ಒಳ್ಳೆ ಸುದ್ದಿ – ಅರ್ಧದಷ್ಟು ಬಾರ್ಗಳನ್ನು ಮುಚ್ಚಲು ಆಂಧ್ರ ಸರ್ಕಾರ ನಿರ್ಧಾರ
ಆಂಧ್ರ ಪ್ರದೇಶದ ಸಿಎಂ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರು ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಹಲವು ಮಹತ್ತರ ಬದಲಾವಣೆಗಳನ್ನು ತರುತ್ತಿದ್ದಾರೆ. ಈಗ ರಾಜ್ಯದಲ್ಲಿ ಅರ್ಧದಷ್ಟು ಬಾರ್ಗಳನ್ನು ಮುಚ್ಚಲು ಆಂಧ್ರ ಸರ್ಕಾರ ಮುಂದಾಗಿದೆ.
ಚುನಾವಣೆ ಸಂದರ್ಭದಲ್ಲಿ ಜಗನ್ ಅವರು ಮುಂದಿನ 5 ವರ್ಷಗಳಲ್ಲಿ ರಾಜ್ಯದಲ್ಲಿ ಮದ್ಯ ಸಂಪೂರ್ಣವಾಗಿ ನಿಷೇಧ ಮಾಡುವ ಭರವಸೆ ನೀಡಿದ್ದರು. ಈ ಹಿನ್ನೆಲೆ ಈಗಾಗಲೇ ರಾಜ್ಯ ಸರ್ಕಾರ ಶೇ.20ರಷ್ಟು ಮದ್ಯದಂಗಡಿಗಳನ್ನು ಮುಚ್ಚಿದೆ. ಅಲ್ಲದೆ ಹೊಸ ವರ್ಷದಿಂದ ರಾಜ್ಯದಲ್ಲಿನ ಅರ್ಧದಷ್ಟು ಬಾರ್ಗಳ ಮುಚ್ಚಲಾಗುತ್ತದೆ. ಹಾಗೆಯೇ ಬಾರ್ ಕೆಲಸದ ಅವಧಿಯನ್ನೂ ಕೂಡ ಕಡಿಮೆ ಮಾಡುವುದಾಗಿ ಸರ್ಕಾರ ತಿಳಿಸಿದೆ.
ಗುರುವಾರ ನಡೆದ ಸಭೆಯಲ್ಲಿ ಈ ಮಹತ್ತರ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಬಾರ್ಗಳ ಸಂಖ್ಯೆ ಕಡಿಮೆ ಮಾಡಲಿದ್ದೇವೆ. ಬಾರ್ಗಳ ಕೆಲಸದ ಅವಧಿಯನ್ನು ಕೂಡ ಕಡಿಮೆ ಮಾಡಲಿದ್ದೇವೆ. ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿದ ತಕ್ಷಣವೇ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿ, 2020ರ ಜನವರಿ 1ರಂದು ಈ ಕುರಿತು ಸರ್ಕಾರದ ಪರಿಷ್ಕೃತ ಆದೇಶ ಜಾರಿಯಾಗಲಿದೆ ಎಂದರು.
ಪ್ರಸ್ತುತವಾಗಿ ಆಂಧ್ರಪ್ರದೇಶದಲ್ಲಿ 839 ಬಾರ್ಗಳಿವೆ. ಅವುಗಳಲ್ಲಿ 420 ಬಾರ್ಗಳನ್ನು ಮುಚ್ಚಲಾಗುತ್ತದೆ. ಬಾರ್ಗಳ ಕೆಲಸದ ಅವಧಿ ಬೆಳಗ್ಗೆ 10 ರಿಂದ ರಾತ್ರಿ 12 ರವರೆಗೆ ಇತ್ತು. ಆದರೆ ಈ ಅವಧಿಯನ್ನು ಬೆಳಗ್ಗೆ 11 ಗಂಟೆಯಿಂದ ರಾತ್ರಿ 10ರವರೆಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಜೊತೆಗೆ ಜನವರಿಯಿಂದ ಬಾರ್ಗಳ ಪರವಾನಗಿ ಶುಲ್ಕವನ್ನು ಹೆಚ್ಚಿಸುವ ಬಗ್ಗೆ ಆಂಧ್ರ ಸರ್ಕಾರ ನಿರ್ಧರಿಸಿದೆ. ಒಂದು ವೇಳೆ ಆಂಧ್ರದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧಗೊಂಡರೆ ರಾಜ್ಯದ ಬೊಕ್ಕಸಕ್ಕೆ ಶೇ.9 ಆದಾಯ ನಷ್ಟವಾಗಲಿದೆ.
ಹಾಗೆಯೇ ಯಾವ ಪ್ರದೇಶದಲ್ಲಿ ಸ್ಥಳೀಯರು ಮದ್ಯದಂಗಡಿ ಬಗ್ಗೆ ಆಕ್ಷೇಪಿಸುವುದಿಲ್ಲವೋ ಅಲ್ಲಿ ಮಾತ್ರ ಮದ್ಯದಂಗಡಿಗಳಿಗೆ ಅನುಮತಿ ನೀಡುವಂತೆ ಆಂಧ್ರ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.