ಒಂದೇ ದಿನದಲ್ಲಿ 26 ದಶಲಕ್ಷ ಡಾಲರ್ ದೇಣಿಗೆ ಸಂಗ್ರಹಿಸಿದ ಕಮಲಾ ಹ್ಯಾರಿಸ್
ಅಮೆರಿಕ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಡೆಮಾಕ್ರೆಟಿಕ್ ಪಕ್ಷದಿಂದ ಸಂಸದೆ ಕಮಲಾ ದೇವಿ ಹ್ಯಾರಿಸ್ ಘೋಷಿಸಲ್ಪಟ್ಟಿದ್ದಾರೆ. ಹ್ಯಾರಿಸ್ ಅವರು ಅಭ್ಯರ್ಥಿಯಾಗಿ ಘೋಷಿತರಾದ ನಂತರ, ಕೇವಲ 24 ಗಂಟೆಗಳಲ್ಲೇ 26 ದಶಲಕ್ಷ ಡಾಲರ್ ಚುನಾವಣಾ ದೇಣಿಗೆಯನ್ನು ತಮ್ಮ ಡೆಮಾಕ್ರೆಟಿಕ್ ಪಕ್ಷಕ್ಕಾಗಿ ಸಂಗ್ರಹಿಸಿದೆ. ಇದು ಅಧ್ಯಕ್ಷ ಅಭ್ಯರ್ಥಿ ಜೋ ಬಿಡೆನ್ ಮತ್ತು ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಜಯದ ಸ್ಪಷ್ಟ ಮುನ್ಸೂಚನೆಯಾಗಿದೆ ಎಂದು ಅಮೆರಿಕಾ ಮೂಲಗಳು ತಿಳಿಸಿವೆ.
ನವೆಂಬರ್ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ನಾಯಕ ಮತ್ತು ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಕಣದಲ್ಲಿರುವ ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಅವರು ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ.
ಪ್ರಮುಖ ಹುದ್ದೆಯ ಅಭ್ಯರ್ಥಿಯಾಗಿ ಡೆಮಾಕ್ರಟಿಕ್ ಪಕ್ಷದಿಂದ ಕಪ್ಪು ಮಹಿಳೆಯನ್ನು ಆಯ್ಕೆ ಮಾಡಲಾಗಿರುವು ಅಮೆರಿಕಾದಲ್ಲಿ ವಿಶೇಷವಾಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.
ಕಮಲಾ ಹ್ಯಾರಿಸ್ ಅವರ ತಂದೆ ಆಫ್ರಿಕಾದವರು. ತಾಯಿ ಭಾರತೀಯ ಮೂಲದವರು. ಕ್ಯಾಲಿಫೋರ್ನಿಯಾದ ಅತ್ಯಂತ ಪ್ರಭಾವಿ ರಾಜಕೀಯ ನಾಯಕಿಯಾಗಿರುವ ಭಾರತೀಯ ಮೂಲದ ಕಮಲಾ ಅವರನ್ನು ಉಪಾಧ್ಯಕ್ಷೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕೆಂಬುದು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಬಯಕೆಯಾಗಿತ್ತು.
ಈಗ ಕಮಲಾ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಭಾರತೀಯ ಮತ್ತು ಆಫ್ರಿಕಾ ಮೂಲದ ಜನರಲ್ಲಿ ಸಂತಸ ಮೂಡಿಸಿದೆ.
ಈ ಮಧ್ಯೆ ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕಮಲಾ ತಮ್ಮ ಚೊಚ್ಚಲ ಭಾಷಣದಲ್ಲೇ ಅಮೆರಿಕನ್ನರ ಗಮನಸೆಳೆದರು. ಖ್ಯಾತ ವಕೀಲರು ಮತ್ತು ಕ್ಯಾಲಿಫೋರ್ನಿಯಾ ಸೆನೆಟರ್ ಆಗಿರುವ 55 ವರ್ಷದ ಕಮಲಾ ಹ್ಯಾರಿಸ್ ಅವರನ್ನು ವೈಸ್ ಪ್ರೆಸಿಡೆಂಟ್ ಕ್ಯಾಂಡಿಡೇಟ್ ಆಗಿ ನೇಮಕ ಮಾಡುವ ಮೂಲಕ ಕಪ್ಪು ವರ್ಣೀಯರ ಮತಗಳತ್ತ ಬಿಡೆನ್ ಗಮನ ಕೇಂದ್ರೀಕರಿಸಿದ್ದಾರೆ.
ಇದನ್ನೂ ಓದಿ: ಸ್ವದೇಶಿ ಎಂದರೆ ವಿದೇಶಿ ವಸ್ತುಗಳನ್ನು ತಿರಸ್ಕರಿಸುವುದಲ್ಲ! ಹೊಸ ವ್ಯಾಖ್ಯಾನ ಕೊಟ್ಟ ಮೋಹನ್ ಭಾಗವತ್

