ಮೂರು ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ ಮತ್ತು ಎರಡು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ” ಪಾಣಿಸಾಗರ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಸೌಭಿಕ್ ಡೇ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ; ನಗ್ನ ಫೋಟೋ ಹೊರಬಂದ ಬಳಿಕ ಕೃತ್ಯ ಬೆಳಕಿಗೆ
ಧ್ವಂಸ ಮಾಡಿರುವ ಮನೆಗಳು ಮತ್ತು ಸುಟ್ಟು ಕರಕಲಾದ ಅಂಗಡಿಗಳು ಅಲ್ಪಸಂಖ್ಯಾತ ಸಮುದಾಯದವರಿಗೆ ಸೇರಿದ್ದು, ಅವರಲ್ಲಿ ಒಬ್ಬರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆ ಮತ್ತಷ್ಟು ಹದಗೆಡುವುದನ್ನು ತಪ್ಪಿಸಲು ಸುತ್ತಮುತ್ತಲಿನ ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸಿಪಿಐಎಂ ರಾಜ್ಯ ನಾಯಕ ಪಬಿತ್ರಾ ಕರ್ ಮಾತನಾಡಿ, “ಬಾಂಗ್ಲಾದೇಶದಲ್ಲಿ ಹಿಂಸಾಚಾರ ನಡೆದ ನಂತರ ತ್ರಿಪುರಾದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಇದನ್ನು ಬಿಜೆಪಿಯವರು ರೂಪಿಸುತ್ತಿದ್ದಾರೆ. ತ್ರಿಪುರ ಕೋಮು ಶಾಂತಿ ಮತ್ತು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಇಲ್ಲಿ ಕೋಮು ಸೌಹಾರ್ದತೆ ಮತ್ತು ಶಾಂತಿ ಕಾಪಾಡುವುದನ್ನು ರಾಜ್ಯ ಸರ್ಕಾರ ಖಚಿತಪಡಿಸಿಕೊಳ್ಳಬೇಕು” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ: ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕ; ಒಂದೂವರೆ ವರ್ಷದಲ್ಲಿ ಕಾಂಗ್ರೆಸ್‌ಗೆ ಕೈ ಕೊಟ್ಟ 27 ಶಾಸಕರು
ಬಿಜೆಪಿ ವಕ್ತಾರ ನಬೆಂದು ಭಟ್ಟಾಚಾರ್ಯ ಅವರು ಘಟನೆಯ ಬಗ್ಗೆ ತನಗೆ ತಿಳಿದಿಲ್ಲ ಆದರೆ ಪೊಲೀಸರು ಅಗತ್ಯ ಕ್ರಮ ತೆಗೆದು ಕೊಳ್ಳುತ್ತಾರೆ ಎಂದು ನಂಬಿದ್ದೇನೆ ಎಂದು ಹೇಳಿದ್ದಾರೆ.
“ವಿಎಚ್‌ಪಿ ಇಂದು ಪಾಣಿಸಾಗರ್ ಪ್ರದೇಶದಲ್ಲಿ ಪ್ರತಿಭಟನಾ ರ್‍ಯಾಲಿಯನ್ನು ಆಯೋಜಿಸಿತ್ತು. ನಾವು ಪಾಣಿಸಾಗರ ಮೋಟಾರು ಸ್ಟ್ಯಾಂಡ್‌ನಲ್ಲಿ ಜಮಾಯಿಸಿ, ಚಾಮಟಿಲ್ಲಾ, ರೋವಾ, ಜಲೇಬಾಷಾ ಸೇರಿದಂತೆ ವಿವಿಧ ಪ್ರದೇಶಗಳ ಮೂಲಕ ನಡೆದು ಪ್ರಾರಂಭದ ಹಂತಕ್ಕೆ ಹಿಂತಿರುಗಲು ನಿರ್ಧರಿಸಿದ್ದೇವೆ. ನಾವು ರೋವಾ ಬಳಿ ಬಂದಾಗ ಮಸೀದಿಯ ಮುಂದೆ ನಿಂತಿದ್ದ ಕೆಲವು ಯುವಕರು ನಮ್ಮನ್ನು ನಿಂದಿಸಿದ್ದಾರೆ. ಅವರು ಖಡ್ಗ ಮತ್ತು ಇತರ ಆಯುಧಗಳಿಂದ ಶಸ್ತ್ರಸಜ್ಜಿತರಾಗಿದ್ದರು. ಅವರು ಪಾಕಿಸ್ತಾನ್ ಜಿಂದಾಬಾದ್ ಮತ್ತು ಧಾರ್ಮಿಕ ಘೋಷಣೆಗಳನ್ನು ಕೂಗಿದ್ದು, ಅವರ ಪ್ರಚೋದನೆಯಿಂದಾಗಿ ಕೆಲವು ವಿರಳ ಘಟನೆಗಳು ಸಂಭವಿಸಿವೆ” ಎಂದು ರ್‍ಯಾಲಿಯಲ್ಲಿ ಭಾಗವಹಿಸಿದ್ದ ಪಾಣಿಸಾಗರದ ಬಜರಂಗದಳದ ನಾಯಕ ನಾರಾಯಣ್ ದಾಸ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಕಳೆದ ಶುಕ್ರವಾರ, ತ್ರಿಪುರಾ ರಾಜ್ಯ ಜಮಿಯತ್ ಉಲಮಾ (ಹಿಂದ್) ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರ ಕಚೇರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದು, ಕಳೆದ ಮೂರು ದಿನಗಳಲ್ಲಿ ಮಸೀದಿಗಳು ಮತ್ತು ಅಲ್ಪಸಂಖ್ಯಾತರ ವಸತಿಗಳ ಮೇಲೆ ದಾಳಿಗಳು ನಡೆದಿವೆ ಎಂದು ಆರೋಪಿಸಿದೆ.
ಇದನ್ನೂ ಓದಿ: ಮುಲ್ಲಪೆರಿಯಾರ್ ಅಣೆಕಟ್ಟಿಗೆ ಅಪಾಯ ಎಂಬ ವದಂತಿ; ಭೀತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ!