ನೆರೆ ವೀಕ್ಷಣೆ ವೇಳೆ ದೋಣಿ ಮಗುಚಿ ನೀರಿಗೆ ಬಿದ್ದ ಬಿಜೆಪಿ ಸಂಸದ ರಾಮ್ ಕೃಪಾಲ್ ಯಾದವ್….
ಬಿಹಾರದ ಮಸೌರಿಯಲ್ಲಿ ಪ್ರವಾಹ ಪರಿಸ್ಥಿಯನ್ನು ಪರಿಶೀಲಿಸಲು ಬಿಜೆಪಿ ಸಂಸದ ರಾಮ್ ಕೃಪಾಲ್ ಯಾದವ್ ತರೆಳಿದ್ದರು. ಈ ವೇಳೆ ನೆರೆ ವೀಕ್ಷಣೆ ಮಾಡುತ್ತಿದ್ದಾಗ ಸಂಸದರಿದ್ದ ದೋಣಿ ಮಗುಚಿ ಬಿದ್ದಿದ್ದು, ತಕ್ಷಣ ಸ್ಥಳದಲ್ಲಿದ್ದವರು ಅವರನ್ನು ರಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.
ಬಿಹಾರದಲ್ಲಿ ರೌದ್ರಾವಾತಾರ ತೋರುತ್ತಿರುವ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಲ್ಬಣಿಸಿದ್ದು, ಬುಧವಾರ ಪಾಟ್ನಾದಲ್ಲಿನ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ರಾಮ್ ಕೃಪಾಲ್ ಯಾದವ್ ಹೋಗಿದ್ದರು. ಈ ವೇಳೆ ಅವರು ಪ್ರಯಾಣಿಸುತ್ತಿದ್ದ ದೋಣಿ ಮಗುಚಿ ಬಿದ್ದು, ಕೆಲ ಸಮಯ ಆತಂಕದ ವಾತಾವರಣ ಸ್ಥಳದಲ್ಲಿ ನಿರ್ಮಾಣಗೊಂಡಿತ್ತು. ಆಗ ಸ್ಥಳೀಯರು ತಕ್ಷಣ ಸಂಸದರ ನೆರವಿಗೆ ಧಾವಿಸಿ ರಕ್ಷಿಸಿದರು.
ಸ್ಥಳದಲ್ಲಿ ರಕ್ಷಣಾ ದೋಣಿ ಇರದ ಹಿನ್ನೆಲೆ ಸಂಸದರು, ಕೆಲ ಬೆಂಬಲಿಗರು ಹಾಗೂ ಸ್ಥಳೀಯರು ನಾಡ ದೋಣಿಯಲ್ಲಿ ನೆರೆ ವೀಕ್ಷಣೆಗೆ ತೆರೆಳಿದ್ದರು. ಈ ವೇಳೆ ಮಾರ್ಗ ಮಧ್ಯ ದೋಣಿ ಆಯ ತಪ್ಪಿ ನೀರಿಗೆ ಮಗುಚಿ ಬಿದ್ದು ಅದರಲ್ಲಿದ್ದವರು ನೀರಿನಲ್ಲಿ ಮುಳುಗಿ ಸಂಕಷ್ಟಕ್ಕೆ ಸಿಲುಕಿದರು. ಆದರೆ ತಕ್ಷಣ ಎಲ್ಲರನ್ನೂ ರಕ್ಷಣೆ ಮಾಡಿದ್ದಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಂಸದರ ದೋಣಿ ಮಗುಚಿ ಬೀಳುತ್ತಿರುವ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಇಡೀ ಬಿಹಾರ ರಾಜ್ಯ ಅಕ್ಷಶಃ ತತ್ತರಿಸಿ ಹೋಗಿದೆ. ಮಳೆಗೆ ಇಡೀ ಪಾಟ್ನಾ ಜಲಾವೃತಗೊಂಡಿದ್ದು, ಪ್ರಮುಖ ರಸ್ತೆಗಳಲ್ಲಿ ಆಳೆತ್ತರದವರೆಗೂ ನೀರು ನಿಂತಿದೆ.
ವರಣನ ಆರ್ಭಟಕ್ಕೆ ಸಾವಿಗೀಡಾದವರ ಸಂಖ್ಯೆ 42ಕ್ಕೇ ಏರಿದ್ದು, ಲಕ್ಷಾಂತರ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಎನ್ಡಿಆರ್ಎಫ್ ತಂಡ ರಕ್ಷಣಾ ಕಾರ್ಯವನ್ನು ಮುಂದುವರಿಸಿದ್ದು, ಭಾರತೀಯ ವಾಯುಸೇನಾ ಪಡೆ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಜನರ ರಕ್ಷಣೆ ಜೊತೆಗೆ ಸಂತ್ರಸ್ತರಿಗೆ ಹೆಲಿಕಾಪ್ಟರ್ ಮೂಲಕ ಆಹಾರ ತಲುಪಿಸುವ ಕಾರ್ಯದಲ್ಲಿ ತೊಡಗಿದೆ.