ಬಿಜೆಪಿಯ ವರ್ಚುವಲ್ ರ್ಯಾಲಿ, ಕಾಂಗ್ರೆಸ್‌ ಬೂಟಾಟಿಕೆಯ ಟೀಕೆಗಳ ಮಧ್ಯೆ ಕಂಗಾಲಾದ ಭಾರತ!

ಇಡೀ ದೇಶವೇ ಕೊರೊನಾ ಹಾಗೂ ಅದರ ನಿಯಂತ್ರಣಕ್ಕಾಗಿ ಹೇರಲಾದ ಲಾಕ್‌ಡೌನ್‌ನಿಂದಾಗಿ ತತ್ತರಿಸಿ ಹೋಗಿದೆ. ಇದೂ ವರೆಗೂ 2,56,611 ಕೊರೊನಾ ಪ್ರಕರಣಗಳು ದೇಶಾದ್ಯಂತ ದಾಖಲಾಗಿವೆ. ಈ ನಡುವೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತ ಮತ್ತು ಚೀನಾದವರು ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಟೆಸ್ಟ್‌ಗಳನ್ನು ಮಾಡಿದರೆ, ಅಮೆರಿಕಾಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ದಾಖಲಾಗಲಿದೆ ಎಂದು ಹೇಳಿದ್ದಾರೆ.

ಟ್ರಂಪ್‌ ಹೇಳುವ ಮಾತುಗಳು ಸರಿಯಾಗಿಯೂ ಇವೆ. ಇದೂವರೆಗೂ ಭಾರತದಲ್ಲಿ 45 ಲಕ್ಷ ಟೆಸ್ಟ್‌ಗಳನ್ನು ಮಾಡಲಾಗಿದ್ದು, ಈ ಪ್ರಮಾಣದ ಸೋಂಕಿತರು ಪತ್ತೆಯಾಗಿದ್ದಾರೆ. ಬಹುಶಃ ಹೆಚ್ಚು ಟೆಸ್ಟ್‌ಗಳನ್ನು ಮಾಡಿದರೆ, ಹೆಚ್ಚಿನ ಸಂಖ್ಯೆಯ ಸೋಂಕಿತರು ಪತ್ತೆಯಾಗುವುದರಲ್ಲಿ ಅನುಮಾನವೇನೂ ಇಲ್ಲ.

ಆದರೆ, ಈ ದೇಶದ ಪ್ರಭುತ್ವ, ಅಂದರೆ ಸರ್ಕಾರಗಳು ಕೊರೊನಾ ನಿಯಂತ್ರಣಕ್ಕಾಗಿ, ಸೋಂಕಿನ ಪರೀಕ್ಷೆಗಳನ್ನು ನಡೆಸುವುದಕ್ಕಾಗಿ ಹೆಚ್ಚಾಗಿ ಉತ್ಸಾಹ ಹೊಂದಿವೆಯೇ ಎಂದು ನೋಡಿದರೆ ಖಂಡತಾ ಇರಲಾರವು.

ಬದಲಾಗಿ ಬಿಜೆಪಿ  ನೇತೃತ್ವದ ಕೇಂದ್ರ ಸರ್ಕಾರವು ಬಿಜೆಪಿಯೇತರ ಪಕ್ಷಗಳು ರಾಜ್ಯ ಸರ್ಕಾರಗಳನ್ನು ಉರುಳಿಸಲು ಸಂಚುರೂಪಿಸಲು, ರಾಜಕೀಯ ಬೇಳೆ ಬೇಯಿಸಿಕೊಳ್ಳುವ ವರ್ಚುವಲ್ ರ್ಯಾಲಿ (ಆನ್‌ಲೈನ್‌ ಮೂಲಕ ವಿಡಿಯೋ ಭಾಷಣ)ಗಳನ್ನು ಮಾಡುವುದಲ್ಲಿ ನಿರತವಾಗಿದೆ.

ನಿನ್ನೆ (ಭಾನುವಾರ) ಕೇಂದ್ರ ಗೃಹ ಸಚಿತ ಅಮಿತ್‌ ಶಾ, ಬಿಹಾರದಲ್ಲಿ ವರ್ಚುವಲ್‌ ರ್ಯಾಲಿಯನ್ನು ನಡೆಸಿದ್ದಾರೆ. ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ರ್ಯಾಲಿ ನಡೆಸುತ್ತಿರುವುದಕ್ಕೂ, ಬಿಹಾರ ಚುನಾವಣಾ ಅಭಿಯಾನಕ್ಕೂ ಯಾವುದೇ ಸಂಬಂಧವಿಲ್ಲ. ಇದು ಕೊರೊನಾ ವಿರುದ್ಧ ಹೋರಾಡುವುದಕ್ಕಾಗಿ ಜನರೊಂದಿಗೆ ಸಂಪರ್ಕ ಸಾಧಿಸುವ ಉದ್ದೇಶದಿಂದ ಮಾಡಲಾಗಿದೆ ಎಂದು ಅವರು ಸಮೃರ್ಥನೆಯನ್ನೂ ಮಾಡಿಕೊಂಡಿದ್ದಾರೆ. ಅಂದಹಾಗೆ ಬಿಹಾರ ವಿಧಾನಸಭಾ ಚುನಾವಣೆಯ 2020ರ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ನಡೆಯಲಿದೆ.

Amit Shah at Bihar rally: NDA to form govt with 2/3rd majority ...

ಅಮಿತ್‌ ಶಾ ಹೇಳುವಂತೆ ಕೊರೊನಾ ನಿವಾರಣೆಗಾಗಿ ಜನಸಂಪರ್ಕ ಸಾಧಿಸಲು ನಡೆಸಲಾದ ಈ ರ್ಯಾಲಿಯನ್ನು ಉದ್ದೇಶಿಸಿ ಅಮಿತ್‌ ಶಾ ಅವರದ್ದೇ ಭಾಷಣದಲ್ಲಿ ಕೊರೊನಾ ಬಿಕ್ಕಟ್ಟು ಹಾಗೂ ನಿಯಂತ್ರಣ ಕುರಿತ ಹೆಚ್ಚಿನ ಮಾತುಗಳೇ ಇರಲಿಲ್ಲ. ಬದಲಾಗಿ ಅವರು ಇದೂವರೆಗೂ ಮಾಡಿಕೊಂಡು ಬಂದಿದ್ದ ಎಲ್ಲಾ ರಾಜಕೀಯ ರ್ಯಾಲಿಗಳನಲ್ಲಿನ ಮಾತುಗಳೇ ತುಂಬಿದ್ದವು.

ಪ್ರಧಾನಮಂತ್ರಿ ಮೋದಿ ಘೋಷಿಸಿರುವ ಆಯುಷ್ಮಾನ್‌ ಭಾರತವನ್ನು ಉಲ್ಲೇಖಿಸಿ, 50 ಕೋಟಿ ಜನರು ಇದರ ಲಾಭ ಪಡೆಯುತ್ತಿದ್ದಾರೆ ಎಂದು ಹೇಳಿದ್ದನ್ನು ಬಿಟ್ಟರೆ ಕೊರೊನಾ ಸಂಬಂಧಿತ ಯಾವುದೇ ಮಾತುಗಳು ಅಲ್ಲಿರಲಿಲ್ಲ.

ಬಿಹಾರದ ಮೂಲಗಳು ತಿಳಿಸುವಂತೆ ಬಿಹಾರದಲ್ಲಿ ಹೆಚ್ಚಿನ ಕೊರೊನಾ ಟೆಸ್ಟ್‌ಗಳನ್ನು ಮಾಡಲಾಗಿಲ್ಲ. ದೇಶದ್ಯಂತ 45 ಲಕ್ಷ ಟೆಸ್ಟ್‌ಗಳನ್ನು ಮಾಡಲಾಗಿದ್ದರೂ, ಬಿಹಾರದಲ್ಲಿ ಒಂದು ಲಕ್ಷ ಟೆಸ್ಟ್‌ಗಳನ್ನೂ ಮಾಡದೇ ಇರುವುದು. ಅಲ್ಲಿಯ ರಾಜ್ಯ ಸರ್ಕಾರ ಕೊರೊನಾ ವೈರಸ್‌ನ್ನು ನಿಭಾಯಿಸುತ್ತಿರುವ ಪ್ರೌವೃತ್ತಿ ಹೇಗಿದೆ ಎಂಬುದನ್ನು ಸೂಚಿಸುತ್ತದೆ.

ಹೀಗಿರುವ ಸಂದರ್ಭದಲ್ಲಿ ಅಮಿತ್‌ ಶಾ ಭಾಷಣ ಹೀಗಿತ್ತು,  ಮಗಧ ಸಾಮ್ರಾಜ್ಯದಿಂದ ಹಿಡಿದು ಜೆಪಿ ಪ್ರತಿಭಟನೆಗಳು ತುರ್ತುಪರಿಸ್ಥಿತಿ ನಂತರದ ಅವಧಿಯಲ್ಲಿ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸುವಲ್ಲಿ ಭಾರಿ ಪಾತ್ರವಹಿಸಿದ್ದವು. ಬಿಹಾರದ ಜನರು ಸಹ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ್ದಾರೆ. ಯುಎಸ್ಎ ಮತ್ತು ಇಸ್ರೇಲ್ ನಂತರ ತನ್ನ ಗಡಿಗಳನ್ನು ರಕ್ಷಿಸಲು ಸಮರ್ಥವಾಗಿರುವ ಯಾವುದಾದರೂ ದೇಶವಿದ್ದರೆ ಅದು ಭಾರತ ಎಂದು ಇಡೀ ಜಗತ್ತು ಒಪ್ಪುತ್ತದೆ.

Amit Shah addresses 'first virtual rally in history', insists it ...

ಮೋದಿ ನೇತೃತ್ವದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಅವರು ಬಿಹಾರದಲ್ಲಿ ವೈದ್ಯಕೀಯ ಕಾಲೇಜುಗಳು, ಪೈಪ್‌ಲೈನ್‌ಗಳು, ರಸ್ತೆಮಾರ್ಗಗಳು, ನದಿಗಳ ಸ್ವಚ್ಛತೆ, ಸೇತುವೆಗಳು, ಬೋಧ್ ಗಯಾದಲ್ಲಿ ಐಐಎಂ, ಕೇಂದ್ರೀಯ ವಿಶ್ವವಿದ್ಯಾಲಯಗಳು, ದರ್ಬಂಗಾದಲ್ಲಿನ ಏಮ್ಸ್ ಮುಂತಾದವುಗಳನ್ನು ಮಾಡಿ ಸಾಧನೆ ಮಾಡಿದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್‌ ಕುಮಾರ್‌ ನೇತೃತ್ವ ಎನ್‌ಡಿಎ ಸರ್ಕಾರ ಮೂರನೇ ಎರಡರಷ್ಟು ಬಹುಮತದೊಂದಿಗೆ ಜಯಗಳಿಸಲಿದೆ. ಇವು ಕೊರೊನಾ ಸಂದರ್ಭದಲ್ಲಿ ಜನಸಂಪರ್ಕ ಸಾಧಿಸಲು ನಡೆಸಲಾದ ರ್ಯಾಲಿಯಲ್ಲಿ ಅಮಿತ್‌ ಶಾ ಮಾಡಿದ ಭಾಷಣದ ಸಾರಂಶ.

ಆದರೂ, ಅಮಿತ್‌ ಹೇಳಿದ್ದಾರೆ, ಈ ರ್ಯಾಲಿ ರಾಜಕೀಯ ಉದ್ದೇಶಕ್ಕಾಗಿ ಮಾಡಿರುವುದಲ್ಲ ಎಂದು.

ಬಹುಶಃ ರಾಜಕೀಯ ಉದ್ದೇಶವೇ ಇಲ್ಲದಿದ್ದರೆ, ಈ ರ್ಯಾಲಿಯನ್ನು ಮಹಾರಾಷ್ಟ್ರ ಅಥವಾ ತಮಿಳುನಾಡಿನಲ್ಲಿ ಮಾಡಬಾರದಿತ್ತೇಕೆ? ದೇಶದಲ್ಲಿ ಈ ಎರಡೂ ರಾಜ್ಯಗಳಲ್ಲಿಯೇ ಹೆಚ್ಚಿನ ಕೊರೊನಾ ಪೀಡಿತರಿದ್ದಾರೆ. ಆ ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣ ಅಗತ್ಯವಾಗಿದ್ದು, ಅಲ್ಲಿಯ ಜನರ ಸಂಪರ್ಕಕ್ಕಾಗಿ ರ್ಯಾಲಿ ನಡೆಸಬಹುದಿತ್ತಲ್ಲವೇ ಎಂದು ಜನಸಾಮಾನ್ಯರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

ಇತ್ತ ಕಾಂಗ್ರೆಸ್‌ ನಾಯಕರು, ಇಡೀ ದೇಶವೇ ಸಂಕಷ್ಟದಲ್ಲಿರುವಾಗ ಬಿಜೆಪಿ ರಾಜಕೀಯ ಮಾಡುತ್ತಿದೆ. ಜನರು ಸೋಂಕಿನಿಂದ ಸಾಯುತ್ತಿದ್ದರೆ, ಅಮಿತ್ ಶಾ ರಾಜಕೀಯಕ್ಕಾಗಿ ರ್ಯಾಲಿ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಬಿಹಾರದ ಹಲವಾರು ಜನರು ದೇಶದ ವಿವಿದ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಅವರ ಮೆನಗಳಿಗೆ ತಲುಪಿಸಲು ಇವರ ಸರ್ಕಾರಕ್ಕೆ ಮನಸ್ಸಿಲ್ಲ.

ವರ್ಚುವಲ್ ರ್ಯಾಲಿಗಾಗಿ ಬಿಜೆಪಿ ಸುಮಾರು 100 ಕೋಟಿ ರೂ. ಖರ್ಚು ಮಾಡಿದೆ. ಸುಮಾರು ಒಂದು ಲಕ್ಷ ಮೊಬೈಲ್ ಫೋನ್‌ಗಳನ್ನು ಅಮಿತ್‌ ಶಾ ಭಾಷಣ ಕೇಳುವುದಕ್ಕಾಗಿ ವಿತರಿಸಲಾಗಿದೆ. ಇಷ್ಟೆಲ್ಲಾ ಖರ್ಚು ಮಾಡುತ್ತಿರುವ ಸರ್ಕಾರಕ್ಕೆ ವಲಸೆ ಕಾರ್ಮಿಕರಿಗೆ ಉಚಿತ ರೈಲು ವ್ಯವಸ್ಥೆ ಕಲ್ಪಸಿಲು, ಅವರಿಗೆ ಆಹಾರ ನೀಡಲು ಹಣವಿಲ್ಲ. ಆದರೆ, ರ್ಯಾಲಿ ಮಾಡಲು ಹಣವನ್ನು ಸುರಿಯುತ್ತಿದ್ಧಾರೆ.

ಅವರು ತಮ್ಮ ಹಣದ ಶಕ್ತಿಯಿಂದ ಬಿಹಾರದ ಜನರಿಗೆ ಆಮಿಷವೊಡ್ಡಲು ಪ್ರಯತ್ನಿಸುತ್ತಿದ್ದಾರೆ. ಇದು ಅನ್ಯಾಯಕ್ಕೊಳಗಾಗಿರುವ ಬಿಹಾರದ ಜನರಿಗೆ ಅವಮಾನ ಮಾಡಿದಂತಾಗಿದೆ.  ಕಳೆದ ಮೂರು ತಿಂಗಳಲ್ಲಿ ಬಿಹಾರದ ಜನರು ಬ್ರಿಟಿಷ್ ಆಳ್ವಿಕೆಯಲ್ಲಿ ಅನುಭವಿಸಿದಷ್ಟು ತೊಂದರೆ ಅನುಭವಿಸಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರದಲ್ಲಿ ವೈರಸ್ ನಿಯಂತ್ರಣಕ್ಕಾಗಿ ಏನೂ ಮಾಡಿಲ್ಲ. ಅವರು ದೇಶದಲ್ಲಯೇ “ಅತ್ಯಂತ ಅಸಮರ್ಥ” ಮುಖ್ಯಮಂತ್ರಿಯಾಗಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದ್ದಾರೆ.

ಕಾಂಗ್ರೆಸ್‌ ನಾಯಕರು ಹೇಳಿರುವ ಅಷ್ಟು ವಿಚಾರಗಳೂ ಸತ್ಯವೇ. ಆದರೆ, ದೇಶದ ದೊಡ್ಡ ರಾಷ್ಟ್ರೀಯ ಪಕ್ಷವೂ, ವಿರೋಧ ಪಕ್ಷವೂ ಆಗಿರುವ ಕಾಂಗ್ರೆಸ್‌ ಕೊರೊನಾ ಸಂದರ್ಭದಲ್ಲಿ ಮಾಡಿದ್ದಾದರೂ ಏನು? ಅವರೂ ಬಿಜೆಪಿಯಂತದ್ದೇ ರಾಜಕೀಯ ಮಾಡಿದ್ದಾರೆ. ಬರೀ ಟೀಕೆಗಳಿಗಷ್ಟೇ ಸೀಮಿತವಾಗಿದ್ದಾರೆ.  ವಲಸೆ ಕಾರ್ಮಿಕರ ರೈಲು ಪ್ರಯಾಣಕ್ಕೆ ಅಗತ್ಯವಿರುವ ಅಷ್ಟೂ ಮೊತ್ತವನ್ನು ಭರಿಸುವುದಾಗಿ ಘೋಷಿಸಿದ ಕಾಂಗ್ರೆಸ್‌ ಅದನ್ನು ಕೊಡಲಿಲ್ಲ. ಉಚಿತ ಪ್ರಯಾಣ ಎಂಬ ಬಿಜೆಪಿ ಸರ್ಕಾರ ಕೊನೆಗೆ ವಲಸಿಗರನ್ನೇ ದೋಚಿತು.

ಈ ಎರಡೂ ಪಕ್ಷಗಳ ರಾಜಕೀಯ ಮೇಲಾಟದಿಂದಾಗಿ ಇಡೀ ದೇಶದ ಜನರು ಇಂದು ತತ್ತರಿಸಿ ಹೋಗಿದ್ದಾರೆ. ರೈತರು ಬೆಳೆ ಮಾರಾಟವಾಗದೇ, ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಕಾರ್ಮಿಕರು ದುಡಿಮೆಯಿಲ್ಲದೆ ಸಂಕಷ್ಟದಲ್ಲಿದ್ದಾರೆ. ತಮ್ಮೂರುಗಳಿಗೆ ನಡೆದೇ ಹೊರಟಿದ್ದ ಹಾಗೂ ಸರಿಯಾಗಿ ಊರು ತಲುಪದ ಶ್ರಮಿಕ್‌ ಸ್ಪೆಷಲ್‌ ರೈಲುಗಳಲ್ಲಿ ಹೊರಟಿದ್ದ ವಲಸೆ ಕಾರ್ಮಿಕರಲ್ಲಿ ಹಸಿವು ಮತ್ತು ಬಳಲಿಕೆಯಿಂದಾಗಿ 644 ಕಾರ್ಮಿಕರು ಸಾವಿಗೀಡಾಗಿದ್ದಾರೆ.

Migrant worker's health deteriorates on way home, his friend ...

ಈ ಸಾವಿನ ಹೊಣೆಯನ್ನು ಸರ್ಕಾರಗಳೇ ಹೊರಬೇಕು. ಇಂದಿಗೂ ಸಾವಿರಾರು ಜನರು ತಮ್ಮೂರುಗಳ ಹಾದಿ ಹಿಡಿದು ನಡೆಯುತ್ತಿದ್ದಾರೆ. ಹೀಗಿರುವ ಅವರು ಊರುಗಳನ್ನು ತಲುಪಲು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು, ಉಚಿತ ರೈಲುಗಳನ್ನು ಓಡಿಸಲು, ಆಹಾರ ಪೂರೈಕೆ ಮಾಡಲು ವಿಫಲವಾಗಿರುವ ಸರ್ಕಾರ.

ಜನಸಂಪರ್ಕದ ಹೆಸರಿನಲ್ಲಿ ವರ್ಚುವಲ್‌ ರ್ಯಾಲಿ ಮಾಡಿ ಬಿಜೆಪಿ ರಾಜಕೀಯ ಮಾಡುತ್ತಿದೆ. ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ ಬೂಟಾಟಿಕೆಯ ಟೀಕೆಗಳನ್ನು ಮಾಡುವುದಕಷ್ಟೇ ಸೀಮಿತವಾಗಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights