ಬಸವ ನಾಡಿಗೂ ಶ್ರೀಗಳಿಗೆ ಅವಿನಾಭಾವ ಸಂಬಂಧ- ಶ್ರೀಗಳಿಂದ 75ನೇ ಚಾತುರ್ಮಾಸ್ಯಕ್ಕೆ ಬಸವನಾಡು ಆಯ್ಕೆ

ಉಡುಪಿ ಪೇಜಾವರ ಶ್ರೀಗಳಿಗೂ ಬಸವನಾಡಿಗೂ ಎಲ್ಲಿಲ್ಲದ ನಂಟು. ಶ್ರೀಗಳು ತಮ್ಮ 75ನೇ ಚಾತುರ್ಮಾಸ್ಯವನ್ನು ಬಸವನಾಡು ವಿಜಯಪುರದಲ್ಲಿಯೇ ಕೈಗೊಂಡಿದ್ದರು. ಯತಿಗಳ ಬದುಕಿನಲ್ಲಿ ಚಾತುರ್ಮಾಸ್ಯ ಅತೀ ಮಹತ್ವದ ಘಟ್ಟ. ಈ ಚಾತುರ್ಮಾಸ್ಯ ಆಚರಣೆಯಲ್ಲಿ 75ನೇ ಆಚರಣೆ ಅತೀ ಪ್ರಮುಖವಾಗಿರುತ್ತದೆ. ಇಂಥ 75ನೇ ಚಾತುರ್ಮಾಸ್ಯಕ್ಕೆ ಉಡುಪಿ ಪೇಜಾವರ ಶ್ರೀಗಳು ಆಯ್ಕೆ ಮಾಡಿದ್ದು, ಬಸವನಾಡು ವಿಜಯಪುರವನ್ನು. ಇದು ಬಸವನಾಡು ವಿಜಯಪುರ ಜಿಲ್ಲೆಯ ಜನರು ಮತ್ತು ಭಕ್ತರ ಮೇಲಿರುವ ಶ್ರೀಗಳ ಪ್ರೀತಗೆ ಸಾಕ್ಷಿಯಾಗಿದೆ.

 

ವಿಜಯಪುರ ನಗರದಲ್ಲಿ 2008ರಲ್ಲಿ ಶ್ರೀಕೃಷ್ಣ ವಾದಿರಾಜ ಮಠದ ಶಾಖೆಯಲ್ಲಿ ಸ್ಥಾಪಿಸಿದ್ದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು, 01.8.2013 ರಿಂದ 18.09.2013ರ ವರೆಗೆ ತಮ್ಮ 75ನೇ ಚಾತುರ್ಮಾಸ್ಯ ಕೈಗೊಂಡಿದ್ದರು. ಆಗ ಪ್ರತಿದಿನ ಹಲವಾರು ಭಕ್ತರ ಮನೆಗೆ ತೆರಳಿ ಪಾದಪೂಜೆ ಮಾಡಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಶ್ರೀಗಳು ವಿಜಯಪುರ ಜಿಲ್ಲೆಯ ಅರಕೇರಿಯಲ್ಲಿ ದಲಿತರ ಕೇರಿಗಳಿಗೆ ತೆರಳಿ ನಾವೆಲ್ಲ ಒಂದು, ನಾವೆಲ್ಲ ಬಂಧು ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಆಗ, ಕೇರಿಗೆ ಬರಮಾಡಿಕೊಂಡ್ದ ದಲಿತರು ಸ್ವಾಮೀಜಿಗಳ ಈ ನಡೆಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು.

2013ರಲ್ಲಿ ವಿಜಯಪುರಲ್ಲಿ ಶ್ರೀ ಕೃಷ್ಣ ವಾದಿರಾಜ ಮಠದಲ್ಲಿ ಇವರು ಚಾತುರ್ಮಾಸ್ಯ ಕೈಗೊಂಡಿದ್ದಾಗ ಅಪಾರ ಭಕ್ತರ ಮನೆಗೆ ತೆರಳಿ ದರ್ಶನ ನೀಡುವ ಮೂಲಕ ಭಕ್ತರ ಹೃದಯ ಗೆದ್ದಿದ್ದರು. ಅಷ್ಟೇ ಅಲ್ಲ, ನಾನಾ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಪಾಲ್ಗೋಂಡು ಗಮನ ಸೆಳೆದಿದ್ದರು.

2015ರಲ್ಲಿ ವಿಜಯಪುರದಲ್ಲಿದ್ದಾಗ ಉಡುಪಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪ್ರತಿನಿತ್ಯ ತಪ್ಪದೇ ಯೋಗಾಭ್ಯಾಸ ಮಾಡುವ ಮೂಲಕ ವಿಶ್ವಯೋಗ ದಿನಾಚರಣೆಯ ಸಂದೇಶವನ್ನೂ ಸಾರಿದ್ದರು. ಪೇಜಾವರ ಶ್ರೀಗಳು ಇಂಥ ಇಳಿ ವಯಸ್ಸಿನಲ್ಲಿಯೂ ಮಾಡುತ್ತಿದ್ದ ಯೋಗದ ನಾನಾ ಬಂಗಿಗಳು ಎಂಥವರನ್ನೂ ಅಚ್ಚರಿಗೆ ದೂಡಿದ್ದಷ್ಟೇ ಅಲ್ಲ, ಯೋಗದ ಕಡೆಗೆ ಆಕರ್ಷಿತರನ್ನಾಗಿಯೂ ಮಾಡಿತ್ತು.

ಶ್ರೀಗಳು ಆಗಾಗ್ಗೆ ವಿಜಯಪುರ ಜಿಲ್ಲೆಗೆ ಆಗಮಿಸಿ ನಾನಾ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಪಾಲ್ಗೋಳ್ಳುತ್ತಿದ್ದರು. 2018ರ ಡಿಸೆಂಬರ್ ಮಾಸಾಂತ್ಯದಲ್ಲಿ ಕಗ್ಗೊಡಿನಲ್ಲಿ ನಡೆದ ಭಾರತ ವಿಕಾಸ ಸಂಗಮದ ಭಾರತ ಸಂಸ್ಕೃತಿ ಉತ್ಸವದಲ್ಲಿಯೂ ಪಾಲ್ಗೊಂಡಿದ್ದರು. ಅಂದಿನ ಕಾರ್ಯಕ್ರಮದಲ್ಲಿ ಯೋಗಗುರು ಬಾಬಾ ರಾಮದೇವ ಮತ್ತು ಪಂಚಾಚಾರ್ಯ ಶ್ರೀಗಳು ಪಾಲ್ಗೋಂಡಿದ್ದರು. ಅಷ್ಟೇ ಅಲ್ಲ, ಭಾರತದ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಪ್ರೋತ್ಸಾಹಿಸುವ ಇಂಥ ಕಾರ್ಯಕ್ರಮಗಳ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿದ್ದರು.

ವಿಜಯಪುರಕ್ಕೆ ಕೊನೆಯ ಭೇಟಿ
19.10.2019 ರಂದು ಮಹಾರಾಷ್ಟ್ರದಿಂದ ಆಗಮಿಸಿದ್ದ ಪೇಜಾವರ ಶ್ರೀಗಳು ವಿಜಯಪುರದಲ್ಲಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು. ರಾತ್ರಿ ವೇಳೆ ಆಗಮಿಸಿದ ಅವರು, ಸ್ವಲ್ಪ ಕಾಲ ತಂಗಿ ಅದೇ ದಿನ ರಾತ್ರಿ ನೆರೆಯ ಬಾಗಲಕೋಟೆ ಜಿಲ್ಲೆಗೆ ತೆರಳಿದ್ದರು. ಇದು ಉಡುಪಿ ಪೇಜಾವರ ಶ್ರೀಗಳು ವಿಜಯಪುರಕ್ಕೆ ನೀಡಿದ ಕೊನೆಯ ಭೇಟಿಯಾಗಿದೆ.

ಪೇಜಾವರ ಶ್ರೀಗಳು ಆಗಾಗ ವಿಜಯಪುರ ಜಿಲ್ಲೆಗೆ ನೀಡುತ್ತಿದ್ದ ಭೇಟಿ ಅವರ ಅಪಾರ ಭಕ್ತರಲ್ಲಿ ನೋವುಂಟು ಮಾಡಿದೆ. ಶ್ರೀಗಳು ಬಂದಾಗಲೊಮ್ಮೆ ಅವರನ್ನು ತಪ್ಪದೆ ಭೇಟಿ ಮಾಡುತ್ತಿದ್ದ ಹಿರಿಯ ಪತ್ರಕರ್ತ ಗೋಪಾಲ ನಾಯಕ ಮತ್ತು ಶ್ರೀಗಳ ಅಪ್ಪಟ ಭಕ್ತ ಶ್ರೀಹರಿ ಗೊಳಸಂಗಿ ಸ್ವಾಮೀಜಿಗಳು ಇನ್ನಿಲ್ಲ ಎಂಬ ಸುದ್ದಿ ತಿಳಿದು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಶ್ರೀಗಳ ಯೋಗಾಸನದ ಕೆಲ ಫೋಟೋಗಳು :-

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights