ಫ್ಯಾಕ್ಟ್‌ಚೆಕ್ : ವೆನಿಜುವೆಲ್ಲಾ ರಸ್ತೆಯಲ್ಲಿ ಬಿದ್ದ ರಾಶಿ ರಾಶಿ ಕರೆನ್ಸಿ ನೋಟುಗಳು! ಕಾರಣ ಏನು ಗೊತ್ತಾ?

ವೆನಿಜುವೆಲ್ಲಾ ರಸ್ತೆಯಲ್ಲಿ ರಾಶಿ ರಾಶಿ ನೊಟುಗಳು ಬಿದ್ದಿರುವ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೆನಿಜುವೆಲ್ಲಾ ದೇಶದಲ್ಲಿ ಹಿಂದೆ ಅಧಿಕಾರ ನಡೆಸಿದ ಹ್ಯೂಗೋ ಚಾವೇಜ್ ಎಲ್ಲವನ್ನು ಪುಕ್ಕಟೆಯಾಗಿ ನೀಡಿದ್ದರಿಂದ ಅಲ್ಲಿಯ ಜನ ಸೋಮಾರಿಗಳಾಗಿ ಇಂದಿಗೂ ಆ ದೇಶ ಎಲ್ಲಕ್ಕೂ ಪರದಾಡುವಂತಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಫೇಸ್‌ಬುಕ್ ಪೇಜ್‌ ಮತ್ತು ಟ್ವಿಟರ್‌ಗಳಲ್ಲಿ ಇದೇ ರೀತಿಯ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಬಡವರಿಗೆ  ಕೆ.ಜಿ ಅಕ್ಕಿಯನ್ನು 1ರೂ ಗೆ ನೀಡುವ ಯೋಜನೆಯನ್ನು ಜಾರಿಗೆ ಮಾಡಿತ್ತು ಅದನ್ನು ಉಲ್ಲೇಖಿಸಿ ಉಚಿತವಾಗಿ ನೀಡಿದರೆ ಜನ ಸೋಮಾರಿಗಳಾಗುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು BJP ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

“ಇದು ವೆನಿಜುವೇಲಾ ಎನ್ನುವ ದಕ್ಷಿಣ ಅಮೆರಿಕಾದ ದೇಶದ ದೃಶ್ಯ. ಒಂದು ಕಾಲದಲ್ಲಿ ನೈಸರ್ಗಿಕ ಸಂಪತ್ತಿನಿಂದ ತುಂಬಿ ತುಳುಕುತ್ತಿದ್ದ ದೇಶ ಈಗ ಕಂತೆಗಟ್ಟಲೆ ಹಣ ಕೊಟ್ಟರೆ ಒಂದು ಪೌಂಡು ಬ್ರೆಡ್ ಸಿಗೋದು ಕಷ್ಟ ಅನ್ನೋ ಪರಿಸ್ಥಿತಿ ಬಂದಿದೆ. ಹ್ಯೂಗೋ ಚಾವೇಜ್ ಎನ್ನುವ ಅಧ್ಯಕ್ಷ ಬಂದ ನಂತರ. ಎಲ್ಲಾ ಉಚಿತ ಎಲ್ಲಾ ಉಚಿತ ಎಂದು ಜನಪ್ರಿಯತೆಯನ್ನೇನೋ ಗಳಿಸಿಕೊಂಡ ಆದರೆ ಜನರನ್ನು ಸೋಮಾರಿಗಳನ್ನಾಗಿ ಮಾಡಿ, ದೇಶವನ್ನು ದೀವಾಳಿಯತ್ತ ನೂಕಿದ” ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ವೈರಲ್ ಮಾಡಲಾಗಿದೆ.

ಹಾಗಿದ್ದರೆ ಅಮೇರಿಕಾದ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ವೆನಿಜುವೆಲ್ಲಾ ಎಂಬ ಪುಟ್ಟ ದೇಶ ಆರ್ಥಿಕವಾಗಿ  ಸಂಕಷ್ಟಕ್ಕೆ ಒಳಗಾಗಿದ್ದು ಪುಕ್ಕಟ್ಟೆಯಾಗಿ ನೀಡಿದ ಯೋಜನೆಗಳಿಂದಲೆ? ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

2020ರ ಕೋವಿಡ್ ಸಂದರ್ಭದಲ್ಲಿ ಈ ಚಿತ್ರ ಬಳಕೆ

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಾದ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, ಈ ಹಿಂದೆ 2020ರ ಕೋವಿಡ್ ಸಂದರ್ಭದಲ್ಲಿ ಇದೇ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ಸುಳ್ಳು ಸುದ್ದಿಯನ್ನು ಮೊದಲ ಬಾರಿಗೆ ಹರಿಯ ಬಿಡಲಾಗಿತ್ತು.

 fact check, people in Italy, Italy throwing money, Italian people throwing money on streets, Italy currency

“ಶ್ರೀಮಂತ ಇಟಾಲಿಯನ್ನರು ತಮ್ಮ ಹಣವನ್ನು ಎಸೆಯುತ್ತಿದ್ದಾರೆ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು, ವಿಶೇಷವಾಗಿ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ, ಹಣದಿಂದ ಆರೋಗ್ಯವನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಇಟಲಿಯ ಜನರು ಹೇಳುತ್ತಿದ್ದಾರೆ  ಹಣವು ಅವರಿಗೆ ಯಾವುದೇ ಪ್ರಯೋಜನವಿಲ್ಲ ಎಂಬ ಸುದ್ದಿಯನ್ನು ಪ್ರಸಾರ ಮಾಡಲಾಗಿತ್ತು. ಕೋವಿಡ್‌ನಿಂದ ಇಟಲಿಯಲ್ಲಿ ಸಾವಿನ ಸಂಖ್ಯೆ 12,000 ದಾಟಿದ ಹಿನ್ನಲೆಯಲ್ಲಿ ಜನರು ಹಣವನ್ನು ಬೀದಿಗಳಲ್ಲಿ ಎಸೆಯುತ್ತಿದ್ದಾರೆ ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿತ್ತು.

ವೈರಲ್ ಫೋಟೊ ವೆನಿಜುವೆಲ್ಲಾದ್ದೆ! ಆದರೆ

ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಫೋಟೋ ವೆನಿಜುವೆಲ್ಲಾದ ದೃಶ್ಯಗಳು ಎಂದು ಖಚಿತವಾಗಿದೆ. ಆದರೆ ಈ ನೋಟುಗಳನ್ನು ರಸ್ತೆಗಳಲ್ಲಿ ಎಸೆಯಲು ಕಾರಣವೇನು ಎಂದು ತಿಳಿದುಕೊಳ್ಳಲು ಮತ್ತಷ್ಟು ಸರ್ಚ್ ಮಾಡಿದಾಗ ಕೆಲವು ದಿ ರಿಪಬ್ಲಿಕ್ ವರ್ಡ್‌ನ ವರದಿಯೊಂದು ಲಭ್ಯವಾಗಿದೆ. ಆ ವರದಿಯ ಪ್ರಕಾರ ಆಗಸ್ಟ್ 2018 ವೆನಿಜುವೆಲ್ಲಾದಲ್ಲಿ ಬೊಲಿವರ್ ಫ್ಯೂರ್ಟೆನ ಎಂಬ ಹಳೆಯ ಕರೆನ್ಸಿ ನೋಟುಗಳನ್ನು ರದ್ದು ಮಾಡಿ ಬೊಲಿವರ್ ಸೊಬೆರಾನೊ ಎಂಬ ಹೊಸ ರೂಪದ ಕರೆನ್ಸಿ ಪರಿಚಯಿಸಿದಾಗ ಈ ಘಟನೆ ನಡೆದಿದೆ ಎಂದು ವರದಿಗಳು ಉಲ್ಲೇಖಿಸಿವೆ.

Bolivar Fuerte ಎಂದು ಕರೆಯಲ್ಪಡುವ ಹಳೆಯ ಕರೆನ್ಸಿಯನ್ನು Bolivar Soberano ಎಂಬ ಹೊಸ ಕರೆನ್ಸಿಗೆ ಆಗಸ್ಟ್ 2018 ರಲ್ಲಿ ಬದಲಾಯಿಸಲಾಯಿತು.(ನವೆಂಬರ್ 8 2016ರಂದು ಭಾರತದಲ್ಲಿ 1000 ಮತ್ತು 500 ಮುಖ ಬೆಲೆ ನೋಟುಗಳನ್ನು ಅಮಾನ್ಯೀಕರಣಗೊಳಿಸಿದಂತೆ) ಹಳೆಯ Bolivar Fuerte ಕರೆನ್ಸಿಯನ್ನು ಡಿಸೆಂಬರ್ 5, 2018 ರಂದು ಹಿಂತೆಗೆದುಕೊಳ್ಳಲಾಯಿತು, ನಂತರ ಹಳೆಯ ಕರೆನ್ಸಿಗೆ ಯಾವುದೇ ಮೌಲ್ಯವಿಲ್ಲ ಎಂದು ತಿಳಿದ ಜನ ಅದನ್ನು ರಸ್ತೆಯಲ್ಲಿ ಬಿಸಾಡಿ ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ.

(ಭಾರತದಲ್ಲಿ 2016ರಲ್ಲಿ ನೋಟುಗಳನ್ನು ಅಮಾನ್ಯೀಕರಣಗೊಳಿಸಿದ ಸಂದರ್ಭದಲ್ಲಿ ಹಳೆಯ 1000 ಮತ್ತು 500 ಮುಖಬೆಲೆಯ ನೋಟುಗಳನ್ನು ಬೆಂಕಿ ಹಚ್ಚಿದ ಘಟನೆ ಅಲ್ಲಲ್ಲಿ ನಡೆದಿತ್ತು)

ವೆನಿಜುವೆಲ್ಲಾದಲ್ಲಿ ಆರ್ಥಿಕ ಸಂಕಷ್ಟಕ್ಕೆ ಕಾರಣವೇನು ಗೊತ್ತೆ?

ಸಾಮಾಜಿಕ ಮಾಧ್ಯಮಗಳಲ್ಲಿ BJP ಬೆಂಬಲಿಗರು ಪ್ರತಿಪಾದಿಸಿದಂತೆ ವೆನಿಜುವೆಲ್ಲಾದಲ್ಲಿ ಆರ್ಥಿಕ ಸಂಕಷ್ಟಕ್ಕೆ ಕಾರಣ ಉಚಿತ ಕೊಡುಗೆಯಿಂದಲ್ಲ, ಬದಲಿಗೆ ವಿಶ್ವದ ದೊಡ್ಡಣ ಅಮೇರಿಕಾದ ಕುತಂತ್ರದಿಂದ ಎಂಬುದು ವಾಸ್ತವ. 1999ರಲ್ಲಿ ಪಟ್ಟವೇರಿದ ಹ್ಯೂಗೋ ಚಾವೆಜ್‌, ದೇಶವನ್ನು ಪ್ರಜಾಪ್ರಭುತ್ವದಿಂದ ಸಮಾಜವಾದದತ್ತ ನಡೆಸಿದ. ಈತನ ಕಾಲದಲ್ಲಿ ನಿರುದ್ಯೋಗ ಗಣನೀಯವಾಗಿ ಕುಸಿಯಿತು, ತಲಾದಾಯ ದುಪ್ಪಟ್ಟಾಯಿತು, ದೇಶದ ಶಿಕ್ಷಣ, ಆರೋಗ್ಯ ಎಲ್ಲವೂ ಸುಧಾರಿಸಿದ್ದವು. 2000ದಲ್ಲಿ ದೇಶದಲ್ಲಿ ಕಂಡುಬಂದ ತೈಲ ಮಾರುಕಟ್ಟೆಯ ಬೂಮ್‌ನಿಂದಾಗಿ, ದೇಶಕ್ಕೆ ಹಣದ ಹೊಳೆಯೇ ಹರಿದುಬಂತು. ಲ್ಯಾಟಿನ್‌ ಅಮೆರಿಕದ ಶ್ರೀಮಂತ ದೇಶವೆನಿಸಿತು. 2013ರಲ್ಲಿ ಚಾವೆಜ್‌ ಮೃತಪಟ್ಟ. 2014ರಲ್ಲಿ ಇದ್ದಕ್ಕಿದ್ದಂತೆ ತೈಲ ಮಾರುಕಟ್ಟೆ ಕುಸಿಯಿತು. ದೇಶ ತೈಲವನ್ನೇ ಸಂಪೂರ್ಣವಾಗಿ ನಂಬಿತ್ತು. ಬೇರೆ ರೀತಿಯ ಆದಾಯದ ಕಡೆ ಗಮನ ಹರಿಸಿರಲಿಲ್ಲ. ಹೀಗಾಗಿ ಇಡೀ ದೇಶದ ಆರ್ಥಿಕತೆ ಸಂಕಷ್ಟಕ್ಕೆ ಒಳಗಾಗಿತ್ತು.

ಅಮೇರಿಕಾಕ್ಕೇಕೆ ಇಷ್ಟು ಹಿತಾಸಕ್ತಿ?

2015ರಲ್ಲಿ ನಡೆದ ಚುನಾವಣೆಯಲ್ಲಿ ಮದರೋ ಗೆದ್ದು ಅಧಿಕಾರಕ್ಕೆ ಬಂದರು. ಆದರೆ ಇದು ವಿಶ್ವದ ದೊಡ್ಡಣ ಅಮೇರಿಕಾಕ್ಕೆ ಬಿಸಿ ತುಪ್ಪವಾಗಿತ್ತು.  ಮೊದಲನೆಯದಾಗಿ, ವೆನೆಜುವೆಲಾದಿಂದ ಅಮೆರಿಕಾ ದೊಡ್ಡ ಪ್ರಮಾಣದ ತೈಲ ಆಮದು ಮಾಡಿಕೊಳ್ಳುತ್ತದೆ. ವೆನೆಜುವೆಲಾದ ತೈಲ ಕಂಪನಿ ಸರಕಾರಿ ಸ್ವಾಮ್ಯದ್ದಾಗಿದ್ದು, ಅದರ ಸಂಪತ್ತು ಮದುರೋನಂಥ ಸರ್ವಾಧಿಕಾರಿಗಳಿಗೆ ಹೋಗುವುದು ಅಮೆರಿಕಕ್ಕೆ ಇಷ್ಟವಿಲ್ಲ.

ವೆನಿಜುವೆಲ್ಲಾ ಅಧ್ಯಕ್ಷ ನಿಕೋಲಸ್ ಮದುರೊ
ವೆನಿಜುವೆಲ್ಲಾ ಅಧ್ಯಕ್ಷ ನಿಕೋಲಸ್ ಮದುರೊ

ವೆನೆಜುವೆಲಾದಿಂದ ತೈಲ ಆಮದು ಮಾಡಿಕೊಳ್ಳುವ ಅಮೆರಿಕ ಹಾಗೂ ಅದರ ಮಿತ್ರರಾದ ಯುರೋಪ್‌ನ ದೇಶಗಳು, ವೆನೆಜುವೆಲಾದ ಮೇಲೆ ನಿರ್ಬಂಧ ವಿಧಿಸಿವೆ. ಒಂದೋ, ಮದುರೋ ಕೆಳಗಿಳಿದು, ಗೈಡೋಗೆ ದಾರಿ ಮಾಡಿಕೊಡಬೇಕು. ಇಲ್ಲವಾದರೆ, ವೆನೆಜುವೆಲಾದಿಂದ ರಫ್ತಾಗುವ ತೈಲದ ದಾರಿಗಳನ್ನೆಲ್ಲ ಬಂದ್‌ ಮಾಡುವ ಬೆದರಿಕೆ ಹಾಕಿತ್ತು. ಅಮೆರಿಕ ಇನ್ನೂ ಮುಂದೆ ಹೋಗಿ, ಆ ದೇಶದ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸುವ ಸಾಧ್ಯತೆಯನ್ನೂ ಅವಲೋಕಿಸುವುದಾಗಿ ಹೇಳಿತ್ತು. ಅಲ್ಲಿಂದ ತೈಲ ಆಮದು ಮಾಡಿಕೊಳ್ಳದಂತೆಯೂ ಇತರ ದೇಶಗಳಿಗೆ ಎಚ್ಚರಿಸಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಅಮೇರಿಕಾ ಹಾಗೂ ಕೆಲವು ಯುರೋಪ್‌ ದೇಶಗಳು ವಿಧಿಸಿದ ನಿರ್ಬಂಧದಿಂದ ವೆನುಜುವೆಲ್ಲ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ನಿಜ. ಆದರೆ ಉಚಿತ ಕೊಡುಗೆಗಳ ಯೋಜನೆಗಳಿಂದಾಗಿ ಅಲ್ಲಿಯ ಜನ ಬ್ರೆಡ್‌ಗೂ ಪರದಾಡುತ್ತಿದ್ದಾರೆ ಎಂಬುದು ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights