ಆರೋಪಿಗಳನ್ನು ಸ್ಥಳಾಂತರ ಮಾಡಿದ್ದು ಸರ್ಕಾರದ ಎಡಬಿಡಂಗಿತನ: ಎಚ್ಡಿಕೆ ಟಾಂಗ್
ನಮ್ಮದು ಸಣ್ಣ ರಾಜಕಾರಣ ಎಂದು ದೂಷಿಸುವ ಬಿಜೆಪಿ ಸರ್ಕಾರ ರಾಮನಗರದ ಜೈಲಿನಿಂದ ಪಾದರಾಯನಪುರ ಗಲಭೆ ಪ್ರಕರಣದ ಆರೋಪಿಗಳನ್ನು ಈ ಮೊದಲೇ ಬೆಂಗಳೂರಿಗೆ ಸ್ಥಳಾಂತರಿಸಿದ್ದರೆ ಸರ್ಕಾರಕ್ಕೆ ಮರ್ಯಾದೆ ಉಳಿಯುತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಗರನ್ನು ಕುಟುಕಿದ್ದಾರೆ.
ಬಿಜೆಪಿ ಸರ್ಕಾರ ರಾಮನಗರದ ಜೈಲಿನಿಂದ ಆರೋಪಿಗಳನ್ನು ಬೆಂಗಳೂರಿಗೆ ಸ್ಥಳಾಂತರಿಸಿ ಯೂ-ಟರ್ನ್ ತೆಗೆದುಕೊಂಡಿದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ.
ಸಚಿವ ಜಗದೀಶ್ ಶೆಟ್ಟರ್ ವಿರುದ್ಧ ತಿರುಗೇಟು ನೀಡಿರುವ ಕುಮಾರಸ್ವಾಮಿ, ರಾಮನಗರಕ್ಕೆ ಶಿಫ್ಟ್ ಮಾಡಲಾದ ಗಲಭೆ ಪ್ರಕರಣದ ಆರೋಪಿಗಳ ವಿಚಾರದಲ್ಲಿ ತಾವು ರಾಜಕಾರಣ ಮಾಡುತ್ತಿದ್ದೇನೆ ಎಂದು ಆರೋಪಿಸುವ ಶೆಟ್ಟರ್ ಕೂಡ ಹಿಂದೊಮ್ಮೆ ಮುಖ್ಯಮಂತ್ರಿಯಾಗಿದ್ದವರು. ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲದವರಂತೆ ಮಾತನಾಡುವುದನ್ನು ಬಿಟ್ಟು ತೆಪ್ಪಗಿರಬೇಕು ಎಂದಿದ್ದಾರೆ.
ಜಗದೀಶ್ ಶೆಟ್ಟರ್ ಅವರೇ, ಪಾದರಾಯನಪುರ ಗಲಭೆಕೋರರನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡುವ ವಿಷಯದಲ್ಲಿ ಎಡಬಿಡಂಗಿತನ ಮತ್ತು ರಾಜಕಾರಣ ಮಾಡಿದ್ದು ನಿಮ್ಮದೇ ಬಿಜೆಪಿ ಸರ್ಕಾರ ಎಂಬುದು ನಿಮಗೆ ಗೊತ್ತಿಲ್ಲವೇ? ಎಂದು ಎಚ್ ಡಿಕೆ ಪ್ರಶ್ನಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ, ರಾಮನಗರ ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟಿಸಿ ಬಿಜೆಪಿ ಸರ್ಕಾರ ಸಾಧಿಸಿದ್ದಾದರೂ ಏನನ್ನು? ರೋಗ ನಿಯಂತ್ರಿಸಬೇಕಾದ ಸರ್ಕಾರವೇ ರೋಗ ಹಂಚಿದ್ದು ಸರ್ಕಾರದ ವೈಫಲ್ಯ ಅಲ್ಲದೆ ಮತ್ತೇನು? ನಿಮ್ಮದು ಸಣ್ಣ ರಾಜಕಾರಣ. ನನ್ನದಲ್ಲ ಎಂದಿದ್ದಾರೆ.