FACT CHECK | ನ್ಯೂಜಿಲೆಂಡ್ ಸರ್ಕಾರ ಎಲ್ಲಾ ಮಸೀದಿಗಳನ್ನು ಬಂದ್‌ ಮಾಡಿಸಿದೆಯೇ?

ನ್ಯೂಜಿಲೆಂಡ್ ಸರ್ಕಾರ ಎಲ್ಲಾ ಮಸೀದಿಗಳನ್ನು ಮುಚ್ಚಲು ಆದೇಶಿಸಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ  ವ್ಯಾಪಕವಾಗಿ ಹರಡುತ್ತಿದೆ. ಈ ಸುದ್ದಿಯನ್ನು ಕೆಲವು ಗುಂಪುಗಳು, ವಿಶೇಷವಾಗಿ ಬಲಪಂಥೀಯ ರಾಜಕೀಯ ಒಲವು ಹೊಂದಿರುವ ಫೇಸ್‌ಬುಕ್ ಗುಂಪು ಮತ್ತು ವಾಟ್ಸಾಪ್‌ಗಳ ಮೂಲಕ ಹಂಚಿಕೊಳ್ಳಲಾಗುತ್ತಿದೆ. ಈ ಸಂದೇಶದ ಜೊತೆಗೆ ವಿದೇಶಗಳು ಮಸೀದಿಗಳನ್ನು ಮುಚ್ಚಲು ಕಾನೂನನ್ನು ಜಾರಿಗೆ ತರುತ್ತವೆ, ಆದರೆ ಭಾರತದಲ್ಲಿ ಮಾತ್ರ ಇದು ಸಾಧ್ಯವಿಲ್ಲ ಎಂದು ಹಲವರು ಬರೆದುಕೊಳ್ಳುತ್ತಿದ್ದಾರೆ.

ನ್ಯೂಜಿಲೆಂಡ್ ಸರ್ಕಾರ ಮುಸ್ಲಿಮ್ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ವಿವಿಧ ಕೀ ವರ್ಡ್‌ಗಳನ್ನು ಬಳಸಿಕೊಂಡು ಈ ಕುರಿತು ಯಾವುದಾದರು ವರದಿಗಳು ಪ್ರಕಟವಾಗಿವೆಯೇ ಎಂದು ಸರ್ಚ್‌ ಮಾಡಿದಾಗ, ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ ವರದಿಗಳು ಕಂಡು ಬಂದಿಲ್ಲ.

ಈ ಕುರಿತು ಮತ್ತಷ್ಟು ಮಾಹಿತಿಗಾಗಿ ವಿವಿಧ ರೀತಿಯ ಕೀ ವರ್ಡ್‌ಗಳನ್ನು ಬಳಸಿ ಸರ್ಚ್ ಮಾಡಿದಾಗ, 20 ಮಾರ್ಚ್‌ 2019ರಂದು ದ ನ್ಯೂಜಿಲ್ಯಾಂಡ್‌ ಹೆರಾಲ್ಡ್‌ ಪತ್ರಿಕೆ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ. ಇದರಲ್ಲಿ ಭಯೋತ್ಪಾದಕ ದಾಳಿಯಲ್ಲಿ 50 ಜನರು ಸಾವನ್ನಪ್ಪಿದ ಒಂದು ವಾರದ ನಂತರ ಕ್ರೈಸ್ಟ್‌ಚರ್ಚ್ ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆ ನಡೆಯಲಿದೆ ಎಂಬ ವರದಿ ಲಭ್ಯವಾಗಿದೆ. ಶಸ್ತ್ರಸಜ್ಜಿತ ಭಯೋತ್ಪಾದಕನೊಬ್ಬ 42 ಮಂದಿ ಆರಾಧಕರನ್ನು ಗುಂಡಿಕ್ಕಿ ಕೊಂದ ಒಂದು ವಾರದ ನಂತರ, ಕ್ರೈಸ್ಟ್‌ಚರ್ಚ್‌ನ ಅಲ್ ನೂರ್ ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆ ನಡೆಸುವುದಾಗಿ ಇಸ್ಲಾಮಿಕ್ ನಾಯಕರು ಹೇಳಿರುವ ಕುರಿತು ಈ ವರದಿಯಲ್ಲಿ ಉಲ್ಲೇಖಿಸಿರುವುದು ಕಂಡು ಬಂದಿದೆ.

ಈ ಬಗ್ಗೆ ನ್ಯೂಜಿಲ್ಯಾಂಡ್‌ನ RNZ ಮಾಧ್ಯಮ ಕೂಡ ವರದಿಯನ್ನು ಮಾಡಿದ್ದು, ಇದರಲ್ಲಿ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಭದ್ರತಾ ಕ್ರಮಗಳಿಗಾಗಿ ಪೊಲೀಸರು ಮಸೀದಿಗಳನ್ನು ಕೆಲವು ದಿನಗಳ ಕಾಲ ಮುಚ್ಚಲು ಕೇಳಿಕೊಂಡಿದ್ದಾರೆ ಎಂದು ತಿಳದು ಬಂದಿದೆ. ಇಲ್ಲಿ ಎಲ್ಲಿಯೂ ನ್ಯೂಜಿಲ್ಯಾಂಡ್‌ ಸರ್ಕಾರ ಮಸೀದಿಗಳನ್ನು ನ್ಯೂಜಿಲ್ಯಾಂಡ್‌  ಸರ್ಕಾರ ಶಾಶ್ವತವಾಗಿ ಮಸೀದಿ ಬಂದ್‌ ಮಾಡಲು ಹೇಳಿದೆ ಎಂಬ ಅಂಶ ಎಲ್ಲಿಯೂ ಉಲ್ಲೇಖವಾಗಿಲ್ಲ. ಹೀಗಾಗಿ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್‌ ಆಗಿರುವ ಪೋಸ್ಟ್‌ ಸಂಪೂರ್ಣವಾಗಿ ಸುಳ್ಳಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ನ್ಯೂಜಿಲ್ಯಾಂಡ್‌ ಸರ್ಕಾರ ತನ್ನ ದೇಶದಲ್ಲಿರುವ ಎಲ್ಲಾ ಮಸೀದಿಗಳನ್ನು ಮುಚ್ಚಿಸಲು ಆದೇಶವನ್ನು ನೀಡಿದೆ ಎಂಬುದು ಸಂಪೂರ್ಣವಾಗಿ ಸುಳ್ಳು. ವೈರಲ್‌ ಆಗುತ್ತಿರುವ ಪೋಸ್ಟ್‌ 2019ರಲ್ಲಿ ಭಯೋತ್ಪಾದನಾ ದಾಳಿಯ ನಂತರ ಭದ್ರತಾ ದೃಷ್ಟಿಯಿಂದ ತಾತ್ಕಾಲಿಕವಾಗಿ ಮಸೀದಿಯನ್ನು ಬಂದ್‌ ಮಾಡಲು ಪೊಲೀಸರು ಮನವಿ ಮಾಡಿದ್ದಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಗಾಂಧಿ ಪ್ರತಿಮೆಗೆ ಯಾರೋ ಹಾಕಿದ್ದ ದುಡ್ಡನ್ನು ತೆಗೆದು ಜೇಬಿನಲ್ಲಿ ಇಟ್ಟುಕೊಂಡ್ರಾ ರಾಹುಲ್ ಗಾಂಧಿ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights