ಮಳೆ ಸೃಷ್ಟಿಸಿದ ಅವಾಂತರ : ಕಾಮಗಾರಿ ಕೈಗೆತ್ತಿಕೊಳ್ಳದ ಮಹಾನಗರ ಪಾಲಿಕೆ

ಮಳೆ‌ ನಿಂತರೂ, ಮರದ ಹನಿ‌‌ ನಿಲ್ಲುತ್ತಿಲ್ಲ ಎನ್ನುವ ಮಾತಿದೆ. ಇದು ಹುಬ್ಬಳ್ಳಿಯ ಸಿದ್ದಲಿಂಗೇಶ್ವರ ಕಾಲೋನಿಯ ಜನರಿಗೆ ಸರಿಯಾಗಿ ಅನ್ವಯಿಸುತ್ತೆ. ಪ್ರವಾಹ ಸೃಷ್ಟಿಸಿದ ಅವಾಂತರಕ್ಕೆ ಸಂಪರ್ಕ ರಸ್ತೆ ಕೊಚ್ಚಿಹೋಗಿದೆ. ರಸ್ತೆ ದಾಟಲು ಸ್ಥಳೀಯರು ಪ್ರತಿನಿತ್ಯ ಪರದಾಡುತ್ತಿದ್ದಾರೆ. ರಸ್ತೆದುರಸ್ತಿ ಮಾಡದ ಜಿಲ್ಲಾಡಳಿತ ಹಾಗೂ ‌ಮಹಾನಗರ ಪಾಲಿಕೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಮಳೆ ಸೃಷ್ಟಿಸಿದ ಅವಾಂತರ….
ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕಳೆದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಪ್ರಮಾಣದ ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿತ್ತು.‌ ಎಡೆಬಿಡದೆ ಸುರಿದ ಮಳೆಗೆ ರಸ್ತೆ, ಸೇತುವೆ, ರಾಜ ಕಾಲುವೆಗಳ ತಡೆಗೋಡೆಗಳು ಕೊಚ್ಚಿ ಹೋಗಿದ್ದವು. ಸಿದ್ದಲಿಂಗೇಶ್ವರ ಕಾಲೋನಿ‌ ಬಳಿಯ ರಾಜಕಾಲುವೆ ಕೂಡ ಮಳೆಯಲ್ಲಿ ಕೊಚ್ಚಿ ಹೋಗಿತ್ತು. ಕಾಲುವೆಯ ತಡೆಗೋಡೆಯ ಜೊತೆಗೆ ಡಾಂಬರು ರಸ್ತೆ ಸಂಪೂರ್ಣ ನಾಶವಾಗಿತ್ತು. ರಸ್ತೆ ಪ್ರವಾಹದಲ್ಲಿ ಕೊಚ್ಚಿ ಹೋಗಿ ಸಂಪರ್ಕ ಕಡಿತವಾಗಿದೆ. ಜನರು ಕತ್ತಲಾದರೆ ಇತ್ತ ಬರಲು ಭಯಪಡುತ್ತಾರೆ. ಅಳಿದುಳಿದ ರಸ್ತೆಯೂ ಕುಸಿಯುತ್ತಿರುವುದರಿಂದ ಮತ್ತೇನು ಅನಾಹುತ ಸೃಷ್ಟಿಯಾಗುತ್ತೋ ಎನ್ನುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ರಸ್ತೆ ಅವ್ಯವಸ್ಥೆಯಿಂದ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ವಾಹನ ಸಂಚರಿಸಲೂ ಆಗದಷ್ಟು ಸಂಕೀರ್ಣ ಮಾರ್ಗವಿದ್ದು ವಾಹನ ಸವಾರರೂ ಪರದಾಡುವ ಸ್ಥಿತಿಯಿದೆ. ರಸ್ತೆಗೆ ಅಡ್ಡಲಾಗಿ ಒಂದು ಬ್ಯಾರಿಕೇಡ್ ಹಾಕಿದ್ದನ್ನು ಬಿಟ್ಟರೆ ರಸ್ತೆದುರಸ್ತಿ ಹಾಗೂ ಕಾಲುವೆ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾಗಿಲ್ಲ ಎಂದು ಸ್ಥಳಿಯರು ಆರೋಪಿಸುತ್ತಿದ್ದಾರೆ.‌

ಕಾಮಗಾರಿ ಕೈಗೆತ್ತಿಕೊಳ್ಳದ ಮಹಾನಗರ ಪಾಲಿಕೆ..
ರಸ್ತೆ ಅರ್ಧಭಾಗ ಕೊಚ್ಚಿ ಹೋಗಿರುವುದರಿಂದ ಇನ್ನರ್ಧ ಕುಸಿಯುತ್ತ ಸಾಗಿದೆ. ರಾಜಕಾಲುವೆಯಲ್ಲಿ ಹರಿಯುವ ನೀರು ರಸ್ತೆಯನ್ನು ಹಂತಹಂತವಾಗಿ ಆಪೋಷನ ಪಡೆಯುತ್ತಿದೆ. ರಸ್ತೆಯಲ್ಲಿ ಮಹಿಳೆಯರು, ಮಕ್ಕಳು, ವೃದ್ದರು ಓಡಾಡಲು ಆಗುತ್ತಿಲ್ಲ. ವಾಹನ ಸವಾರರು ಜೀವ ಕೈಲಿ ಹಿಡಿದು ಸಂಚರಿಸಬೇಕಾಗಿದೆ. ರಾಜ ಕಾಲುವೆ ದುರಸ್ತಿ ಮಾಡಬೇಕು. ರಸ್ತೆ ಮರು ನಿರ್ಮಾಣವಾಗಬೇಕು. ರಸ್ತೆ ಪಕ್ಕ ತಡೆಗೋಡೆ ನಿರ್ಮಿಸಿ ಕೊಡಬೇಕೆಂದು ಸ್ಥಳೀಯರು ಹಲವಾರು ಬಾರಿ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದಾರೆ. ಆದ್ರೆ ಯಾವುದೇ ಪ್ರಯೋಜನ ಆಗಿಲ್ಲ ಅತಾರೆ ಇಲ್ಲಿನ ನಾಗರಿಕರು.

ಮಂಪರಿನಲ್ಲಿ ಮಹಾನಗರ ಪಾಲಿಕೆ…
ಏನಾದರೂ ದುರಂತ ಸಂಭವಿಸಿದಾಗಲೇ ಮಹಾನಗರ ಪಾಲಿಕೆ ಎಚ್ಚೆತ್ತುಕೊಳ್ಳೋದು. ಅಲ್ಲಿವರೆಗೆ ಮಂಪರಿನಲ್ಲೇ ಇರುತ್ತೆ ಅನ್ನೋದು ಸ್ಥಳೀಯರ ಆರೋಪ. ಒಟ್ಟಿನಲ್ಲಿ‌ ಮಳೆ ನಿಂತರೂ ಕೂಡ ಇಲ್ಲಿನ ನಿವಾಸಿಗಳ ಗೋಳು ಮಾತ್ರ ತಪ್ಪಿಲ್ಲ. ನೆರೆ ಪರಿಹಾರಕ್ಕೆ ಕೋಟಿಕೋಟಿ ನೆರವು ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ ಪರಿಹಾರ ಕಾಮಗಾರಿ ಚುರುಕುಗೊಳಿಸಲಿ ಎನ್ನುವುದು ಸ್ಥಳೀಯರ ಆಗ್ರಹ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights