ಒಂದೇ ಶಾಲೆಯ ನಾಲ್ವರು ವಿದ್ಯಾರ್ಥಿಗಳು ನಾಪತ್ತೆ!: ಮಕ್ಕಳ ಚೆಲ್ಲಾಟಕ್ಕೆ ಪೋಷಕರಿಗೆ ಪ್ರಾಣ ಸಂಕಟ!

ನಾವಂತು ನಾಲ್ಕು ಅಕ್ಷರ ಕಲಿಯದೇ ನಮ್ಮ ಬದುಕು ಬರಡಾಗಿದೆ. ಮಕ್ಕಳಾದರು ಅಕ್ಷರ ಕಲಿತು ಬಾಳು ಬಂಗಾರವಾಗಲಿ ಅಂತಾ ಕಡು ಬಡವರಾದರು. ಒಳ್ಳೆಯ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸುತ್ತಿದ್ದರು. ತಾವು ನಿತ್ಯ ಕಷ್ಟಪಟ್ಟು ದುಡಿದರು ಮಕ್ಕಳಿಗೆ ಯಾವುದರಲ್ಲು ಕಡಿಮೆ ಮಾಡಿರಲಿಲ್ಲ. ಆದ್ರು ಆ ಮಕ್ಕಳು ತಮ್ಮ ಪೋಷಕರಿಗೆ ಮಾತ್ರ ಕಣ್ಣೀರು ಕೊಡುಗೆಯಾಗಿ ನೀಡಿ ಹೊರಟು ಹೋಗಿದ್ದಾರೆ.

ಹೌದು ತಮ್ಮ ಭವಿಷ್ಯಕ್ಕೆ ಬೆಳಕಾಗಬೇಕಿದ್ದ ಮಕ್ಕಳೇ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾರೆ. ಬುಜದೆತ್ತರಕ್ಕೆ ಬೆಳೆದು ನಿಂತಿದ್ದ ಮಕ್ಕಳು ಕಾಣದಾದಾಗ ಎಂತಹವರಿಗು ಇನ್ನಿಲ್ಲದಂತೆ ನೋವು ದುಃಖ ಕಾಡುತ್ತದೆ. ಹಾಗಾಗಿ ಒಡ ಹುಟ್ಟಿದ ಮಕ್ಕಳನ್ನು ಹುಡುಕಿ‌ ಕೊಡುವಂತೆ ಪೋಷಕರೇ ಕೈ ಮುಗಿದು ಕಣ್ಣೀರಿಡುತ್ತಿದ್ದಾರೆ ಹೊಸೂರು ಮುಖ್ಯರಸ್ತೆ ಸಿಂಗಸಂದ್ರ ಗ್ರಾಮದ ವಾಸಿಗಳಾದ ರವಿ, ನಾಗರತ್ನ, ಮುನಿರತ್ನ ಮತ್ತು ಭಾರತಿರವರು ತಮ್ಮ ಮಕ್ಕಳಿಗೊಸ್ಕರ ಕಣ್ಣೀರಿಡುತ್ತಿದ್ದಾರೆ. ಈ ಪೋಟೋಗಳಲ್ಲಿ ಕಾಣುತ್ತಿರುವ ವಿದ್ಯಾರ್ಥಿಗಳಾದ ಸಿಂಹಾದ್ರಿ(16), ಸೃಜನ್(16), ಗೋಕುಲ್(16) ಮತ್ತು ತರುಣ್(16) ಇಲ್ಲಿನ ನ್ಯೂ ಬಿಷಪ್ ಕಾಟನ್ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಇದೆ ತಿಂಗಳು 24 ನೇ ತಾರೀಖು ಕಾಣೆಯಾಗಿದ್ದಾರೆ.

ಅಂದು ಬೆಳಗ್ಗೆ ಟ್ಯೂಷನ್ ಹೋಗಿದ್ದ ನಾಲ್ವರು ಎಂದಿನಂತೆ ವಾಪಾಸ್ಸು ಮನೆಗೆ ಬಂದಿದ್ದಾರೆ. ಬಳಿಕ ಹೊರ ಹೋದ ನಾಲ್ವರು ಕಾಣೆಯಾಗಿದ್ದಾರೆ. ಎಂದಿನಂತೆ ಆಟ ಆಡಲು ಹೋಗಿದ್ದಾರೆ ಎಂದುಕೊಂಡು ಪೋಷಕರು ಸುಮ್ಮನಾಗಿದ್ದಾರೆ. ಆದ್ರೆ ಸಂಜೆಯಾದ್ರು ಮನೆಗೆ ಮಕ್ಕಳು ವಾಪಸ್ ಬರದಿದ್ದಾಗ. ದಿಗಿಲುಗೊಂಡ ಪೋಷಕರು ಸ್ನೇಹಿತರು, ಸಹಪಾಠಿಗಳು, ಸಂಬಂಧಿಕರು ಸೇರಿದಂತೆ ಎಲ್ಲಾ ಕಡೆ ವಿಚಾರಿಸಿದ್ದಾರೆ. ನಾಲ್ವರು ವಿದ್ಯಾರ್ಥಿಗಳು ಮಾತ್ರ ಪತ್ತೆಯಾಗಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಕಾಣೆಯಾದ ಸಿಂಹಾದ್ರಿ ತಾಯಿ ಭಾರತಿ ಮತ್ತು ತರುಣ್ ತಾಯಿ ಮುನಿರತ್ನ ತಿಳಿಸಿದ್ದಾರೆ.

ಪರಪ್ಪನ ಅಗ್ರಹಾರ ಪೊಲೀಸರು ದೂರು ದಾಖಲಿಸಿಕೊಂಡು ಎಲ್ಲಾ ಕಡೆ ಹುಡುಕಾಟ ನಡೆಸುತ್ತಿದ್ದು, ಇಲ್ಲಿಯವರೆಗೆ ಕಾಣೆಯಾದ ನಾಲ್ವರು ವಿದ್ಯಾರ್ಥಿಗಳು ಪತ್ತೆಯಾಗಿಲ್ಲ. ಎಷ್ಟು ಹುಡುಕಿದರು ಮಕ್ಕಳು ಪತ್ತೆಯಾಗದ ಕಾರಣ ಪೋಷಕರು ಕಂಗಲಾಗಿದ್ದಾರೆ. ಮಕ್ಕಳು ಎಲ್ಲಿದ್ದಾರೋ, ಏನು ಮಾಡುತ್ತಿದ್ದಾರೋ ಎಂದು ಮಕ್ಕಳಿಗಾಗಿ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಎಲ್ಲಿದ್ದರು ಮನೆಗೆ ಬರುವಂತೆ ಮಕ್ಕಳಲ್ಲಿ ಮನವಿ ಮಾಡಿದ್ದಾರೆ. ನಿಮ್ಮನ್ನು ಬೈಯ್ಯುವುದಿಲ್ಲ ಹೊಡೆಯುವುದಿಲ್ಲ ಎಲ್ಲಿದ್ದರು ಮನೆಗೆ ವಾಪಸ್ ಬರುವಂತೆ ಕಣ್ಣೀರಿಟ್ಟು ಅಂಗಲಾಚುತ್ತಿದ್ದಾರೆ. ಅಂದಹಾಗೆ ಮನೆಯಿಂದ ಹೊರ ಹೋಗುವ ವೇಳೆ ಓರ್ವ ಸಿಮ್ ಇಲ್ಲದ ಮೊಬೈಲ್ ಮತ್ತು ಚಾರ್ಜರ್ ತೆಗೆದುಕೊಡಿದ್ದು, ಮತ್ತೊಬ್ಬ ಬಟ್ಟೆಗಳು, ಇನ್ನೊಬ್ಬ 12 ಸಾವಿರ ನಗದು ತೆಗೆದುಕೊಂಡು ಹೋಗಿದ್ದಾನೆ ಎಂದು ಕಾಣೆಯಾದ ಸೇಜನ್ ತಾಯಿ ನಾಗರತ್ನ ಮತ್ತು ಗೋಕುಲ್ ತಂದೆ ರವಿ ಮಕ್ಕಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಒಟ್ನಲ್ಲಿ ಘಟನೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿದ್ದು, ಪ್ರತ್ಯೇಕ ತಂಡ ರಚಿಸಿ ಹುಡುಕಾಟ ನಡೆಸಿದ್ದು, ಎಲ್ಲಿಯಾದರು ಮೇಲ್ಕಂಡ ಪೋಟೋಗಳಲ್ಲಿರುವ ಬಾಲಕರು ಕಂಡುಬಂದಲ್ಲಿ ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಲು ಮಕ್ಕಳ ಪೋಷಕರು ಮನವಿ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights