ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕಮಗಳೂರು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಾಂಗವಾಗಿ ನಡೆಯುತ್ತಿದ್ದು, ಸಂಘ ಪರಿವಾರದ ಬೆದರಿಕೆಗೆ ಸೊಪ್ಪು ಹಾಕದೇ ಯಶಸ್ವಿಯಾಗಿ ಸಮ್ಮೇಳನ ಮಾಡಿಯೇ ತೀರುವುದಾಗಿ ಜಿಲ್ಲ ಕನ್ನಡ ಸಾಹಿತ್ಯ ಪರಿಷತ್‌ ಪಣ ತೊಟ್ಟಿದೆ.

ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಹೋರಾಟಗಾರ ಮತ್ತು ಸಾಹಿತಿ ಕಲ್ಕುಳಿ ವಿಠಲ ಹೆಗಡೆಯವರ ಆಯ್ಕೆಯನ್ನು ವಿರೋಧಿಸಿ ಸಚಿವ ಸಿ.ಟಿ ರವಿ ನೇತೃತ್ವದಲ್ಲಿ ಸಂಘಪರಿವಾರ ಕ್ಯಾತೆ ತೆಗೆದಿತ್ತು. ಮೆರವಣಿಗೆ ಮಾಡಲು ಬಿಡುವುದಿಲ್ಲ, ಶೃಂಗೇರಿ ಬಂದ್‌ ಮಾಡುತ್ತೇವೆ ಎಂದು ಬೆದರಿಕೆ ಹಾಕಿತ್ತು. ಅಲ್ಲದೇ ಸಂಘಪರಿವಾರದ ಆದೇಶಕ್ಕೆ ಮಣಿದಿದ್ದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಸಮ್ಮೇಳನಕ್ಕೆ ಹಣ ಬಿಡುಗಡೆ ಮಾಡಿರಲಿಲ್ಲ. ಜಿಲ್ಲಾಡಳಿತ ಅನುಮತಿಯನ್ನೇ ನಿರಾಕರಿಸಿತ್ತು. ಪೊಲೀಸರು ಬ್ಯಾನರ್‌ ಬಂಟಿಂಗ್ಸ್‌ಗಳನ್ನು ಕಿತ್ತು ಹಾಕಿ ಮೆರವಣಿಗೆಗೆ ನಿಷೇಧ ಹೇರಿದ್ದರು. ಉಪನಿರ್ದೇಶಕರು ಶಿಕ್ಷಕರು ಮತ್ತು ಉಪನ್ಯಾಸಕರಿಗೆ ನೀಡಿದ್ದ ಓಓಡಿಯನ್ನು ರದ್ದುಗೊಳಿಸಿದ್ದರು.

ಇಷ್ಟೆಲ್ಲಾ ಅಡ್ಡಿ ಆಂತಕಗಳಿದ್ದರೂ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕುಂದೂರು ಶ್ರೀನಿವಾಸ್‌ರವರು ಒಂಚೂರು ಜಗ್ಗಿರಲಿಲ್ಲ. ಸಮ್ಮೇಳಾನಾಧ್ಯಕ್ಷರ ಹೆಸರು ಸರ್ವರ ಸಮ್ಮತಿಯೊಂದಿಗೆ ಕಾರ್ಯಕಾರಿ ಸಮಿತಿಯಲ್ಲಿ ಅವಿರೋಧವಾಗಿ ಅಂಗೀಕಾರಗೊಂಡಿದೆ. ಅಲ್ಲದೇ ಶೃಂಗೇರಿಯಲ್ಲಿ ಸಮ್ಮೇಳನ ನಡೆಯುತ್ತಿದ್ದು ಅದಕ್ಕೆ ಕಲ್ಕುಳಿ ವಿಠಲ ಹೆಗಡೆಯವರು ಸಂಪೂರ್ಣ ಅರ್ಹ ವ್ಯಕ್ತಿಗಳಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಸ್ವಾಯುತ್ತ ಸಂಸ್ಥೆಯಾಗಿದ್ದು ಅದು ಬದ್ಧತೆಯನ್ನು ಪ್ರದರ್ಶಿಸಲಿದೆ ಎಂದು ಘೋಷಿಸಿದ್ದರು.

ಅಡ್ಡಿ ಆತಂಕಗಳನ್ನು ಧಿಕ್ಕರಿಸಿ ಸಮ್ಮೇಳನ ನಡೆಸುತ್ತೇವೆ. ಪರಿಷತ್ತು ಹಣ ನೀಡದಿದ್ದರೆ ಏನಂತೆ, ನಮ್ಮ ಕೈಯಿಂದ, ಜನರಿಂದ ಹಣ ಸಂಗ್ರಹಿಸಿ ಕಾರ್ಯಕ್ರಮ ನಡೆಸುತ್ತಿವೆ. ಸಾಹಿತ್ಯದಲ್ಲಿ ವಿಚಾರ ಬೇಧ ಸಲ್ಲದು. ನಮ್ಮ ಮೇಲಿನ ದಾಳಿ ಪ್ರಜಾಪ್ರಭುತ್ವವನ್ನು ಅಣಕಿಸುವಂತಿದೆ, ಇದಕ್ಕೆ ನಾವು ಬಗ್ಗುವುದಿಲ್ಲ ಎಂದು ಅವರು ಸಮ್ಮೇಳನ ನಡೆಸಿಯೇ ತೀರಿದ್ದಾರೆ.

ಅದರಂತೆ ರಾಜ್ಯದ್ಯಂತ ಸಮಾನ ಮನಸ್ಕರು, ಕನ್ನಡಪ್ರೇಮಿಗಳು ದೇಣಿಗೆ ನೀಡಿ ಸಮ್ಮೇಳನ ನಡೆಯಲು ಅನುವು ಮಾಡಿಕೊಟ್ಟಿದ್ದಾರೆ. ಜಿಲ್ಲಾ ಸಮ್ಮೇಳನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನರು, ಕನ್ನಡ ಪ್ರೇಮಿಗಳು ಭಾಗವಹಿಸಿದ್ದಾರೆ.

ಇಂದು ಬೆಳಿಗ್ಗೆ ಮೆರವಣಿಗೆಗೆ ಪೊಲೀಸರು ಅಸಹಕಾರ ತೋರಿದ್ದರಿಂದ ಗಲಾಟೆಗೆ ಆಸ್ಪದ ನೀಡಬಾರದೆಂದು ಕಾರಿನಲ್ಲಿಯೇ ಚಿಕ್ಕಮಗಳೂರು ಸುತ್ತಾ ಅಧ್ಯಕ್ಷರ ಮೆರವಣಿಗೆ ನಡೆಸಿ ಶಾರದ ಮಠಕ್ಕೆ ಕರೆತರಲಾಯಿತು. ಅಭಿಮಾನಿಗಳನ್ನು ಅಧ್ಯಕ್ಷರನ್ನು ಹೊತ್ತು ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದರು. ನಾಡಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಪಾಟೀಲ, ಪ್ರಸನ್ನ ಹೆಗ್ಗೋಡು, ಕಡಿದಾಳು ಶಾಮಣ್ಣ, ಕೆ.ಎಲ್‌ ಅಶೋಕ್‌, ದೇವರಾಜ್‌ ಕೊಪ್ಪ ಸೇರಿದಂತೆ ನಾಡಿನ ಹಲವಾರು ಸಾಹಿತಿ ಚಿಂತಕರು ಸಿ.ಟಿ ರವಿಯ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿ ಜಿಲ್ಲಾ ಕಸಾಪದ ನಡೆಗೆ ಬೆಂಬಲ ನೀಡಿದ್ದರು.

ರಾಜ್ಯದ ಗಮನ ಸೆಳೆದಿದ್ದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಇಂದು ಯಶಸ್ವಿಯಾಗಿ ಆರಂಭವಾಗಿದ್ದು, ಯಶಸ್ವಿಯಾಗಿ ನಡೆಯುವ ಸೂಚನೆ ನೀಡಿದೆ. ಕನ್ನಡ ಪ್ರೇಮಿಗಳ ವಿರುದ್ಧ ನಿರ್ಧಾರ ತೆಗೆದುಕೊಂಡು ಸಮ್ಮೇಳನಕ್ಕೆ ಅಡ್ಡಿವುಂಟುಮಾಡಲು ಪ್ರಯತ್ನಿಸಿದ್ದ ಸಿ.ಟಿ ರವಿ ಪರಿವಾರಕ್ಕೆ ಮುಖಭಂಗವಾಗಿದೆ.