ರಾಜಸ್ತಾನ ಬಿಕ್ಕಟ್ಟಿನ ನಡುವೆ ಮಣಿಪುರದಲ್ಲಿ ಕಾಂಗ್ರೆಸ್ನ 06 ಶಾಸಕರ ರಾಜೀನಾಮೆ! ಬಿಜೆಪಿ ಸೇಫ್!
ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ಇನ್ನೂ ಕೊನೆಗೊಂಡಿಲ್ಲ. ಈ ನಡುವೆ ಮಣಿಪುರದಲ್ಲಿ ಕಾಂಗ್ರೆಸ್ನ 06 ಶಾಸಕರು ರಾಜೀನಾಮೆ ನೀಡಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಸೇಫ್ ಆಗಿದೆ!
ಸೋಮವಾರ ನಡೆದ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ನೇತೃತ್ವದ ಎನ್. ಬಿರೇನ್ ಸಿಂಗ್ ಸರ್ಕಾರ ವಿಶ್ವಾಸ ಮತ ಯಾಚನೆ ಮಾಡಿ ಗೆಲುವು ಸಾಧಿಸಿದ್ದು, ಅಧಿಕಾರ ಉಳಿಸಿಕೊಂಡಿದೆ. ಕಾಂಗ್ರೆಸ್ ಹೈಕಮಾಂಡ್ ನೀಡಿದ್ದ ವಿಪ್ ಧಿಕ್ಕರಿಸಿ ಕಾಂಗ್ರೆಸ್ನ ಎಂಟು ಶಾಸಕರು ಈ ವಿಶ್ವಾಸಮತ ಯಾಚನೆಯ ಅಧಿವೇಶನದಿಂದ ದೂರ ಉಳಿದಿದ್ದರು. ಹೀಗಾಗಿ ಬಿಜೆಪಿ ನಿರಾಯಾಸವಾಗಿ ಬಹುಮತ ಸಾಬೀತು ಪಡಿಸಲು ನೆರವಾಗಿದೆ.
ವಿಪ್ ಉಲ್ಲಂಘಿಸಿದ್ದವರಲ್ಲಿ ಆರು ಜನ ಶಾಸರು, ಒ ಹೆನ್ರಿ ಸಿಂಗ್, ಒಯಿನಮ್ ಲುಖೊಯಿ, ಮಹ್ಮದ್ ಅಬ್ದುಲ್ ನಸೀರ್, ಪಾವೊನಮ್ ಬ್ರೊಜೆನ್, ಎನ್ಗಮ್ಥಾಂಗ್ ಹಾಕಿಪ್ ಮತ್ತು ಗಿನ್ಸುವಾನ್ಹು ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಸದ್ಯ ರಾಜ್ಯದಲ್ಲಿ ಒ ಇಬೋಬಿ ಸಿಂಗ್ ಕಾಂಗ್ರೆಸ್ ನಾಯಕತ್ವ ವಹಿಸಿದ್ದು, ಇವರ ತೀರ್ಮಾನಗಳನ್ನು ಈ ರಾಜೀನಾಮೆ ನೀಡಿರುವ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ರಾಜ್ಯದ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಇಬೋಬಿ ಸಿಂಗ್ ಅಸಮರ್ಥ ನಿಲುವುಗಳಿಂದ ಸರಕಾರ ರಚಿಸಲು ಸಾಧ್ಯವಾಗಿಲ್ಲ,’’ ಎಂದು ಈ ಅತೃಪ್ತ ಬಂಡಾಯ ಶಾಸಕರು ಹೇಳಿದ್ದಾರೆ.
‘ಸೋಮವಾರ ರಾತ್ರಿ ವಿಧಾನಸಭೆ ಅಧಿವೇಶನದ ನಂತರ ಸ್ಪೀಕರ್ ಯಮ್ನಮ್ ಖೇಮ್ಚಂದ್ ಸಿಂಗ್ ಅವರು ಕಾಂಗ್ರೆಸ್ನ ಅತೃಪ್ತ ಶಾಸಕರನ್ನು ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ರಾಜೀನಾಮೆ ಪತ್ರಗಳನ್ನು ಪರಿಶೀಲಿಸಿದ್ದು, ಐವರ ರಾಜೀನಾಮೆಯನ್ನು ಅಂಗೀಕರಸಿದ್ದಾರೆ. ಒಬ್ಬರ ರಾಜೀನಾಮೆಯನ್ನು ಇನ್ನೂ ಅಂಗೀಕರಿಸಿಲ್ಲ.
ಪಕ್ಷದ ಪ್ರಾಥಮಿಕ ಸದಸ್ಯ ತೊರೆದು ಹೊರ ಬರುವುದಾಗಿ ಹೆನ್ರಿ ತಿಳಿಸಿದ್ದಾರೆ.
ಡ್ರಗ್ ಪ್ರಕರಣವೊಂದರ ತನಿಖೆ ವಿಷಯದಲ್ಲಿ ಸರಕಾರದ ವಿರುದ್ಧ ಅಪಸ್ವರ ಎತ್ತಿದ್ದ ಕಾಂಗ್ರೆಸ್, ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿತ್ತು. ನಂತರ ಇದೇ ವಿಷಯವಾಗಿ ಸರಕಾರದ ವಿರುದ್ಧ ವಿಧಾನಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿತ್ತು. ಒಂದು ಸಂದರ್ಭದಲ್ಲಿ ಬಿರೇನ್ ಸಿಂಗ್ ಸರಕಾರ ಪತನದ ಅಂಚಿಗೆ ತಲುಪಿತ್ತು. ಆದರೆ ಸೋಮವಾರ ವಿಶ್ವಾಸ ಮತ ಯಾಚನೆ ಮಾಡಿ ಗೆಲುವು ಸಾಧಿಸಿದೆ. 60 ಸದಸ್ಯ ಬಲದ ವಿಧಾನಸಭೆಯಲ್ಲಿ ಸದ್ಯ 53 ಸದಸ್ಯರಿದ್ದು, ಈ ಪೈಕಿ ಆಡಳಿತರೂಢ ಮೈತ್ರಿಕೂಟ 29 ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್ ಬಲ 24. ಸೋಮವಾರದ ಅಧಿವೇಶನಕ್ಕೆ ಒಟ್ಟು 8 ಕಾಂಗ್ರೆಸ್ ಶಾಸಕರು ಗೈರಾಗಿದ್ದರು.
ಇದನ್ನೂ ಓದಿ: ರಾಹುಲ್ ಭೇಟಿ ಮಾಡಿದ ಸಚಿನ್ ಪೈಲಟ್; ಕಾಂಗ್ರೆಸ್ ಸರ್ಕಾರಕ್ಕಿಲ್ಲ ಪತನ?

