ಬೈ-ಎಲೆಕ್ಷನ್ ನಲ್ಲಿ ಜಾದು ಮಾಡಿದ ಬಿಜೆಪಿ : ಅಧಿಕ ಕ್ಷೇತ್ರದಲ್ಲಿ ಕಮಲ ಅರಳಲು ಕಾರಣ ಇದೇನಾ..?

ಈ ಉಪಚುನಾವಣೆಯ ಫಲಿತಾಂಶದಿಂದ ಬಿಜೆಪಿ ಸರ್ಕಾರ ಮಾತ್ರವಲ್ಲ, ಸ್ವತಃ ಯಡ್ಯೂರಪ್ಪನವರೇ ಬಿಜೆಪಿಯೊಳಗೆ ಇನ್ನಷ್ಟು ಕಾಲ ಸೇಫ್ ಆಗಿದ್ದಾರೆ. 15 ಕ್ಷೇತ್ರಗಳ ಪೈಕಿ 12ರಲ್ಲಿ ಗೆದ್ದಿರುವ ಬಿಜೆಪಿಯ ಸಂಖ್ಯಾಬಲ ಈಗ 117ಕ್ಕೆ ಏರಿದೆ. ಇನ್ನೂ ಎರಡು ಕ್ಷೇತ್ರಗಳಿಗೆ ಚುನಾವಣೆ ನಡೆಯುವುದು ಬಾಕಿಯಿದ್ದು, ಅಲ್ಲೂ ಗೆದ್ದರೆ ಬಿಜೆಪಿ ಸರ್ಕಾರ ಮೂರೂವರೆ ವರ್ಷ ಅಧಿಕಾರ ನಡೆಸಲು ಯಾವ ಬಾಹ್ಯ ಆತಂಕವೂ ಇರುವುದಿಲ್ಲ. ಆದರೆ ಆ ಮೂರೂವರೆ ವರ್ಷವೂ ಯಡ್ಯೂರಪ್ಪನವರೇ ಸಿಎಂ ಹುದ್ದೆಯಲ್ಲಿರುತ್ತಾರಾ? ಎಂಬ ಪ್ರಶ್ನೆ ಚುನಾವಣೆಗೂ ಮುನ್ನ ಸಾಕಷ್ಟು ಹರಿದಾಡಿತ್ತು. ಟಿಕೆಟ್ ಕೈತಪ್ಪಿದವರ ಲೋಕಲ್ ಭಿನ್ನಮತ ಹಾಗೂ ಸಿಎಂ ಗಾದಿ ಮೇಲೆ ಕಣ್ಣಿಟ್ಟಿದ್ದ ಬಿ.ಎಲ್.ಸಂತೋಷ್ ಬಣದ ಹೈಕಮಾಂಡ್ ಅಸಹಕಾರದ ನಡುವೆಯೂ ಎಲ್ಲರ ನಿರೀಕ್ಷೆ ಸುಳ್ಳು ಮಾಡಿ 12 ಅನರ್ಹ ಶಾಸಕರನ್ನು ಅರ್ಹ ಶಾಸಕರನ್ನಾಗಿ ಪರಿವರ್ತಿಸಲು ಒನ್‍ಮ್ಯಾನ್ ಆರ್ಮಿಯಂತೆ ಯಡ್ಯೂರಪ್ಪ ನಡೆಸಿದ ಸೆಣೆಸಾಟವಿದೆಯಲ್ಲ, ಅದು ಸದ್ಯದ ಮಟ್ಟಿಗೆ ಪಕ್ಷದೊಳಗೆ ಅವರ ಕೈ ಬಲಪಡಿಸಿದೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಹೆಣಗಾಡಿ ಕೈಸುಟ್ಟುಕೊಂಡಿರುವ ಕೇಂದ್ರ ಬಿಜೆಪಿ ನಾಯಕರು ಪ್ರಾದೇಶಿಕ ನಾಯಕತ್ವಗಳಲ್ಲಿ ಅಷ್ಟಾಗಿ ಹಸ್ತಕ್ಷೇಪ ಮಾಡುವ ಸ್ಥಿತಿಯಲ್ಲಿರದ ಸಮಯದಲ್ಲೆ ಯಡ್ಯೂರಪ್ಪನವರು ಬಂಪರ್ ಫಸಲು ತೆಗೆದು ತೋರಿಸಿದ್ದಾರೆ. ಹಾಗಾಗಿ ಹೈಕಮಾಂಡ್ ಕೂಡಾ ತೆಪ್ಪಗಾಗಬೇಕಾಗಿದೆ. ಆದರೆ ಉಪಚುನಾವಣೆಗೆ ಮೊದಲು ಈ ಪರಿಸ್ಥಿತಿ ಇರಲಿಲ್ಲ. ಆಪರೇಷನ್ ಕಮಲದ ಕಸರತ್ತುಗಳು ಶುರುವಾದಾಗಿನಿಂದ, ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು, ಸಂಪುಟ ವಿಸ್ತರಣೆ ಮಾಡಲು ಹೆಜ್ಜೆಹೆಜ್ಜೆಗೂ ತಕರಾರು ತೆಗೆಯುತ್ತಲೇ ಬಂದಿದ್ದ ಹೈಕಮಾಂಡ್ ಕೊನೆಗೆ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಿ ಯಡ್ಯೂರಪ್ಪನವರನ್ನು ಕಟ್ಟಿಹಾಕುವ ಪ್ರಯತ್ನವನ್ನೂ ಮಾಡಿತ್ತು. ಸಾಲದ್ದಕ್ಕೆ ಪ್ರವಾಹಕ್ಕೆ ಪರಿಹಾರ ನೀಡುವಲ್ಲೂ ಕೇಂದ್ರದ ಬಿಜೆಪಿ ಸರ್ಕಾರ ಯಡ್ಯೂರಪ್ಪನವರಿಗೆ ಸಾಕಷ್ಟು ಮುಜುಗರ ಉಂಟಾಗುವಂತೆ ನೋಡಿಕೊಂಡಿತ್ತಲ್ಲದೆ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆಯಲ್ಲೂ ಶಾಕ್ ಕೊಟ್ಟಿತ್ತು. ಇದೆಲ್ಲದರ ಹಿಂದೆ ಕರ್ನಾಟಕದ ಸಿಎಂ ಆಗಬೇಕೆಂಬ ಮಹಾಗನಸು ಹೊತ್ತು ಕೂತಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‍ರ ಹಕೀಕತ್ತುಗಳಿವೆ ಎಂಬ ಮಾತುಗಳು ಕೇಳಿಬಂದಿದ್ದವು.

ಕೊನೆಗೆ ಉಪಚುನಾವಣೆಯ ಅಷ್ಟೂ ಹೊಣೆಯನ್ನು ಯಡ್ಯೂರಪ್ಪನವರ ಹೆಗಲಿಗೇರಿಸಿದ್ದ ದಿಲ್ಲಿ ನಾಯಕರು, ನಿಮ್ಮ ಸರ್ಕಾರ ಉಳಿಯಬೇಕೆಂದಿದ್ದರೆ ಬೇಕಾದಷ್ಟು ಸಂಖ್ಯೆಯ ಎಂಎಲ್‍ಎಗಳನ್ನು ನೀವೇ ಗೆಲ್ಲಿಸಿಕೊಳ್ಳಿ ಎಂದು ಕೈತೊಳೆದುಕೊಂಡಿದ್ದರು. ಇತ್ತ ಅನರ್ಹರ ವಿರುದ್ಧ ಪಕ್ಷದೊಳಗೇ ಬಂಡಾಯ ಭುಗಿಲೇಳುವಂತ ವಾತಾವರಣವನ್ನೂ ಸೃಷ್ಟಿ ಮಾಡಲಾಗಿತ್ತು. ಹುಬ್ಬಳ್ಳಿಯ ಕಾರ್ಯಕರ್ತರ ಸಮಾವೇಶದಲ್ಲಿ ಯಡ್ಯೂರಪ್ಪನವರು ಮಾಡಿದ್ದ ಭಾಷಣದ ವೀಡಿಯೊ ತುಣುಕೇ ಇದಕ್ಕೆ ಸಾಕ್ಷಿ. ಮತ್ತೊಂದು ಕಡೆ, ಹಣದಾಸೆಗೆ ಶಾಸಕ ಸ್ಥಾನ ಮಾರಿಕೊಂಡವರು ಎಂಬ ನೈತಿಕ ಮುಜುಗರಕ್ಕೆ ಈಡಾಗಿದ್ದ ಅನರ್ಹರ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳಲು ಶುರುವಾಗಿತ್ತು. ಇಷ್ಟೆಲ್ಲ ಪ್ರತಿಕೂಲ ಪರಿಸ್ಥಿತಿಗಳನ್ನೂ ಹಿಮ್ಮೆಟ್ಟಿಸಿ ಏಕಾಂಗಿಯಾಗಿ ತಮ್ಮ ಸರ್ಕಾರವನ್ನು ಸೇಫ್ ಮಾಡಿಕೊಂಡಿದ್ದಾರೆ.

ಉತ್ತರ ಕರ್ನಾಟಕದ ಅಷ್ಟೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವಲ್ಲಿ ಯಡ್ಯೂರಪ್ಪನವರ `ಲಿಂಗಾಯತ-ವೀರಶೈವ’ ಸ್ಟೇಟ್‍ಮೆಂಟ್ ಸಾಕಷ್ಟು ಕೆಲಸ ಮಾಡಿದೆ. ಲಿಂಗಾಯತರ ಒಂದೂ ಮತ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗಬಾರದು ಎಂದು ಬಹಿರಂಗವಾಗಿಯೇ ಅವರು ಹೇಳಿಕೆ ಕೊಟ್ಟ ನಂತರ ಸೋಲಿನ ಭೀತಿಯಲ್ಲಿದ್ದ ರಾಣೆಬೆನ್ನೂರು, ಕಾಗವಾಡ, ಅಥಣಿ, ಗೋಕಾಕ್ ಕ್ಷೇತ್ರಗಳು ಸಾರಾಸಗಟಾಗಿ ಬಿಜೆಪಿಗೆ ಒಲಿದಿವೆ. ಆ ಮೂಲಕ ಈಗಲೂ ಲಿಂಗಾಯತ ಓಟ್ ಬ್ಯಾಂಕ್‍ಗೆ ನಾನೇ ಅಧಿಪತಿ ಅನ್ನೋದನ್ನು ಅವರು ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಮಹಾರಾಷ್ಟ್ರವನ್ನು ತನ್ನ ತೆಕ್ಕೆಯಿಂದ ಕಳೆದುಕೊಂಡ ನಂತರ ದೇಶದಲ್ಲಿ ಬಿಜೆಪಿ ಆಳ್ವಿಕೆಯ ಪ್ರಾಂತ್ಯಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಇಂತಹ ಸಂದರ್ಭದಲ್ಲಿ ದೊಡ್ಡ ರಾಜ್ಯಗಳಲ್ಲಿ ಒಂದಾದ, ಅದರಲ್ಲೂ ದಕ್ಷಿಣ ಭಾರತದ ಬಿಜೆಪಿ ಆಳ್ವಿಕೆಯ ಏಕೈಕ ರಾಜ್ಯವಾದ ಕರ್ನಾಟಕದಲ್ಲಿ ಕಿಂಚಿತ್ತೂ ರಿಸ್ಕ್ ತೆಗೆದುಕೊಳ್ಳಲು ಹೈಕಮಾಂಡ್ ಮುಂದಾಗದು. ಸಂಪುಟ ವಿಸ್ತರಣೆಯಲ್ಲಿ ಯಡ್ಯೂರಪ್ಪನವರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಗುವುದು ಮಾತ್ರವಲ್ಲ, ಬಿ.ಎಲ್.ಸಂತೋಷ್ ಆಸೆಗೂ ತಣ್ಣೀರು ಬಿದ್ದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights