ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕುಸಿದುಬಿದ್ದ ನೀರಿನ ಟ್ಯಾಂಕ್‌! ತಪ್ಪಿದ ದುರಂತ

ಹಳೆಯದಾಗಿದ್ದ ನೀರಿನ ಟ್ಯಾಂಕ್​ವೊಂದು ಕುಸಿದುಬಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ನಗರದಲ್ಲಿರುವ ತಾಲ್ಲೂಕು ಕಚೇರಿ ಹಿಂಭಾಗದಲ್ಲಿದ್ದ 25ನೇ ವಾರ್ಡ್​ನ ಚನ್ನಿಪುರಮೋಳೆ ಹೊಸಬಡಾವಣೆಯಲ್ಲಿ ಬೆಳಗಿನ ಜಾವ 3ಗಂಟೆಗೆ ಈ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.

ಅಕ್ಕಪಕ್ಕದ ಮನೆಗಳ ಮೇಲೆ ಕುಸಿದುಬಿದ್ದಿದ್ದರೆ ಪ್ರಾಣಹಾನಿ ಸಂಭವಿಸುತ್ತಿತ್ತು. ಜೊತೆಗೆ ಹಗಲಿನ ವೇಳೆ ಈ ಘಟನೆ ನಡೆದಿದ್ದರೂ ಭಾರೀ ಅನಾಹುತವೇ ಸಂಭವಿಸುತ್ತಿತ್ತು.

50 ಸಾವಿರ ಸಾಮರ್ಥ್ಯದ ಈ ನೀರಿನ ಟ್ಯಾಂಕ್ ಕೆಲ ವರ್ಷಗಳಿಂದ ಶಿಥಿಲಗೊಂಡಿತ್ತು. ಹೀಗಿದ್ದರೂ ಇದಕ್ಕೆ ನೀರು ತುಂಬಿಸಿ ಸರಬರಾಜು ಮಾಡಲಾಗುತ್ತಿತ್ತು. ನಿನ್ನೆ ರಾತ್ರಿಯೂ ಸಹ ನಗರಸಭಾ ಸಿಬ್ಬಂದಿ ಈ ಟ್ಯಾಂಕ್​ಗೆ ನೀರು ತುಂಬಿಸಿದ್ದರು.

ಶಿಥಿಲಗೊಂಡಿರುವ ಈ ನೀರಿನ ಟ್ಯಾಂಕ್ ಅನ್ನು ಕೆಡವಿಹಾಕುವಂತೆ ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ, ನಗರಸಭಾ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಇಷ್ಟೇ ಅಲ್ಲದೆ ಎರಡು ವರ್ಷಗಳ ಹಿಂದೆ ಸ್ಥಳೀಯರ ದೂರಿನ ಮೇರೆಗೆ ಆಗಿನ  ಜಿಲ್ಲಾ ನ್ಯಾಯಾಧೀಶ ಬಸವರಾಜು ಹಾಗು ಕಾನೂನು  ಸೇವೆಗಳ ಸದಸ್ಯ ಕಾರ್ಯದರ್ಶಿಯು ಆಗಿದ್ದ ನ್ಯಾಯಾಧೀಶರಾದ ವಿಶಾಲಾಕ್ಷಿ ಅವರು  ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.

ಶಿಥಿಲಗೊಂಡಿರುವ ಈ ನೀರಿನ ಟ್ಯಾಂಕ್ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಸ್ಯ ವಹಿಸಿದ್ದರು. ಇವರ ಈ ಬೇಜವಾಬ್ದಾರಿತನ ಒಂದು ಅನಾಹುತಕ್ಕೆ ಕಾರಣವಾಗುತ್ತಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights