ವಲಸೆ ಕಾರ್ಮಿಕರ ರಾಹುಲ್ ಭೇಟಿ: ಕಾರ್ಮಿಕರನ್ನು ವಶಕ್ಕೆ ಪಡೆದ ಪೊಲೀಸರು
54 ದಿನಗಳ ಲಾಕ್ಡೌನ್ನಿಂದಾಗಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರು ನಿರಂತರ ಪ್ರಯತ್ನದ ಬಳಿಕ ತಮ್ಮೂರುಗಳನ್ನು ತಲುಪುತಿದ್ದಾರೆ. ಈ ಮಧ್ಯೆ ಹಲವಾರು ಕಾರ್ಮಿಕರು ರಸ್ತೆ ಮಧ್ಯದಲ್ಲೇ ತಮ್ಮ ಜೀವ/ಜೀವನ ಕಳೆದುಕೊಂಡಿದ್ದಾರೆ. ನಡೆದು ಹೋಗುತ್ತಿರುವವ ಸಾಲು ನಡೆಯುತ್ತಲೇ ಇದೆ, ಸಾವುಗಳೂ ಸಂಭವಿಸುತ್ತಲೇ ಇವೆ.
ದೆಹಲಿಯಲ್ಲೂ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಅಂತಹ ಕಾರ್ಮಿಕರನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ಇಂಥ ವಲಸೆ ಕಾರ್ಮಿಕರನ್ನು ಭೇಟಿಯಾಗಿ ಯೋಗ ಕ್ಷೇಮ ವಿಚಾರಿಸಿದ್ದಾರೆ.
ದೆಹಲಿಯ ಸುಖದೇವ್ ವಿಹಾರ್ ಮೇಲ್ಸೇತುವೆ ಬಳಿ ಇದ್ದ ವಲಸೆ ಕಾರ್ಮಿಕರನ್ನು ಶನಿವಾರ ರಾಹುಲ್ ಗಾಂಧಿ ಭೇಟಿ ಮಾಡಿದ್ದು, ಕಾರ್ಮಿಕರ ಜೊತೆ ಸಂವಾದ ನಡೆಸಿದ್ದರು. ರಾಹುಲ್ ಗಾಂಧಿ ಭೇಟಿ ಮಾಡಿದ ಕಾರ್ಮಿಕರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ರಾಹುಲ್ ಗಾಂಧಿ ಜೊತೆ ಮಾತನಾಡಿದ್ದ ವಲಸೆ ಕಾರ್ಮಿಕರನ್ನು ಪೊಲೀಸರು ಮೇಲಿನವರ ಆದೇಶದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಆರೋಪ ಮಾಡಿದೆ. ಆದರೆ, ಪೊಲೀಸರಿಂದ ಮಾಧ್ಯಮಗಳಿಗೆ ಇನ್ನೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.
ಇತ್ತೀಚೆಗೆ ಸಂಭವಿಸಿದ ರೈಲು ದುರಂತದಲ್ಲಿ 24 ವಲಸೆ ಕಾರ್ಮಿಕರು ದುರ್ಮರಣವಾದ ಘಟನೆ ಬಗ್ಗೆ ಪ್ರತಿಕ್ರಿಯಿಸುತ್ತಾ ರಾಹುಲ್ ಗಾಂಧಿ ಅವರು ಖಂಡನೆ ವ್ಯಕ್ತಪಡಿಸಿದ್ದರು. ವಲಸೆ ಕಾರ್ಮಿಕರನ್ನು ಅವರು ದೇಶದ ಆತ್ಮಗೌರವದ ಸಂಕೇತ ಎಂದು ಬಣ್ಣಿಸಿದ್ದರು.

