FACT CHECK | ಏಕನಾಥ್ ಶಿಂಧೆಯನ್ನು ವೇದಿಕೆಯಿಂದ ಹಿಂದಕ್ಕೆ ತಳ್ಳಿದರೆ ಪ್ರಧಾನಿ ಮೋದಿ?
ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಶಿವಸೇನೆ ಶಿಂಧೆ ಬಣದ ಏಕನಾಥ್ ಶಿಂಧೆ ಅವರನ್ನು ಕಾರ್ಯಕ್ರಮವೊಂದರಲ್ಲಿ ಪಕ್ಕಕ್ಕೆ ತಳ್ಳುತ್ತಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಕರ್ನಾಟಕ ಕಾಂಗ್ರೆಸ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಹಂಚಿಕೊಳ್ಳಲಾಗಿದೆ.
ಕರ್ನಾಟಕ ಕಾಂಗ್ರೆಸ್ನ ಟ್ವೀಟ್ನಲ್ಲಿ ಹಂಚಿಕೊಂಡ ಪೋಸ್ಟ್ನಲ್ಲಿ “ಮಾನ್ಯ ಕುಮಾರಸ್ವಾಮಿಯವರೇ, ಕರುವಿನ ಹಾರಾಟ ಗೂಟದ ಕೆಳಗೆ ಎಂಬಂತೆ ನರೇಂದ್ರ ಮೋದಿ ಅವರ ತಾಳಕ್ಕೆ ತಕ್ಕಂತೆ ನೀವು ಕುಣಿಯಲೇ ಬೇಕಾಗುತ್ತದೆ. ಮುಂದೊಂದು ದಿನ ಬಿಜೆಪಿಯಲ್ಲಿ ನಿಮ್ಮನ್ನು ತಿಂದು ಎಸೆಯೋ ಎಲೆಯಂತೆ ಕಿತ್ತೆಸೆಯುವುದಂತೂ ನಿಶ್ಚಿತ..!” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರಿಗೆ ಟಾಂಗ್ ನೀಡುವ ಬರಹದೊಂದಿಗೆ ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್ಚೆಕ್ :
ಕರ್ನಾಟಕ ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಂತೆ ಏಕನಾಥ್ ಶಿಂಧೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ಪಕ್ಕಕ್ಕೆ ತಳ್ಳಿಲ್ಲ. ಜೊತೆಗೆ ಅವರನ್ನು ಬಿಜೆಪಿ ಕೈಯೂ ಬಿಟ್ಟಿಲ್ಲ. ಮಹಾರಾಷ್ಟ್ರದಲ್ಲಿ ರಚನೆಯಾಗುತ್ತಿರುವ ನೂತನ ಸರಕಾರದಲ್ಲಿ ಅವರು ಡಿಸಿಎಂ ಆಗಿ ಇರಲಿದ್ದಾರೆ.ಎಂಬುದು ಸ್ಪಷ್ಟವಾಗಿದೆ.
ಈ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಏಕನಾಥ್ ಶಿಂಧೆ ರೈಲ್ವೆ ನಿಲ್ದಾಣದಲ್ಲಿ ನಿಂತಿರುವುದು ಕಾಣಿಸುತ್ತದೆ. ಇದನ್ನೇ ಇಟ್ಟುಕೊಂಡು ‘Modi Eknath Shinde Railway’ ಎಂದು ಕೀವರ್ಡ್ ಬಳಸಿ ಯೂಟ್ಯೂಬ್ನಲ್ಲಿ ಸರ್ಚ್ ಮಾಡಿದಾಗ ನರೇಂದ್ರ ಮೋದಿ ಅವರ ಖಾತೆಯಿಂದಲೇ ಹಂಚಿಕೊಂಡಿರುವ ವಿಡಿಯೋ ಲಭ್ಯವಾಗಿದೆ.
ಈ ವಿಡಿಯೋ ಪರಿಶೀಲನೆ ನಡೆಸಿದಾಗ, ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಏಕನಾಥ್ ಶಿಂಧೆ ಜೊತೆ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರುತ್ತಿರುವುದು ಕಾಣಿಸುತ್ತದೆ. ಕಾಂಗ್ರೆಸ್ ಎಕ್ಸ್ನಲ್ಲಿ ಹಂಚಿಕೊಂಡಿರುವ ವಿಡಿಯೋದ ತುಣುಕು ಇದರಲ್ಲಿ 4 ನಿಮಿಷ 25 ಸೆಕೆಂಡ್ನಲ್ಲಿ ಬರುತ್ತದೆ.
ವಂದೇ ಭಾರತ್ ರೈಲು ತೆರಳಿದ ಬಳಿಕ ಹೊರಡಲು ಅನುವಾಗುವಂತೆ ಏಕನಾಥ್ ಶಿಂಧೆ ಹಿಂದಕ್ಕೆ ಹೋಗುತ್ತಾರೆ. ಆದರೆ ಮೋದಿ ಅವರೇನು ಅವರನ್ನು ಹಿಂದಕ್ಕೆ ತಳ್ಳುವುದಿಲ್ಲ. ಜೊತೆಗೆ ಹಿಂದೆ ಹೋದ ಶಿಂಧೆ ಅವರನ್ನು ವಾಪಸ್ ಕರೆದು ಕೈ ಕುಲುಕಿ ಮೋದಿ ಮಾತನಾಡುವುದೂ ಈ ವಿಡಿಯೋದಲ್ಲಿ ದಾಖಲಾಗಿದೆ.
ಇಬ್ಬರೂ ನಗುನಗುತ್ತಾ ವಿಡಿಯೋದಲ್ಲಿ ಮಾತನಾಡುವುದನ್ನೂ ನೋಡಬಹುದು. ನಂತರ ಇಬ್ಬರೂ ಕಾರ್ಯಕ್ರಮದಿಂದ ನಿರ್ಗಮಿಸುತ್ತಾರೆ. ವೈರಲ್ ಆಗಿರುವ ವಿಡಿಯೋ ತುಣುಕನ್ನು ಇದರಿಂದಲೇ ಎತ್ತಿಕೊಳ್ಳಲಾಗಿದೆ ಎಂಬುದಕ್ಕೆ ಸಾಕ್ಷಿಯಾಗಿ ಹಿನ್ನೆಲೆಯಲ್ಲಿ ದೇವೇಂದ್ರ ಫಡ್ನವಿಸ್ ಹಾಗೂ ನಿತಿನ್ ಗಡ್ಕರಿ ನಿಂತಿರುವುದನ್ನು ಕಾಣಬಹುದಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, BJP ಪಕ್ಷವು ತನ್ನ ಅಣತಿಯಂತೆ ನಡೆದುಕೊಳ್ಳದ ಇತರೆ ಮಿತ್ರ ಪಕ್ಷದ ನಾಯರನ್ನು ಹೇಗೆ ಬಗ್ಗು ಬಡಿಯಬೇಕು ಎಂಬುದನ್ನು ಈಗಾಗಲೆ ನಿರೂಪಿಸಿದೆ. ಆದರೆ ಕರ್ನಾಟಕ ಕಾಂಗ್ರೆಸ್ ತನ್ನ ಎಕ್ಸ್ನಲ್ಲಿ ಹಂಚಿಕೊಂಡಂತೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಏಕನಾಥ್ ಶಿಂಧೆಯನ್ನು ಹಿಂದಕ್ಕೆ ತಳ್ಳಿದ್ದಾರೆ ಎಂಬುದು ಸುಳ್ಳು. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ವಕ್ಫ್ ಬೋರ್ಡ್ ಪರವಾಗಿ ಪ್ರತಿಭಟನೆ ಮಾಡಿದ ಮುಸ್ಲಿಮರಿಗೆ ಪೊಲೀಸರು ಥಳಿಸಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

