‘ಮಾಜಿ ಉಪಮುಖ್ಯಮಂತ್ರಿ ಬಳಿ ನೊಣ ಹೊಡೆಯೋರಿಲ್ಲ’ ಪರಂ ವಿರುದ್ಧ ರಾಜಣ್ಣ ವ್ಯಂಗ್ಯ
‘ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಬಳಿ ಈಗ ನೊಣ ಹೊಡೆಯೋರು ಗತಿಯಿಲ್ಲ’ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಕೆ.ಎನ್. ರಾಜಣ್ಣ ವ್ಯಂಗ್ಯವಾಡಿದ್ದಾರೆ.
ಕೊರಟಗೆರೆ ತಾಲೂಕಿನ ಎಲೆರಾಂಪುರದಲ್ಲಿ ನಡೆದ ಡಿಸಿಸಿ ಬ್ಯಾಂಕ್ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಪರಂ ವಿರುದ್ಧ ವಾಗ್ದಾಳಿ ನಡೆಸಿರುವ ಕೆ.ಎನ್. ರಾಜಣ್ಣ, ಕಾಂಗ್ರೆಸ್ ನಾಯಕ ಪರಮೇಶ್ವರ್ ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಉಪ ಮುಖ್ಯಮಂತ್ರಿ ಪದವಿಗೂ ಏರಿದ್ದರು. ಝೀರೋ ಟ್ರಾಫಿಕ್ ಮಂತ್ರಿಯಾದರು. ಆದರೆ, ಈಗ ಪರಿಸ್ಥಿತಿ ಹೇಗಾಗಿದೆ ಎಂದರೆ ಹಿಂದೂ ಇಲ್ಲ, ಮುಂದೂ ಇಲ್ಲ. ನೊಣ ಹೊಡೆಯೋರು ಗತಿಯಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
“ಕಳೆದ ಚುನಾವಣೆಯಲ್ಲಿ ಪರಮೇಶ್ವರ್ ಗೆಲುವು ಸಾಧಿಸಲು ನಾನು ಸಹಾಯ ಮಾಡಿದ್ದೆ. ಗೆದ್ದ ಆತ ಡಿಸಿಎಂ ಪದವಿಗೆ ಏರಿದ. ಹಿಂದೂ ಮುಂದೂ ಪೊಲೀಸರನ್ನು ಇಟ್ಟುಕೊಂಡ. ಆದರೆ, ಆತನಿಗೆ ಉಪಕಾರ ಸ್ಮರಣೆ ಇಲ್ಲ. ನನ್ನನ್ನೇ ಅಧಿಕಾರದಿಂದ ತೆಗೆಯಲು ಪ್ರಯತ್ನಪಟ್ಟ. ನಾನು ಎಷ್ಟು ಸಹಾಯ ಮಾಡಿದ್ದರೂ ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಿದ್ದ. ಆದರೆ. ಈಗ ಆತನ ಅಧಿಕಾರವೇ ಹೋಗಿದೆ. ನೊಣ ಹೊಡೆಯೋರು ಗತಿ ಇಲ್ಲದಂತಾಗಿದೆ” ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ. ಅಲ್ಲದೆ, ಕಾಂಗ್ರೆಸ್ ನಲ್ಲಿ ಕೆಲ ಲೂಟಿಕೋರರು ಇದ್ದಾರೆ ಎಂದು ಹೆಸರೇಳದೆ ಆರೋಪಿಸಿದ್ದಾರೆ.