ಈ ವಾರ 1 ಲಕ್ಷ ಕೋವಿಡ್-19 ಪರೀಕ್ಷೆ ನಡೆಸಲು ದೆಹಲಿ ಸರ್ಕಾರ ಸಿದ್ಧತೆ
ಕೊರೊನ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಇದನ್ನು ತಡೆಯುವ ತಂತ್ರವಾಗಿ, ಸೋಂಕು ಹೆಚ್ಚು ದಾಖಲಾಗಿರುವ ಪ್ರದೇಶಗಳಲ್ಲಿ ಈ ವಾರ ಕನಿಷ್ಠ 1 ಲಕ್ಷ ಕೋವಿಡ್-19 ಪರೀಕ್ಷೆ ನಡೆಸಲು ದೆಹಲಿ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸಾಂಕ್ರಾಮಿಕ ತಡೆಯಲು ದೆಹಲಿ ಮುಖ್ಯಮಂತ್ರಿ ಘೋಷಿಸಿರುವ ಐದು ಅಂಶಗಳ ಯೋಜನೆಯಲ್ಲಿ ಇದೂ ಒಂದು. ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿಯ ಪ್ರಕಾರ ಸೋಮವಾರ ರಾತ್ರಿ 9 ಘಂಟೆಯವರೆಗೂ ದೇಶದಾದ್ಯಂತ 1,01,068 ಪರೀಕ್ಷೆಗಳನ್ನು ಮಾಡಲಾಗಿದೆ.
ಹೆಚ್ಚು ರೋಗಿಗಳಿಗೆ ಚಿಕಿತ್ಸೆ ಕೊಡಬಹುದಾದ ಪ್ರತ್ಯೇಕ ಕೇಂದ್ರಗಳನ್ನು ಸಿದ್ಧ ಪಡಿಸಲು ಕಾರ್ಯಪ್ರವೃತ್ತರಾಗಿರುವ ಬಗ್ಗೆ ಕೂಡ ದೆಹಲಿ ಸರ್ಕಾರ ತಿಳಿಸಿದೆ.
ದಕ್ಷಿಣ ಕೊರಿಯಾ ಸರ್ಕಾರ ಮಾಡಿದಂತೆ ವೈರಸ್ ಹರಡವುದನ್ನು ತಗ್ಗಿಸುವುದಕ್ಕೆ ಪರೀಕ್ಷೆಗಳನ್ನು ಹೆಚ್ಚಿಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. “ನಾವು ಹೆಚ್ಚೆಚ್ಚು ಪರೀಕ್ಷೆ ಮಾಡದಂತೆ ಅದು ಹರಡುವುದನ್ನು ಯಶಸ್ವಿಯಾಗಿ ತಡೆಯುವುದಕ್ಕೆ ಸಾಧ್ಯವಾಗುತ್ತದೆ” ಎಂದಿದ್ದಾರೆ ಕೇಜ್ರಿವಾಲ್.
ಮಾರ್ಚ್ 25ರವರೆಗೆ ದಿನಕ್ಕೆ 100 ರಿಂದ 125 ಪರೀಕ್ಷೆ, ಎಪ್ರಿಲ್ 1 ರಿಂದ ದಿನಕ್ಕೆ 500 ಮತ್ತು ಈಗ ದಿನಕ್ಕೆ ಸುಮಾರು 1000 ಪರೀಕ್ಷೆಗಳನ್ನು ದೆಹಲಿ ಸರ್ಕಾರ ಮಾಡುತ್ತಿರುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯಲ್ಲಿ ಇಲ್ಲಿಯವರೆಗೂ 523 ಸೋಂಕಿನ ಪ್ರಕರಣಗಳು ದಾಖಲಾಗಿವೆ.