ಬಿಜೆಪಿ ಪಕ್ಷಕ್ಕೂ ಸೇರಿಸಿಕೊಳ್ಳಲಿಲ್ಲ, ಟಿಕೆಟ್ಟೂ ಕೊಡಲಿಲ್ಲ: ಬೇಗ್ ಅಸಹಾಯಕತೆ
ಮೈತ್ರಿ ಸರಕಾರ ಪತನ ಸಂದರ್ಭದಲ್ಲಿ ಬಂದವರಿಗೆಲ್ಲ ಮಣೆ ಹಾಕುವ ಭರವಸೆ ನೀಡಿದ್ದ ಬಿಜೆಪಿ ಇಬ್ಬರ ವಿಚಾರದಲ್ಲಿ ಮಾತು ಮುರಿದಿದೆ. ರಾಣೆಬೆನ್ನೂರಿನಿಂದ ಶಂಕರ್ಗೆ ಕೂಟ್ಟ ಬಿಜೆಪಿ ಇತ್ತ ಶಿವಾಜಿನಗರದಿಂದ ರೋಶನ್ ಬೇಗ್ ಅವರನ್ನು ದೂರವಿಟ್ಟಿದೆ.
ಎಲ್ಲ ಅನರ್ಹರನ್ನೂ ಗುರುವಾರ ಬೆಳಗ್ಗೆ ಪಕ್ಷಕ್ಕೆ ಸೇರಿಸಿಕೊಂಡ ಬಿಜೆಪಿ ರೋಶನ್ ಬೇಗ್ ಅವರನ್ನು ಮಾತ್ರ ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಬೇಗ್ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಅವರ ಮಾತಿಗೆ ಬಿಜೆಪಿ ಹೈಕಮಾಂಡ್ ಕವಡೆ ಕಿಮ್ಮತ್ತನ್ನೂ ನೀಡಲಿಲ್ಲ.
ಪಕ್ಷಕ್ಕೂ ಸೇರಿಸಿಕೊಳ್ಳದೆ, ಟಿಕೆಟ್ಟೂ ನೀಡದ ಬಿಜೆಪಿಯ ಕ್ರಮದಿಂದ ವಿಚಲಿತರಾದ ರೋಶನ್ ಬೇಗ್ ಪಕ್ಷೇತರರಾಗಿ ಕಣಕ್ಕಿಳಿಯುವ ಅನಿವಾರ್ಯ ನಿರ್ಧಾರಕ್ಕೆ ಬಂದಿದ್ದಾರೆ. ಶಿವಾಜಿನಗರದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದ ಹಿನ್ನೆಲೆಯಲ್ಲಿ ಬೇಗ್ ಅವರಿಗೆ ಆ ಮಾರ್ಗವೂ ಬಂದ್ ಆಯಿತು.
ರೋಶನ್ ಬೇಗ್ ಅವರನ್ನು ಪಕ್ಷಕ್ಕೆ ಕರೆತಂದು ಟಿಕೆಟ್ ನೀಡಲು ಯಡಿಯೂರಪ್ಪ ಉತ್ಸುಕರಾಗಿದ್ದರಾದರೂ ಅದಕ್ಕೆ ಬಿಜೆಪಿಯ ವರಿಷ್ಠರು ಒಪ್ಪಿಗೆ ನೀಡಲಿಲ್ಲ. ಅಲ್ಲದೇ ಸ್ಥಳೀಯ ಬಿಜೆಪಿ ಕಾರ್ಯಕರ್ತರಂತೂ ತೀವ್ರ ವಿರೋಧ ವ್ಯಕ್ತಪಟಿಸಿದ್ದರು. ಸಂತೋಷ್ ಅವರ ಬಣ ಬೇಗ್ ಆಗಮನದ ವಿರುದ್ಧ ನಿಂತಿತು.