ಪೌರತ್ವ ಕಾಯ್ದೆಯೊಳಗಿನ ಹುಳುಕುಗಳು ಮುಂದೆ ಹಿಂದೂಗಳನ್ನೇ ಭಾದಿಸಲಿವೆ..!

ಭಾರತ ಸರಕಾರವು ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆಯು ರಕ್ಷಿಸಲು ಬಯಸಿರುವ ವಿದೇಶಗಳಲ್ಲಿರುವ ಸಮುದಾಯಗಳ ವಿರುದ್ಧ ಆ ದೇಶಗಳಲ್ಲಿ ಹಿಂಸಾಚಾರವನ್ನು ಭುಗಿಲೆಬ್ಬಿಸಿದರೆ, ಏನಾದೀತು? ಈ ಪ್ರಶ್ನೆಯನ್ನು ಕೇಳಿದ್ದಾರೆ ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್‍ನ ಅಂತರರಾಷ್ಟ್ರೀಯ ನಿರ್ದೇಶಕ ಸಂಜೊಯ್ ಹಜಾರಿಕಾ.

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ)ಯು ನೆರೆಯ ಮೂರು ರಾಷ್ಟ್ರಗಳಲ್ಲಿ ‘ದೌರ್ಜನ್ಯ’ಕ್ಕೆ ಒಳಗಾಗಿರುವ, ಆದರೆ ಈ ತನಕ ನಿರಾಶ್ರಿತರೆಂದು ಘೋಷಿಸಲಾಗದಿರುವ ಐದು ಮುಸ್ಲಿಮೇತರ ಸಮುದಾಯಗಳಿಗೆ ಪೌರತ್ವ ನೀಡಲು ಬಯಸುತ್ತದೆ.

‘ನಿರಾಶ್ರಿತ’ ಎಂಬ ಅಭಿದಾನವು ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದಿರುವ ಒಂದು ರಾಜಕೀಯ ಸ್ಥಾನಮಾನವನ್ನು ಜನರಿಗೆ ನೀಡುತ್ತದೆ. ಆದರೆ, ಧಾರ್ಮಿಕ, ರಾಜಕೀಯ, ಭಾಷೆ, ಜನಾಂಗೀಯ ದೌರ್ಜನ್ಯ ಎದುರಿಸುತ್ತಿರುವ ನಿರಾಶ್ರಿತರನ್ನು ರಕ್ಷಿಸುವ ಹೊಣೆಯನ್ನು ಸರಕಾರಗಳಿಗೆ ಕಡ್ಡಾಯಗೊಳಿಸುವ ಜಿನೇವಾ ಒಪ್ಪಂದಕ್ಕೆ ಸಹಿಹಾಕಿದ ದೇಶಗಳಲ್ಲಿ ಭಾರತ ಸೇರಿಲ್ಲ. ದೌರ್ಜನ್ಯದ ಪ್ರಮಾಣವನ್ನು ಹೇಗೆ ನಿರ್ಧಾರ ಮಾಡಲಾಗಿದೆ ಅಥವಾ ಹೇಗೆ ನಿರ್ಧಾರ ಮಾಡಲಾಗುವುದು ಎಂಬ ಬಗ್ಗೆ ಸಿಎಎಯಲ್ಲಿ ಯಾವುದೇ ಸ್ಪಷ್ಟತೆಯಿಲ್ಲ.

ಈ ಹಿನ್ನೆಲೆಯಲ್ಲಿ ಅಸ್ಸಾಂ ಮತ್ತು ಈಶಾನ್ಯದ ನೆರೆಹೊರೆಯ ರಾಜ್ಯಗಳಲ್ಲಿ ಅಂತಹ ಪ್ರಮಾಣದ ಹಿಂಸಾಚಾರ ಏಕೆ ಭುಗಿಲೆದ್ದಿತು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ರಾಷ್ಟ್ರೀಯ ಪೌರತ್ವ ನೋಂದಣಿ (ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್- ಎನ್‍ಆರ್‍ಸಿ)ಯು ಅಸ್ಸಾಂನಲ್ಲಿ 19 ಲಕ್ಷ “ಹೊರಗಿನ” ಜನರನ್ನು “ಗುರುತಿಸಿದರಿಂದ” ಮೊದಲೇ ಅಲ್ಲಿ ಜನರ ಸಿಟ್ಟು ಕುದಿಯುತ್ತಿತ್ತು. ಹೀಗೆ ಗುರುತಿಸಲಾದವರಲ್ಲಿ ಹೆಚ್ಚಿನವರು ಹಿಂದುಗಳಾಗಿದ್ದು, ಮುಸ್ಲಿಮರ, ಸ್ಥಳೀಯ ಆದಿವಾಸಿ ಸಮುದಾಯಗಳು ಮತ್ತು ಗೂರ್ಖಾಗಳು ಸೇರಿದಂತೆ ಇತರ ಸಮುದಾಯಗಳವರ ಸಂಖ್ಯೆ ತೀರಾ ಚಿಕ್ಕದಾಗಿತ್ತು. ಈ “ಬೇಡವಾದವರ” ಪಟ್ಟಿಯನ್ನು ಒಪ್ಪಲು ಸಾಧ್ಯವಿಲ್ಲದ ಬಿಜೆಪಿಯು ರಾಷ್ಟ್ರವ್ಯಾಪಿ ಎನ್‍ಆರ್‍ಸಿಯ ಮೊರೆಹೋಯಿತು.

ಪ್ರಶ್ನೆಯೆಂದರೆ, ಅಸ್ಸಾಮಿನ ಈ ಕಾರ್ಯಾಚರಣೆಗೆ ಖರ್ಚಾದ ಹಣ, ಶ್ರಮ, ಸಮಯ ಒತ್ತಟ್ಟಿಗಿರಲಿ, ಅದು ನಾಗರಿಕರಲ್ಲಿ ಉಂಟುಮಾಡಿದ ಆಳವಾದ ಆತಂಕ, ಅದು ಹುಟ್ಟುಹಾಕಿದ ಹತಾಶೆಯ ವಿಷಯವೇನು? ಅಸ್ಸಾಂ ಸರಕಾರವು ಎನ್‍ಆರ್‍ಸಿಯ ಯಾದಿಯನ್ನು ತಿರಸ್ಕರಿಸಲು ಅಧಿಕೃತವಾಗಿ ಸುಪ್ರೀಂಕೋರ್ಟಿನ ಮುಂದೆ ಬಂದಿಲ್ಲ. ಅದು ಆಗುವತನಕ ಆ ಅಧ್ಯಾಯ ಮುಗಿಯುವುದಿಲ್ಲ. ಈ ಹೊರತುಪಡಿಸುವಿಕೆ ಅಥವಾ ತಿರಸ್ಕಾರವನ್ನು ಪ್ರಶ್ನಿಸುವ ಪ್ರಕ್ರಿಯೆಯನ್ನು ಭಾರತೀಯರು ಸೇರಿದಂತೆ ಈ ಯಾದಿಯಲ್ಲಿರುವ 19 ಲಕ್ಷ ಮಂದಿ ಅನುಭವಿಸಲೇಬೇಕಾಗಿದೆ.

ವಿದೇಶೀಯರ ನ್ಯಾಯಮಂಡಳಿ, ನಂತರ ಹೈಕೋರ್ಟ್, ಆ ಬಳಿಕ ಸುಪ್ರೀಂಕೋರ್ಟಿನ ಮೊರೆಹೋಗುವ ಹಿಂಸೆಯನ್ನು ಈ ಜನರು ಅನುಭವಿಸಬೇಕಾಗಿದೆ. (ಇಂತಹ 100ರಷ್ಟು ನ್ಯಾಯಮಂಡಳಿಗಳು ಅಸ್ತಿತ್ವದಲ್ಲಿದ್ದು, ಇನ್ನೂ 200ನ್ನು ಸ್ಥಾಪಿಸಲಾಗುತ್ತಿದೆ.) ತಮ್ಮ ಪೌರತ್ವವನ್ನು ಸಾಬೀತುಪಡಿಸಲು ವಿದೇಶಿಯರ ನ್ಯಾಯಮಂಡಳಿಯ ಮೊರೆಹೋಗಬೇಕಾದ ಭಾರತೀಯರ ಸ್ಥಿತಿಯನ್ನು ಕಲ್ಪಿಸಿನೋಡಿ.

ಈ ಎನ್‍ಆರ್‍ಸಿಯ ಪರ ಭಾರೀ ಬೊಬ್ಬೆ ಹೊಡೆದವರನ್ನು ಈಗ ಹಿಮ್ಮೆಟ್ಟಿಸಿರುವುದೆಂದರೆ, ಪ್ರತ್ಯೇಕಿಸಲಾಗಿರುವ 19 ಲಕ್ಷ ಜನರಲ್ಲಿ ಬಹುಸಂಖ್ಯಾತರು ಹಿಂದೂಗಳಾಗಿರುವುದು. ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಅವರನ್ನು ವಿದೇಶೀಯರು ಎಂದು ಘೋಷಿಸುವಂತಿಲ್ಲ. ಆದರೆ, ಅವರ ಭವಿಷ್ಯ ಅನಿಶ್ಚಿತವಾಗಿದ್ದು, ಹೆಚ್ಚಿನವರಿಗೆ ಕಾನೂನು ನೆರವು ಪಡೆಯುವ ತಾಕತ್ತೂ ಇಲ್ಲ.

ಈ ಕಾರಣದಿಂದಲೇ ಅಸ್ಸಾಮಿನ ಜನರಲ್ಲಿ ಕೋಪವು ಬೂದಿಮುಚ್ಚಿದ ಕೆಂಡದಂತೆ ಒಳಗೆಯೇ ಉರಿಯುತ್ತಿತ್ತು. ಆದುದರಿಂದ ಅಸ್ಸಾಮಿನ ಆತಂಕಗಳಿಗೆ ಪ್ರತಿಸ್ಪಂದಿಸದ ಇನ್ನೊಂದು ಕಾನೂನು ಬಂದಾಗ ಅದು ಮತ್ತೆ ಸ್ಫೋಟಗೊಂಡಿತು. ಮೇಲಾಗಿ ದಶಕಗಳಿಂದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫಘಾನಿಸ್ಥಾನಗಳಿಂದ ಕಾನೂನುಬಾಹಿರವಾಗಿ ಒಳನುಸುಳಿರುವವರಿಗೆ ಪೌರತ್ವ ನೀಡಿದರೆ, ಅದು ಅಸ್ಸಾಮಿನ ಜನಸಂಖ್ಯೆಯ ಸ್ವರೂಪವನ್ನೇ ಬದಲಿಸಿಹಾಕಬಹುದು ಎಂಬ ಭಯವೂ ಇದರೊಂದಿಗೆ ಸೇರಿಕೊಂಡಿದೆ.

ಇನ್ನರ್ ಲೈನ್ ಲಿಮಿಟ್ (ಐಎಲ್‍ಪಿ) ಎಂದು ಕರೆಯಲ್ಪಡುವ ವ್ಯವಸ್ಥೆಯ ಅಡಿಯಲ್ಲಿ ಸ್ವಲ್ಪಮಟ್ಟಿನ ರಕ್ಷಣೆ ಒದಗಿಸುವ ಪ್ರಸ್ತಾಪ ಇದೆ. ಆದರೆ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಆರುಣಾಚಲ ಪ್ರದೇಶದಲ್ಲಿ ದಶಕಗಳಿಂದ ಅಸ್ತಿತ್ವದಲ್ಲಿರುವ ಐಎಲ್‍ಪಿ ಪರಿಣಾಮಕಾರಿಯಲ್ಲ ಎಂದು ಅನುಭವವು ತೋರಿಸಿಕೊಟ್ಟಿದೆ.

ಮೇಘಾಲಯ ಮತ್ತು ಮಿಜೋರಾಂನ ಬುಡಕಟ್ಟು ಹಿತಾಸಕ್ತಿಗಳಿಗೆ ಜನಾಂಗೀಯ, ಸಾಂಸ್ಕೃತಿಕ ಮತ್ತು ರಾಜಕೀಯ ಮೀಸಲಾತಿ ಒದಗಿಸುವ ಕಾನೂನಾಗಿರುವ ಐಎಲ್‍ಪಿಯನ್ನು ಸಂವಿಧಾನದ ಆರನೇ ಪರಿಚ್ಛೇದದಲ್ಲಿ ಬರುವ ಪ್ರದೇಶಗಳ ಜೊತೆಗೆ, ಅಸ್ಸಾಂ ಮತ್ತು ತ್ರಿಪುರದ ಆದಿವಾಸಿ ಪ್ರದೇಶಗಳಿಗೆ ಅನ್ವಯಿಸುವ ಮೂಲಕ ಕೇಂದ್ರವು ಹಗ್ಗದ ಮೇಲಿನ ನಡಿಗೆಗೆ ಯತ್ನಿಸಿದೆ. ಆದರೆ, ಸಂವಿಧಾನದ ಆರನೇ ಪರಿಚ್ಛೇದವು ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮಣಿಪುರಕ್ಕೆ ಅನ್ವಯಿಸುವುದಿಲ್ಲ. ಪರಿಣಾಮವಾಗಿ ಮೊದಲೇ ಸಂಕೀರ್ಣವಾಗಿದ್ದ ಸಮಸ್ಯೆಯು ಇನ್ನಷ್ಟು ಸವಾಲಿನದ್ದಾಗಿದೆ.

ಪತ್ರಕರ್ತ ಹರ್ಷ ಮಂದಾರ್ ಈ ಪ್ರಶ್ನೆಯನ್ನು ಎತ್ತಿದ್ದಾರೆ: ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ಥಾನದಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವ ಲಕ್ಷಾಂತರ ಧಾರ್ಮಿಕ ಅಲ್ಪಸಂಖ್ಯಾತರ- ಹಿಂದೂಗಳು ಮತ್ತು ಇತರ ಸಮುದಾಯಗಳ- ಸಮುದಾಯಗಳ ಸಮಸ್ಯೆಯನ್ನು ಸಿಎಎ ಪರಿಹರಿಸಲು ಬಯಸಿದೆ ಎಂದು ಸರಕಾರ ಹೇಳುತ್ತದೆ. ಆದರೆ, ಇದು ಅವರ ವಿರುದ್ಧ ಇನ್ನಷ್ಟು ದೌರ್ಜನ್ಯ ಮತ್ತು ಹಿಂಸಾಚಾರವನ್ನು ಪ್ರಚೋದಿಸದೆ? ಈ “ರಕ್ಷಣೆಯ ಕಂಬಳಿ”ಯನ್ನು ಅವರು ಹೊದ್ದುಕೊಳ್ಳುವುದಾದರೂ ಹೇಗೆ? ವಿಸ್ತೃತವಾದ ದೀರ್ಘಕಾಲೀನ ಮಾತುಕತೆ ಹಾಗೂ ಸ್ವಾತಂತ್ರ್ಯ, ಸಮಾನತೆ ಮತ್ತು ಒಳಗೊಳ್ಳುವಿಕೆಯ ತ್ರಿವಳಿ ತತ್ವಗಳಿಗೆ ಒತ್ತು ನೀಡುವುದರಿಂದ, ಕಾಲ ಮೀರಿರುವ ಈ ಸಂದರ್ಭದಲ್ಲಿಯೂ ಸಹಾಯವಾಗಬಹುದು ಎಂಬುದು ಅವರ ಅಭಿಪ್ರಾಯ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.