ವಲಸೆ ಕಾರ್ಮಿಕರ ಮೇಲೆ ಬಲಪ್ರಯೋಗ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್

“ವೈರಸ್ ನಿಂದ ಹುಟ್ಟಿರುವ ಭೀತಿ ವೈರಸ್ ಗಿಂತಲೂ ಹೆಚ್ಚು ವಿನಾಶ ತರಬಲ್ಲದು” ಎಂದು ಗಮನಿಸಿರುವ ಸುಪ್ರೀಂ ಕೋರ್ಟ್, ವಲಸೆ ಕಾರ್ಮಿಕರಿಗೆ ಸಮಾಲೋಚನೆ ನಡೆಸಲು, ಅದಕ್ಕಾಗಿ ಎಲ್ಲ ನಂಬಿಕೆಗಳ ಸಮುದಾಯದ ಮುಖಂಡರ ನೆರವು ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಸೂಚಿಸಿದೆ. ಕೊರೊನ ಸಾಂಕ್ರಾಮಿಕದ ಲಾಕ್ ಡೌನ್ ನಿಂದ ಉಂಟಾಗಿರುವ ಭೀತಿಯಿಂದ ಲಕ್ಷಾಂತರ ವಲಸೆ ಕಾರ್ಮಿಕರು ತಾವು ಕೆಲಸ ಮಾಡುತ್ತಿದ್ದ ರಾಜ್ಯಗಳನ್ನು ತೊರೆಡು ತಮ್ಮ ಹುಟ್ಟೂರುಗಳಿಗೆ ತೆರಳುತ್ತಿದ್ದಾರೆ. ಎಷ್ಟೋ ಜನಕ್ಕೆ ಸಾರಿಗೆ ಸಂಪರ್ಕದ ಕೊರತೆಯಾಗಿದ್ದು, ನಡೆದೇ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ ಮತ್ತು ಸಾಕಷ್ಟು ಜನಕ್ಕೆ ಆಹಾರದ ಅಭಾವವೂ ಆಗಿದೆ.

ಸುಳ್ಳು ಸುದ್ದಿಗಳಿಂದ ಜನರಿಗೆ ಭೀತಿ ಹರಡದಂತೆ ತಡೆಯಲು ಕ್ಷಣಕ್ಷಣಕ್ಕೆ ಮಾಹಿತಿ ಅಪ್ಡೇಟ್ ಮಾಡುವ ತಾಣವನ್ನು 24 ಘಂಟೆಯೊಳಗೆ ತೆರೆಯುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ವಿಡಿಯೋ ಕಾನ್ಫಾರೆನ್ಸ್ ಮೂಲಕ ಈ ಪ್ರಕರಣ ಆಲಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಎಸ್ ಎ ಬೋಬ್ಡೆ, ವಲಸಿಗರಿಗೆ ನೆಲೆಸಲು ಜಾಗ, ಊಟ ಮತ್ತು ಔಷಧ ಉಪಚಾರ ಒದಗಿಸಬೇಕೆಂದು ಕೇಂದ್ರಕ್ಕೆ ತಿಳಿಸಿದ್ದಾರೆ.

“ಭೀತರಾಗಿರುವವರಿಗೆ ಸಮಾಲೋಚನೆ ನಡೆಸಲು ನಾವು ಪರಿಗಣಿಸಿದ್ದೇವೆ. ಸುಮಾರು 22.8 ಲಕ್ಷ ಜನಕ್ಕೆ ಆಹಾರ ತಯಾರಿಸುತ್ತಿದ್ದೇವೆ. ಇದರ ಫಲಾನುಭಾವಿಗಳು ವಲಸೆ ಕಾರ್ಮಿಕರು, ದಿನನಿತ್ಯ ಕೂಲಿ ಮಾಡುವವರು. ಅವರು ನೆಲೆಸುವುದಕ್ಕೆ ಜಾಗ ಕೊಡಲಾಗಿದೆ” ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.

ವಲಸಿಗರ ವಿರುದ್ಧ ಯಾವುದೇ ಬಲಪ್ರಯೋಗ ಮಾಡಬಾರದೆಂದು ಹೇಳಿರುವ ಮುಖ್ಯ ನ್ಯಾಯಾಧೀಶರು “ಸ್ವಯಂಸೇವಕರು ಈ ಶಿಬಿರಗಳನ್ನು ನಿರ್ವಹಿಸಲಿ, ಪೋಲಿಸರು ಬೇಡ. ಭಯ ಉಂಟುಮಾಡುವುದು ಅಥವಾ ಬಲಪ್ರಯೋಗ ಮಾಡುವುದು ನಡೆಯಬಾರದು” ಎಂದು ಕೂಡ ಅವರು ಕೇಂದ್ರಕ್ಕೆ ಆದೇಶಿಸಿದ್ದಾರೆ.

ವಲಸೆ ಕಾರ್ಮಿಕರ ಪ್ರಕರಣವನ್ನು ಹೈಕೋರ್ಟ್ ಗಳು ವಿಚಾರಣೆ ನಡೆಸುವುದಕ್ಕೆ ತಡೆಯಾಜ್ಞೆ ನೀಡುವುದಕ್ಕೆ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಅವರು ಹತ್ತಿರದಿಂದ ಪರಿಸ್ಥಿತಿಯನ್ನು ಅವಲೋಕಿಸಲು ಸಾಧ್ಯವಿದೆ ಎಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights