ಮೋದಿಯವರ ಬಳಿ ಯಡಿಯೂರಪ್ಪ ಕೊರೊನಾ ಪ್ಯಾಕೇಜ್ ಕೇಳಬೇಕು: ಹೆಚ್‌ಡಿಕೆ

ಪ್ರಧಾನಿ ನರೇಂದ್ರ ಮೋದಿ ಜೊತೆ ಇಂದು ನಡೆಯಲಿರುವ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಸಿಎಂ ಯಡಿಯೂರಪ್ಪನವರು ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಕೋವಿಡ್‌ ಪ್ಯಾಕೇಜ್, ಜಿಎಸ್‌ಟಿ ಬಾಕಿ ಮತ್ತು ನೆರೆ-ಬರ ಪರಿಹಾರವನ್ನು ಕೇಳಿ ಪಡೆಯಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಮೂರನೇ ಹಂತದ ಲಾಕ್‌ಡೌನ್ ಮುಕ್ತಾಯದ ಹಂತದಲ್ಲಿದ್ದು, ಈ ಕುರಿತು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಕರ್ನಾಟಕದ ಪರವಾಗಿ ಬಿಎಸ್‌ವೈ ಸಹ ಪಾಲ್ಗೊಳ್ಳಲಿದ್ದಾರೆ.

ಹೀಗಾಗಿ ಈ ಕುರಿತು ಸರಣಿ ಟ್ವೀಟ್ ಮಾಡುವ ಮೂಲಕ ಆಗ್ರಹಿಸಿರುವ ಕುಮಾರಸ್ವಾಮಿ, ” ಕೋವಿಡ್ ಪ್ಯಾಕೇಜ್’ ಜೊತೆಗೆ GST ಬಾಕಿ, ನೆರೆ-ಬರ ಪರಿಹಾರ ಸೇರಿದಂತೆ ಕೇಂದ್ರದಿಂದ ಬರಬೇಕಾದ ಇತರ ಬಾಕಿ ಹಣದ ಬಗ್ಗೆಯೂ ಬಿಎಸ್‌ ಯಡಿಯೂರಪ್ಪ ಮೋದಿ ಜೊತೆಗಿನ ಸಭೆಯಲ್ಲಿ ಕೇಳಬೇಕು. ಲಾಕ್ ಡೌನ್ ನಿಂದಾಗಿ ರಾಜ್ಯ ಹಣಕಾಸಿನ ತೊಂದರೆ ಅನುಭವಿಸುತ್ತಿದೆ. ಈ ಹೊತ್ತಲ್ಲಿ ಕೇಂದ್ರದಿಂದ ಸೂಕ್ತ ನೆರವು ಬಾರದ ಹೊರತು ಕೋವಿಡ್ ನಿಯಂತ್ರಣ ಕಷ್ಟವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಸರ್ಕಾರ #PMCaresFund ನಿಧಿ ಸ್ಥಾಪಿಸಿದೆ. ಇದಕ್ಕೆ ಸಂಸದರಾದಿಯಾಗಿ, ಉದ್ಯಮಿಗಳು, ನಾಗರಿಕರು ಉದಾರ ದೇಣಿಗೆ ನೀಡಿದ್ದಾರೆ. ಹೀಗಿದ್ದೂ ಕೇಂದ್ರದಿಂದ ರಾಜ್ಯಕ್ಕೆ ಈ ವರೆಗೆ ಕೋವಿಡ್ ಎದುರಿಸಲು ಸೂಕ್ತ ಆರ್ಥಿಕ ನೆರವು ಬಂದಿಲ್ಲ ಎಂಬುದನ್ನು ಮೋದಿ ಅವರಿಗೆ ಬಿಎಸ್‌ವೈ ಮನನ ಮಾಡಿಕೊಡಬೇಕು‌ ಎಂದು ಎಚ್‌ಡಿಕೆ ತಿಳಿಸಿದ್ದಾರೆ.

ಕಳೆದ 3 ದಿನಗಳ ಅಂಕಿಅಂಶ ಗಮನಿಸಿದರೆ ರಾಜ್ಯದಲ್ಲಿ ಕೋವಿಡ್ ಹೆಚ್ಚುತ್ತಿರುವಂತೆ ಕಾಣುತ್ತಿದೆ. ಹೀಗಾಗಿ ವೈದ್ಯಕೀಯ ಕ್ರಮಗಳನ್ನು ಬಿಗಿಗೊಳಿಸಬೇಕಿದೆ. ಜೊತೆಗೆ ನಷ್ಟಕ್ಕೊಳಗಾಗಿರುವ ಜನರಿಗೆ ಆರ್ಥಿಕ ಪರಿಹಾರ ನೀಡಬೇಕಿದೆ. ದೊಡ್ಡ ಮಟ್ಟದ ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ಕೊಡುವ ಕರ್ನಾಟಕದಂತಹ ದೊಡ್ಡ ರಾಜ್ಯಕ್ಕೆ ಸೂಕ್ತ ಪ್ಯಾಕೇಜ್ ಅತ್ಯಗತ್ಯ” ಎಂದು ಅವರು ಒತ್ತಾಯಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights