ಮಧ್ಯಪ್ರದೇಶ: ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಎದುರಾಗಿದೆ ಸಂಕಷ್ಟ!
ಮಧ್ಯಪ್ರದೇಶದಲ್ಲಿ ಕಮಲ್ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ ಬಿಜೆಪಿ ಅಧಿಕಾರಕ್ಕೇರಲು ಕಾರಣವಾದ ಸೂತ್ರದಾರಿ ಜ್ಯೋತಿರಾಧಿತ್ಯ ಸಿಂಧಿಯಾ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಸಿಂಧಿಯಾ ಮಧ್ಯ ಪ್ರದೇಶ ರಾಜಕೀಯದ ಮೇಲೆ ತಮ್ಮ ರಾಜಕೀಯ ಪ್ರಭಾವವನ್ನು ಬೀರಲು ಆರಂಭಿಸಿದ್ದಾರೆ.
ಸಿಂಧಿಯಾ ಅವರ ಬೆಂಬಲಿಗರು ಕ್ಯಾಬಿನೆಟ್ ಸ್ಥಾನಗಳಿಗಾಗಿ ದಂಬಾಲು ಬಿದ್ದಿದ್ದಾರೆ. ಕೊರೊನಾ ಸೋಂಕಿನಿಂದ ರಾಜ್ಯದಲ್ಲಿ 200ಕ್ಕೂ ಹೆಚ್ಚು ಸಾವುಗಳು ಸಂಭವಿಸಿರುವ ಸಂಕಷ್ಟದ ಸಮಯದಲ್ಲಿ ರಾಜ್ಯದ ಮೇಲಿನ ಹಿಡಿತ ಸಾಧಿಸುವುದು ಮುಖ್ಯಮಂತ್ರಿ ಚೌಹಾಣ್ ಅವರಿಗೆ ಕಲ್ಲು-ಮುಳ್ಳುಗಳ ದಾರಿಯಾಗಿ ಎದುರಾಗಿದೆ.
ರಾಜಕೀಯ ಹುದ್ದೆಗಳಿಗಲ್ಲದಿದ್ದರೂ, ರಾಜ್ಯದಲ್ಲಿ ತಮ್ಮ ರಾಜಕೀಯ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಶ್ರಮಿಸುತ್ತಿರುವ ಸಿಂಧಿಯಾ, ಸಧ್ಯ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಪೊಲೀಸರು, ಜಿಲ್ಲಾಧಿಕಾರಿಗಳು ಮತ್ತು ಕೊರೊನಾ ವಾರಿಯರ್ಸ್ಗಳನ್ನು ನಿಯಂತ್ರಿಸುತ್ತಿದ್ದು, ಸರ್ಕಾರದ ನೀತಿ ರೂಪಿಸುವಲ್ಲಿ ತಮ್ಮ ಪ್ರಭಾವದಿಂದಾಗಿ ಗಮನ ಸೆಳೆಯುತ್ತಿದ್ದಾರೆ.

ಏಪ್ರಿಲ್ 29 ರಂದು ರಾಜ್ಯ ಕೃಷಿ ಸಚಿವ ಕಮಲ್ ಪಟೇಲ್ ಅವರಿಗೆ ಇಮೇಲ್ ಮಾಡಿದ್ದ ಸಿಂಧಿಯಾ, ಸಾಸಿವೆ ಬೆಳೆಯನ್ನು ಹೆಚ್ಚು ಉತ್ತೇಜನ ಕೊಡುವಂತೆ ಕೋರಿದ್ದರು. ಅದರ ಮರುದಿನವೇ, ಚೌಹಾನ್ ಸರ್ಕಾರ ಈ ಬಗ್ಗೆ ಪ್ರಕಟಣೆ ಹೊರಡಿಸುವಂತೆ ಒತ್ತಾಯಿಸಿದರು.
ಕೊರೊನಾ ಲಾಕ್ಡೌನ್ನಿಂದಾಗಿ ಗ್ವಾಲಿಯರ್ನಲ್ಲಿ ಒಂದು ಕುಟುಂಬ ಸಿಲುಕೊಂಡಿದೆ ಟ್ವಿಟರ್ ಮೂಲಕ ತಮ್ಮ ಬೆಂಬಲಿಗರು ಮಾಹಿತಿ ಪಡೆದ ಸಿಂಧಿಯಾ, ಮೇ 06 ರಂದು ಜಿಲ್ಲಾಧಿಕಾರಿ ಕೌಶ್ಲೇಂದ್ರ ವಿಕ್ರಮ್ ಸಿಂಗ್ ಅವರಿಗೆ ಕರೆ ಮಾಡಿ ಕುಟುಂಬಕ್ಕೆ ಸಹಾಯ ಮಾಡುವಂತೆ ಹೇಳಿದ್ದರು. ಇದೆಲ್ಲವೂ ರಾಜ್ಯದಲ್ಲಿ ಸಿಂಧಿಯಾ ತನ್ನ ಪ್ರಭಾವವನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ನೆರವಾಗುತ್ತಿವೆ.
ಸಧ್ಯ ಚೌಹಾನ್ ಕ್ಯಾಬಿನೆಟ್ನಲ್ಲಿ ಐವರು ಮಂತ್ರಿಗಳಿದ್ದಾರೆ. ಇವರು ಪ್ರಮಾಣ ವಚನ ಸ್ವೀಕರಿಸಿದ್ದೂ ಬಿಜೆಪಿ ಸರ್ಕಾರ ರಚನೆಯಾದ ಒಂದು ತಿಂಗಳ ನಂತರವೇ. (ಕರ್ನಾಟಕದಲ್ಲಿಯೂ ಇದೇ ರೀತಿಯ ಬಿಜೆಪಿಯೊಳಗಿನ ಸರ್ಕಸ್ ಮುಂದುವರೆದಿದ್ದನ್ನು ಮರೆಯುವಂತಿಲ್ಲ.) ಈ ಐವರು ಮಂತ್ರಿಗಳಲ್ಲಿ ಸಿಂಧಿಯಾ ಬೆಂಬಲಿತ ಇಬ್ಬರು ಮಂತ್ರಿಗಳಿದ್ದಾರೆ. ಸಿಂಧಿಯಾ ಗರಡಿಯಲ್ಲಿದ್ದು ಮಂತ್ರಿಗಿರಿ ಗಿಟ್ಟಿಸಿಕೊಂಡಿರುವ ತುಳಸಿ ಸಿಲಾವತ್ ಮತ್ತು ಗೋವಿಂದ್ ರಜಪೂತ್, ಈ ಇಬ್ಬರೂ ಸಾಕಷ್ಟು ಬೇಡಿಕೆಗಳನ್ನು ಇಟ್ಟಿದ್ದಾರೆ.
ಮೇ 6 ರಂದು ಬಿಜೆಪಿ ರಾಜ್ಯಾಧ್ಯಕ್ಷ ವಿಷ್ಣು ದತ್ ಶರ್ಮಾ ಅವರನ್ನು ಭೇಟಿ ಮಾಡಿದ ಗೋವಿಂದ್ ರಜಪೂತ್, ತಮ್ಮ ಕಮಾಂಡರ್ ಸಿಂಧಿಯಾರನ್ನು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿ ಸೇರಿಸಿಕೊಳ್ಳಬೇಕು ಎಂದು ಬೇಡಿಕೆ ಇಟ್ಟಿದ್ದರು. ಸಿಂಧಿಯಾಜಿ ಕೇಂದ್ರ ಸಚಿವರಾಗಬೇಕೆಂದು ನಾವೆಲ್ಲರೂ ಬಯಸುತ್ತೇವೆ” ಎಂದು ರಜಪೂತ್ ಮಾಧ್ಯಮಗಳ ಮುಂದೆಯೂ ಬಹಿರಂಗವಾಗಿಯೇ ತಿಳಿಸಿದ್ದರು.
ಇದಕ್ಕೂ ಮುಂಚೆಯೇ ಸಿಂಧಿಯಾ ಕ್ಯಾಂಪ್ನಲ್ಲಿರುವ ಪ್ರಭುರಾಮ್ ಚೌಧರಿ ಕೂಡ ರಾಜ್ಯ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ರಾಜ್ಯ ಘಟಕದ ಮುಖ್ಯಸ್ಥ ಶರ್ಮಾ ಅವರನ್ನು ಭೇಟಿ ಮಾಡಿದ್ದರು. ಅದೇ ಕ್ಯಾಂಪ್ನಲ್ಲಿರುವ ಇಮಾರ್ತಿ ದೇವಿ ಅವರು ಶಿವರಾಜ್ ಸಿಂಗ್ ಅವರನ್ನೂ ಭೇಟಿ ಮಾಡಿ ತಮ್ಮ ಕೇಂದ್ರ ಸರ್ಕಾರದ ಕ್ಯಾಬಿನೆಟ್ಗೆ ಸಿಂಧಿಯಾರನ್ನು ಆಯ್ಕೆ ಮಾಡುವಂತೆ ಪ್ರಸ್ತಾಪಿಸಿದ್ದರು.

ಇದೆಲ್ಲದರ ನಡುವೆ, ಹೊಸದಾಗಿ ಆರಂಭವಾಗಿರುವ ಸಿಂಧಿಯಾ-ಚೌಹಾನ್ ಮೈತ್ರಿಕೂಟವು ಬಿಜೆಪಿಯ ಹಿರಿಯ ನಾಯಕರನ್ನು ಸಂಬಾಳಿಕೊಂಡು ಹೋಗಬೇಕಾದ ಸವಾಲನ್ನೂ ಸಹ ಹೊಂದಿದೆ.
ಎಂಟು ಬಾರಿ ಶಾಸಕರಾಗಿರುವ ಮತ್ತು ಕಮಲ್ ನಾಥ್ ಸರ್ಕಾರದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಗೋಪಾಲ್ ಭಾರ್ಗವ್ ಅವರಿಗೆ ಚೌಹಾನ್ ಕ್ಯಾಬಿನೆಟ್ನಲ್ಲಿ ಸ್ಥಾನ ಸಿಕ್ಕಿಲ್ಲ.“ರಾಜಕೀಯ ಬಹಳಷ್ಟು ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ಎರಡು ರೀತಿಯ ರಾಜಕಾರಣಿಗಳಿದ್ದಾರೆ – ಒಬ್ಬರು ಪಕ್ಷದಿಂದ ಪ್ರತಿಯಾಗಿ ಏನನ್ನಾದರೂ ಬಯಸುತ್ತಾರೆ. ಇತರರು ಕೆಲಸದಲ್ಲಿ ಮಾತ್ರ ನಂಬಿಕೆಯಿಟ್ಟಿರುತ್ತಾರೆ. ನಾನು ಎರಡನೇ ಗುಂಪಿಗೆ ಸೇರಿದವನು” ಎಂದು ಭಾರ್ಗವ ಹೇಳಿದ್ದಾರೆ.
ಗೋಪಾಲ್ ಭಾರ್ಗವ್ ಅಲ್ಲದೆ ಜಗದೀಶ್ ದಿಯೋರಾ, ಸೀತಶರಣ್ ಶರ್ಮಾ, ರಾಜೇಂದ್ರ ಶುಕ್ಲಾ, ಕೇದಾರ್ ಶುಕ್ಲಾ, ಯಶೋಧರ ರಾಜೆ ಸಿಂಧಿಯಾ, ಗೌರಿ ಶಂಕರ್ ಬಿಸೆನ್, ಭೂಪೇಂದ್ರ ಸಿಂಗ್ರಂತಹ ಬಿಜೆಪಿಯ ಹಿರಿಯ ಕಟ್ಟಾಳುಗಳೂ ಕ್ಯಾಬಿನೆಟ್ ಸ್ಥಾನವನ್ನು ಬೇಡವೆಂದು ಹೇಳುವ ಸಾಧ್ಯತೆಗಳಿಲ್ಲ. ಇವರೆಲ್ಲರೂ ಈಗಾಗಲೇ ಲಾಕ್ಡೌನ್ಗೂ ಮುಂಚೆಯೇ ಕೇಂದ್ರ ಕಚೇರಿಯಲ್ಲಿ ಸಚಿವ ಸ್ಥಾನಕ್ಕೆ ಪರೋಕ್ಷವಾಗಿ ಅಪ್ಲಿಕೇಷನ್ ಹಾಕಿದ್ದಾರೆ.
ಅದಲ್ಲದೆ, ಕಮಲ್ ನಾಥ್ ಸರ್ಕಾರದಲ್ಲಿ ಕ್ಯಾಬಿನೆಟ್ ಸ್ಥಾನಗಳನ್ನು ನೀಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದೇವೆಂದು ಬಹಿರಂಗವಾಗಿಯೇ ಆಗಿಲ್ ಸಿಂಗ್ ಕನ್ಸಾನಾ ಮತ್ತು ಬಿಸಾಹು ಲಾಲ್ ಸಿಂಗ್ ಒಪ್ಪಿಕೊಂಡಿದ್ದಾರೆ. ಇವರೂ ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಿರಿ ಬಯಸಿದ್ದಾರೆ.
ಜೊತೆಗೆ, ಕಾಂಗ್ರೆಸ್ನಿಂದ ಪಕ್ಷಾಂತರಗೊಂಡ 22 ಶಾಸಕರಲ್ಲಿ ಆರು ಶಾಸಕರು ಕಮಲ್ ನಾಥ್ ಸಂಪುಟದಲ್ಲಿ ಮಂತ್ರಿಗಿರಿ ಅನುಭವಿಸುತ್ತಿದ್ದವರು. ಆ ಕಾರಣದಿಂದಾಗಿ ಚೌಹಾಣ್ ಕ್ಯಾಬಿನೆಟ್ನಲ್ಲಿ ಸಂಧಿಯಾ ಕ್ಯಾಂಪ್ನ 10 ಶಾಸಕರಿಗಿ ಮಂತ್ರಿಗಿರಿ ಕೊಡಬೇಕೆಂಬ ಒಪ್ಪಂದದ ಮೇಲೆ ಸಿಂಧಿಯಾ ಕ್ಯಾಂಪ್ ಬಿಜೆಪಿ ಸೇರಿತ್ತು.
ಈ ಎಲ್ಲಾ ಬೆಳವಣಿಗೆಗಳ ಕಾರಣದಿಂದಾಗಿ ಬಿಜೆಪಿಯ ಮೂಲ ಹಿರಿಯ ನಾಯಕರನ್ನೂ, ಬಿಜೆಪಿ ಸೇರಿರುವ ವಲಸೆ ಶಾಸಕರನ್ನೂ ನಿಭಾಯಿಸಿಕೊಂಡು ಸರ್ಕಾರ ಮುನ್ನಡೆಸು ಸಂಕಷ್ಟ ಕೊರೊನಾ ಬಿಕ್ಕಟ್ಟನ್ನು ಎದುರಿಸುತ್ತಿರುವ ಶಿವರಾಜ್ ಸಿಂಗ್ ಚೌಹಾಣ್ಗೆ ಎದುರಾಗಿದೆ.
ಮೇ ಮೊದಲ ವಾರ ಕ್ಯಾಬಿನೆಟ್ ವಿಸ್ತರಣೆಯಾಗಬೇಕಿತ್ತು. ಆದರೆ, ಕೊರೊನಾ ನೆಪದಿಂದ ಮುಂದೂಡಲಾಗಿದೆ. ಮಧ್ಯ ಪ್ರದೇಶದ ರಾಜಕೀಯದಲ್ಲಿ ಮುಂದೇನಾಗಲಿದೆ ಕಾದುನೋಡಬೇಕಿದೆ.

