FACT CHECK | ಪ್ರಧಾನಿ ನರೇಂದ್ರ ಮೋದಿಗೆ ಹಸ್ತಲಾಘವ ನೀಡಲು ನಿರಾಕರಿಸಿದ್ರಾ ಫ್ರಾನ್ಸ್‌ ಅಧ್ಯಕ್ಷ ?

ಭಾರತದ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಫ್ರಾನ್ಸ್‌ ಪ್ರವಾಸಕ್ಕೆ ತೆರಳಿದ್ದರು, ಈ ಸಂದರ್ಭದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯಲ್‌ ಮ್ಯಾಕ್ರನ್‌ ಪ್ರಧಾನಿ ಮೋದಿಗೆ ಹಸ್ತಲಾಘವ ಮಾಡದೆ ಅವಮಾನಿಸಿದ್ದಾರೆ. ಹಸ್ತಲಾಘವ ನೀಡಲು ಸ್ವತಃ ಪ್ರಧಾನಿ ಮೋದಿ ಮುಂದಾದರೂ, ಮ್ರಾಕ್ರನ್‌ ಬೇರೆಯವರ ಉಭಯ ಕುಶಲೋಪರಿ ವಿಚಾರಿಸುವುದರಲ್ಲೇ ಬ್ಯುಸಿಯಾಗಿದ್ದರು. ಹೀಗಾಗಿ ಮೋದಿ ಕೈ ಕುಲುಕಲು ನಿರಾಕರಿಸಿದ್ದಾರೆ ಎಂದು ಪ್ರತಿಪಾದಿಸಲಾಗಿದೆ.

‘ಗೌರವ್‌ ಪಂಧಿ‘ ಎಂಬ ಎಕ್ಸ್‌ ಬಳಕೆದಾರರು, ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯಲ್‌ ಮ್ರಾಕ್ರನ್‌ ಆಗಮಿಸಿ ಪ್ರಧಾನಿ ನರೇಂದ್ರ ಮೋದಿ ಪಕ್ಕದಲ್ಲಿ ಕುಳಿತಿರುವ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಕೈ ಕುಲುಕುವುದನ್ನು ಕಾಣಬಹುದು. ನಂತರ ಅವರು ಅಲ್ಲಿದ್ದ ಇನ್ನಿತರ ಗಣ್ಯರ ಕೈಕುಲುಕುತ್ತಾರೆ. ಹಸ್ತಲಾಘವಕ್ಕೆ ಒಂದು ಬಾರಿ ಮೋದಿ ಕೈ ಮುಂದೆ ಚಾಚಿದರೂ, ಅದನ್ನು ನೋಡದೇ ಬೇರೆಯವರ ಕೈ ಕುಲುಕುವುದರಲ್ಲೇ ನಿರತರಾಗಿದ್ದರು. ನಂತರ ಮೋದಿ ಇತರರಿಗೆ ಹಾಯ್‌ ಹೇಳುತ್ತಿರುವುದು ಇದರಲ್ಲಿದೆ.

ಇದನ್ನು ಹಂಚಿಕೊಂಡಿರುವ ಗೌರವ್‌ ಪಂಧಿ, “ಗೋಧಿ ಮೀಡಿಯಾಗೆ ಇದನ್ನು ತೋರಿಸಬೇಡಿ ಎನ್ನಲಾಗಿದೆ. ಪ್ರಧಾನಿ ಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಹಸ್ತಲಾಘವ ಮಾಡಲು ಹಲವು ಬಾರಿ ಪ್ರಯತ್ನಿಸಿದರು. ಆದರೆ ಅವರನ್ನು ಪದೇ ಪದೇ ನಿರ್ಲಕ್ಷಿಸಲಾಯಿತು. ಜಗತ್ತು ಭಾರತವನ್ನು ಮತ್ತು ಅದರ ಜನರನ್ನು ಗೌರವಿಸುತ್ತದೆ. ಆದರೆ ಪ್ರಚಾರದ ಸ್ಟಂಟ್ ಮತ್ತು ಅಸಮರ್ಥತೆಯಿಂದ, ಮೋದಿ ಜಾಗತಿಕವಾಗಿ ಗೌರವವನ್ನು ಕಳೆದುಕೊಳ್ಳುತ್ತಿದ್ದಾರೆ,” ಎಂದು ಬರೆದುಕೊಂಡಿದ್ದಾರೆ.

@er_tugay_ ಎಂಬ ಇನ್ನೋರ್ವ ಎಕ್ಸ್‌ ಬಳಕೆದಾರರೂ ಇದೇ ವಿಡಿಯೋವನ್ನು ಹಂಚಿಕೊಂಡಿದ್ದು, “ಪ್ಯಾರಿಸ್‌ನಲ್ಲಿ ನಡೆದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಶೃಂಗಸಭೆಯಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಪ್ರಧಾನಿ ಮೋದಿಯವರನ್ನು ನಿರ್ಲಕ್ಷಿಸಿದರು. ಪ್ರಧಾನಿ ಮೋದಿ ಹಸ್ತಲಾಘವ ಮಾಡಲು ಎರಡು ಬಾರಿ ಕೈ ಚಾಚಿದರು,” ಎಂದು ಬರೆದುಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಡಲಾದ ಪ್ರತಿಪಾದನೆಯನ್ನು ಪರಿಶೀಲಿಸಿಸಲು ‘AI Summit 2025’ ಎಂಬ ಕೀ ವರ್ಡ್‌ಗಳನ್ನು ಬಳಸಿ ಯೂಟ್ಯೂಬ್‌ ಸರ್ಚ್ ಮಾಡಿದಾಗ, ಹಲವು ವಿಡಿಯೋಗಳು ಲಭ್ಯವಾಗಿವೆ. ಇದರಲ್ಲಿ ಸುದ್ದಿ ಸಂಸ್ಥೆ ‘ಎಪಿ’ಯಲ್ಲಿ ಎಐ ಶೃಂಗಸಭೆಯ 2 ಗಂಟೆ 30 ನಿಮಿಷಗಳ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದೆ. ಇದರಲ್ಲಿ ವೈರಲ್‌ ಆದ ದೃಶ್ಯಗಳೂ ಇವೆ.

ಇದಕ್ಕೂ ಮೊದಲಿನ ದೈಶ್ಯಗಳನ್ನು ನೋಡಿದಾಗ, ಈ ಶೃಂಗ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯಲ್‌ ಮ್ಯಾಕ್ರನ್‌ ಒಟ್ಟಾಗಿ ಬರುವುದು ಕಾಣಿಸುತ್ತದೆ. ವಿಡಿಯೋವನ್ನು ಸರಿಯಾಗಿ ಗಮನಿಸಿದಾಗ ಒಟ್ಟಾಗಿ ಬಂದ ನಾಯಕರು ಅದಾಗಲೇ ಅಲ್ಲಿ ಆಸೀನರಾಗಿದ್ದ ವಿವಿಧ ದೇಶಗಳ ಅಧ್ಯಕ್ಷರುಗಳು, ಪ್ರತಿನಿಧಿಗಳ ಕುಶಲೋಪರಿ ನಡೆಸುವುದನ್ನು ಕಾಣಬಹುದು.

ಇಬ್ಬರೂ ಒಟ್ಟಾಗಿ ಬಂದಿದ್ದರಿಂದ ಹೊಸದಾಗಿ ಮತ್ತೆ ಹಸ್ತಲಾಘವ ನಡೆಸಿಲ್ಲ ಎಂದು ತಿಳಿಯುತ್ತದೆ. ವಿಡಿಯೋದಲ್ಲಿ 8 ನಿಮಷ 39 ಸೆಕೆಂಡ್‌ನಿಂದ ಇಬ್ಬರೂ ನಾಯಕರು ಒಟ್ಟಾಗಿ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದನ್ನು ಕಾಣಬಹುದು.

‘ಎಐ ಶೃಂಗಸಭೆಯಲ್ಲಿ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯಲ್‌ ಮ್ಯಾಕ್ರನ್‌ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಹಸ್ತಲಾಘವ ನೀಡಿಲ್ಲ. ಈ ಮೂಲಕ ಮೋದಿಯವರನ್ನು ನಿರ್ಲಕ್ಷಿಸಲಾಗಿದೆ’ ಎಂಬ ಆರೋಪವು ದಾರಿ ತಪ್ಪಿಸುವಂಥಹದ್ದು. ವಾಸ್ತವವಾಗಿ ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಇಬ್ಬರೂ ನಾಯಕರು ಜತೆಯಾಗಿ ಆಗಮಿಸಿದ್ದಾರೆ. ಈ ಕಾರಣಕ್ಕೆ ಮತ್ತೆ ಕೈ ಕುಲುಕಿಲ್ಲ ಎಂಬುದು ವಾಸ್ತವ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ರಾ ಜಸ್​ಪ್ರಿತ್ ಬುಮ್ರಾ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights