ಅಂಫಾನ್ ನಂತರ ಮತ್ತೆ ಚಂಡಮಾರುತ ಭೀತಿ: ಭಾರತಕ್ಕೆ ಬಡಿಯಲಿದೆ ಮತ್ತೊಂದು ಚಂಡಮಾರುತ!
ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ವ್ಯಾಪಕ ಹಾನಿ ಮಾಡಿದ್ದ ಅಂಫಾನ್ ಚಂಡಮಾರುತ ದುರಂತ ಇನ್ನೂ ಹಸಿಯಾಗಿದೆ. ಆದರೆ, ಇದರ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಚಂಡಮಾರುತ ಭೀತಿ ಆರಂಭವಾಗಿದೆ.
ಮುಂದಿನ ಎರಡು ಮೂರು ದಿನಗಳಲ್ಲಿ ಗುಜರಾತ್ ಮತ್ತು ಉತ್ತರ ಮಹಾರಾಷ್ಟ್ರ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ 3ರಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಮುಂಬೈ ಮೂಲದ ಪ್ರಾದೇಶಿಕ ಹವಾಮಾನ ಕೇಂದ್ರವು ಚಂಡಮಾರುತದ ಬೆಳವಣಿಗೆಗಳ ಮತ್ತು ತೀವ್ರತೆ ಮೇಲೆ ನಿಗಾ ಇರಿಸಿದೆ.
ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪ ಪ್ರದೇಶಗಳಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದು ಮುಂದಿನ 24 ಗಂಟೆಗಳಲ್ಲಿ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ. ಇದು ಜೂನ್ 3ರ ವೇಳೆಗೆ ಚಂಡಮಾರುತ ಉತ್ತರ ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿಗೆ ಅಪ್ಪಳಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.