ಭಾರತದ ಭೂಭಾಗವನ್ನು ತನ್ನ ನಕ್ಷೆಗೆ ಸೇರಿಸಿಕೊಳ್ಳಲು ಮಸೂದೆ ಮಂಡಿಸಿದ ನೇಪಾಳ!

ಭಾರತದ ಮಿತ್ರ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದ ಪಕ್ಕದ ರಾಷ್ಟ್ರ ನೇಪಾಳ, ಈಗ ಭಾರತದ ವಿರುದ್ಧ ನಿಂತಿದೆ. ಕಳೆದ ಕೆಲವು ದಿನಗಳಿಂದ ಭೂಪಟದ ವಿಚಾರವಾಗಿ ಹಗ್ಗ ಜಗ್ಗಾಟ ಆರಂಭವಾಗಿದ್ದು, ಭಾರತ ಭೂಭಾಗವನ್ನು ನೇಪಾಳ ತನ್ನ ನಕಾಶೆಯಲ್ಲಿ ಸೇರಿಸುವ ಮಸೂದೆಯನ್ನು ಸಂಸತ್ ನಲ್ಲಿ ಮಂಡಿಸಿದೆ.

ದೇಶದ ನಕ್ಷೆಯನ್ನು ಬದಲಾಯಿಸುವ ಉದ್ದೇಶದೊಂದಿಗೆ ನೇಪಾಳ ಸರ್ಕಾರವು ಭಾನುವಾರ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದು, ಭಾರತದ ಜೊತೆಗಿನ ಗಡಿ ವಿವಾದದ ನಡುವೆಯೇ ನೇಪಾಳ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ನೇಪಾಳದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶಿವಮಯ ತುಂಬಹಾಂಗ್‌ಪೆ ಅವರು ನೇಪಾಳ ಸರ್ಕಾರದ ಪರವಾಗಿ ಮಸೂದೆಯನ್ನು ಮಂಡಿಸಿದ್ದು, ನೇಪಾಳ ಸಂವಿಧಾನದ 3ನೇ ಪರಿಚ್ಛೇದದಲ್ಲಿ ಉಲ್ಲೇಖಿಸಲಾಗಿರುವ ಆಡಳಿತಾತ್ಮಕ ನಕಾಶೆ ತಿದ್ದುಪಡಿಗೆ ಸಂಬಂಧಿಸಿದ  ಮಸೂದೆ ಇದಾಗಿದೆ. ಇದಕ್ಕೆ ಅನುಮೋದನೆ ದೊರೆತು ಕಾನೂನಾಗಿ ರೂಪುಗೊಂಡರೆ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ಪರಿಷ್ಕೃತ ನಕಾಶೆಯನ್ನೇ ಬಳಸಲಾಗುತ್ತದೆ. ಸದ್ಯ ಸಂಸತ್ತಿನಲ್ಲಿ ಮಸೂದೆ ಮೇಲೆ ಚರ್ಚೆ ನಡೆಯಲಿದ್ದು, ಉಭಯ ಸದನಗಳು ಅನುಮೋದನೆ ನೀಡಿದ ನಂತರ ಮಸೂದೆ  ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಿಕೊಡಲಾಗುತ್ತದೆ.

ಮೂಲಗಳ ಪ್ರಕಾರ ಲಿಪುಲೇಶ್, ಕಾಲಾಪಾನಿ ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ಒಳಗೊಂಡ ರಾಜಕೀಯ ಮತ್ತು ಆಡಳಿತಾತ್ಮಕ ಪರಿಷ್ಕೃತ ನಕಾಶೆ ಸ್ವೀಕರಿಸುವ ಮಸೂದೆಯನ್ನು ಸಂಸತ್ ನಲ್ಲಿ ಮಂಡಿಸಿದೆ ಎನ್ನಲಾಗಿದೆ.

ಈ ಹಿಂದೆಯೇ ನೇಪಾಳ  ಸರ್ಕಾರಕ್ಕೆ ಅಲ್ಲಿನ ಪ್ರಮುಖ ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ ಶನಿವಾರ ಬೆಂಬಲ ಸೂಚಿಸಿತ್ತು. ‘ಭಾರತದ ನಕ್ಷೆಯೊಳಗೆ ಸೇರಿಕೊಂಡಿರುವ ‘ಕಾಲಾಪಾನಿ’ ಮತ್ತು ‘ಲಿಪುಲೇಶ್’ ಪ್ರದೇಶಗಳನ್ನು ಮರಳಿ ಪಡೆದೇ ತೀರುತ್ತೇವೆ’ ಎಂದು ನೇಪಾಳ ಪ್ರಧಾನಿ ಕೆ.ಪಿ.  ಶರ್ಮಾ ಓಲಿ ಇತ್ತೀಚೆಗೆ ಹೇಳಿದ್ದರು.

ಲಿಪುಲೇಶ್, ಕಾಲಾಪಾನಿ ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ಒಳಗೊಂಡ ರಾಜಕೀಯ ಮತ್ತು ಆಡಳಿತಾತ್ಮಕ ಪರಿಷ್ಕೃತ ನಕಾಶೆಯನ್ನು ನೇಪಾಳ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights