ಭಾರತದಲ್ಲಿ ದಾಖಲೆ ಸೃಷ್ಟಿಸಿದ ಕೊರೊನಾ ಸೋಂಕಿತರ ಸಂಖ್ಯೆ : ಒಂದೇ ದಿನಕ್ಕೆ 6,654 ಕೇಸ್!
ದೇಶದಲ್ಲಿ ಕೊರೊನಾ ವೈರಸ್ ಕಾಡ್ಗಿಚ್ಚಿನಂತೆ ಹರಡುತ್ತಿದ್ದು ಪ್ರತಿನಿತ್ಯ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ನಿತ್ಯ ದಾಖಲಾಗುವ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಕಳೆದ 24 ಗಂಟೆಯಲ್ಲಿ ದಾಖಲಾದ ಸೋಂಕಿತರ ಸಂಂಕ್ಯೆ ದಾಖಲೆ ಸೃಷ್ಟಿಸಿದೆ.
ಹೌದು… ಭಾತರದಲ್ಲಿ ಕಳೆದ 24 ಗಂಟೆಗಳಲ್ಲಿ 6654 ಹೊಸ ಪ್ರಕರಣಗಳು ದಾಖಲಾಗಿವೆ. ಈ ಹಿಂದೆಂದು ದಾಖಲಾಗದ ಸಂಖ್ಯೆ ಇದಾಗಿದ್ದು, 137 ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು 1.30 ಲಕ್ಷ ಕೊರೊನಾ ಪಾಸಿಟಿವ್ ದಾಖಲಾಗಿವೆ. ಇವರಲ್ಲಿ 3,720 ಪೀಡಿತರು ಬಲಿಯಾಗಿದ್ದಾರೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಗಮನಾರ್ಹ ಸಂಗತಿಯೆಂದರೇ 1,15,364 ಜನರ ಗಂಟಲು ದ್ರವ ಮಾದರಿಗಳನ್ನು ಕಳೆದ 24 ಗಂಟೆಗಳಲ್ಲಿ ಪರೀಕ್ಷಿಸಲಾಗಿದೆ.
ಸೋಂಕಿತರ ರೇಸ್ ನಲ್ಲಿ ಭಾರತದಲ್ಲಿ ಮಹಾರಾಷ್ಟ್ರವನ್ನು ಕೊರೊನಾ ವೈರಸ್ ಮುಂಣಿಯಲ್ಲಿರಿಸಿದೆ. ಈವರೆಗೆ ಅತೀ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲೇ ದಾಖಲಾಗಿದ್ದು 44,000 ಜನರ ದೇಹವನ್ನು ವೈರಸ್ ಹೊಕ್ಕು ಹೈರಾಣಾಗಿಸಿದೆ. ಮಹಾರಾಷ್ಟ್ರದ ಬಳಿಕ ಎರಡನೇ ಸ್ಥಾನದಲ್ಲಿರುವುದು ತಮುಳುನಾಡು, ಇಲ್ಲಿ 15,512 ಜನ ಕೊರೊನಾ ಪೀಡಿತರಾಗಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 12,910 ವೈರಸ್ ಭಾಧಿತರಿದ್ದು ಮೂರನೇ ಸ್ಥಾನದಲ್ಲಿದೆ. ಸಿಕ್ಕಿಂ ರಾಜ್ಯದಲ್ಲಿ ಒಂದೂ ಪ್ರಕರಣಗಳು ಕಂಡುಬಂದಿರಲಿಲ್ಲ. ಇದೀಗ ದೆಹಲಿಯಿಂದ ಮರಳಿದ ಓರ್ವ ವ್ಯಕ್ತಿಗೆ ಸೋಂಕು ಧೃಡಪಟ್ಟಿದೆ.
ಒಟ್ಟು 1.30 ಲಕ್ಷ ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ 54,385 ಜನರು ಗುಣಮುಖರಾಗಿದ್ದಾರೆ.
ಇನ್ನೂ ಜಗತ್ತಿನಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ವಿಶ್ವದ ದೊಡ್ಡಣ್ಣ ಅಮೆರಿಕಾ ವೈರಸ್ ಗೆ ತತ್ತರಿಸಿ ಹೋಗಿದೆ. ಒಂದೇ ದಿನದಲ್ಲಿ 1,127 ಜನರು ಮೃತಪಟ್ಟಿದ್ದು, ಈವರೆಗೆ ಸಾವಿನ ಸಂಖ್ಯೆ 97 ಸಾವಿರದ ಗಡಿ ದಾಟಿದೆ. ಸೋಂಕಿತರ ಸಂಖ್ಯೆ 16,21,658 ಎನ್ನಲಾಗುತ್ತಿದೆ. ಜಗತ್ತಿನಾದ್ಯಂತ ಕೋವಿಡ್ 19 ಮಹಾಮಾರಿಗೆ 3,43,823 ಜನರು ಬಲಿಯಾಗಿದ್ದು ಸೋಂಕಿತರ ಪ್ರಮಾಣ 54,02,198ಕ್ಕೆ ಏರಿಕೆಯಾಗಿದೆ. ವೈರಾಣುವಿಗೆ ತುತ್ತಾದವರಲ್ಲಿ ಸುಮಾರು 22,47,237 ಜನರು ಗುಣಮುಖರಾಗಿದ್ದಾರೆ.