ಕನ್ನಡದ ಮೊದಲ ವಾಕ್ಚಿತ್ರದ ನಟಿ ಎಸ್. ಕೆ. ಪದ್ಮಾದೇವಿ ಇನ್ನಿಲ್ಲ…!
ಕನ್ನಡದಲ್ಲಿ ಸೆಟ್ಟೇರಿದ ಮೊದಲ ವಾಕ್ಚಿತ್ರ `ಭಕ್ತಧ್ರುವ’ (1934)ದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಎಸ್. ಕೆ. ಪದ್ಮಾದೇವ ಇನ್ನಿಲ್ಲ.
ಅವರಿಗೆ 95 ವರ್ಷ ವಯಸ್ಸಾಗಿತ್ತು. ಬೆಂಗಳೂರು ಹುಟ್ಟೂರು. ಬಳ್ಳಾರಿ ರಾಘವಾಚಾರ್ಯರ ಮೂಲಕ ರಂಗಭೂಮಿ ಪ್ರವೇಶಿಸಿದವರು. ಹೆಚ್.ಎಲ್.ಎನ್.ಸಿಂಹ ಅವರ ನಾಟಕ ಕಂಪೆನಿಯಲ್ಲಿ ಅಭಿನಯಿಸಿದರು. ಸ್ವಂತ ನಾಟಕ ಸಂಸ್ಥೆಯನ್ನು ಕಟ್ಟಿದರು. ‘ಸಂಸಾರನೌಕ’ (1936) ಹೆಸರು ತಂದು ಕೊಟ್ಟ ಚಿತ್ರ.
ಈ ಚಿತ್ರದಲ್ಲಿ ನಾಲ್ಕು ಹಾಡುಗಳನ್ನು ಹಾಡಿದರು. ಒಂದು ಹಾಡನ್ನು ಸ್ವತಃ ಇವರೇ ವೀಣೆ ನುಡಿಸಿಕೊಂಡು ಹಾಡಿದ್ದರು. ‘ವಸಂತಸೇನ’, ‘ಭಕ್ತ ಸುಧಾಮ’, ‘ಜಾತಕ ಫಲ’ ಚಿತ್ರಗಳಲ್ಲಿಯೂ ನಟಿಸಿದರು. ‘ಭಕ್ತಸುಧಾಮ’ದಲ್ಲಿ ಮಧುಗಿರಿ ಮೀನಾಕ್ಷಿ ಎಂದು ಹೆಸರು ಬದಲಾಯಿಸಿಕೊಂಡರು. ಎರಡು ತೆಲುಗು ಚಿತ್ರಗಳಲ್ಲಿಯೂ ಅಭಿನಯಿಸಿದರು. ರಂಗಭೂಮಿಯಲ್ಲೇ ತೊಡಗಿಕೊಂಡು ಬಹಳ ಕಾಲ ಚಲನಚಿತ್ರದ ಅಭಿನಯ ನಿಲ್ಲಿಸಿದರು. ‘ಮುಕ್ತಿ’, ‘ಅಮರ ಮಧುರ ಪ್ರೇಮ’, ‘ಸಂಕ್ರಾಂತಿ’ ಚಿತ್ರಗಳಲ್ಲಿ ಅಭಿನಯಿಸಿದರು.
ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಕ್ರೌರ್ಯ’ ಚಿತ್ರದ ರೇಣುಕಮ್ಮ ಮುರಗೊಡು ಅವರ ಪಾತ್ರಕ್ಕೆ ಕಂಠದಾನ ಮಾಡಿದರು. ಮಗ ನಂದಕಿಶೋರ್ ನಿರ್ದೇಶಿಸಿದ ‘ಕಿರಣ’ ಟೆಲಿ ಫಿಲಂನಲ್ಲಿ ಅಜ್ಜಿ ಪಾತ್ರ ಮಾಡಿದರು. ಆಕಾಶವಾಣಿಯಲ್ಲಿ ಅನೇಕ ವರ್ಷಗಳು ಕೆಲಸ ಮಾಡಿದ ಪದ್ಮಾದೇವಿಯವರು ಆ ಮಾಧ್ಯಮದಲ್ಲಿಯೂ ಹೆಸರು ಮಾಡಿದವರು.