ಔರಂಗಾಬಾದ್ ಅಪಘಾತವಲ್ಲ, 383 ಸಾವುಗಳು ಲಾಕ್‌ಡೌನ್‌ ಶಿಕ್ಷೆಯಿಂದ ಸಂಭವಿಸಿವೆ

ಶುಕ್ರವಾರ, ಮಧ್ಯಪ್ರದೇಶದ ತಮ್ಮ ಮನೆ ತಲುಪಲು ರೈಲು ಹಿಡಿಯುವ ಭರವಸೆಯಿಂದ ನಡೆದು ಹೋಗುತ್ತಿದ್ದ 16 ವಲಸೆ ಕಾರ್ಮಿಕರು ರೈಲುಗೆ ಸಿಲುಕಿ ಸಾವನ್ನಪ್ಪದ್ದಾರೆ. ಇದು ಸಾವಲ್ಲ ವ್ಯವಸ್ಥೆಯಿಂದಾದ ಕೊಲೆ ಎಂದು ಸರ್ಕಾರದ ಮೇಲೆ ತೀವ್ರ ಅಸಮಧಾನ ವ್ಯಕ್ತವಾಗುತ್ತಿದೆ.

ರಸ್ತೆಗಳಲ್ಲಿ ಪೊಲೀಸರ ಹೊಡೆತಗಳಿಂದ ತಪ್ಪಿಸಿಕೊಳ್ಳಲು ಮತ್ತು ರೈಲು ಸಂಚಾರವಿಲ್ಲ ಎಂದು ಭಾವಿಸಿ ಅವರು ರೈಲ್ವೆ ಹಳಿಯ ಉದ್ದಕ್ಕೂ ನಡೆಯುತ್ತಿದ್ದರು. ಹಲವಾರು ಗಂಟೆಗಳ ಕಾಲ ನಡೆದು ದಣಿದಿದ್ದ ಕಾರ್ಮಿಕರು, ವಿಶ್ರಾಂತಿಗಾಗಿ ಕುಳಿತು ನಿದ್ರೆಗೆ ಜಾರಿದ್ದರು. ಸುಮಾರು 5.20ರ ಮುಂಜಾನೆ ಬಂದ ಗೂಡ್ಸ್‌ ರೈಲು ಅವರ ಇನ್ನು ಕಣ್ಣು ಬಿಡದಂತೆ ಚಿರನಿದ್ರೆಗೆ ದೂಡಿ ಹೋಯಿತು.

ವಲಸಿಗರು ಮಹಾರಾಷ್ಟ್ರದ ಜಲ್ನಾದಲ್ಲಿರುವ ಖಾಸಗಿ ಉಕ್ಕಿನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಮಾರ್ಚ್ 24 ರಂದು ಮೊದಲ ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಅವರಿಗೆ ವೇತನ ನೀಡಲಾಗಿಲ್ಲ. ಮತ್ತೆ ಯಾವಾಗ ಕೆಲಸ ಆರಂಭವಾಗುತ್ತದೆ ಎಂದು ತಿಳಿಉದ ಹತಾಶ ಪರಿಸ್ಥಿತಿಯಿಂದಾಗಿ ಕಾರ್ಮಿಕರು ತಮ್ಮ ಕುಟುಂಬದೊಂದಿಗೆ ಇರಲು ಬಯಸಿ ಮನೆಯ ಹಿಂದಿರುಗಲು ಹೊರಟಿದ್ದರು. ಸಾರಿಗೆ ವ್ಯವಸ್ಥೆ ಇಲ್ಲದ ಆ ಕಾರ್ಮಿಕರು ರೈಲು ಹಿಡಿಯುವ ಭರವಸೆ ಮತ್ತು ಪೊಲೀಸರಿಂದ ತಪ್ಪಿಸಿಕೊಳ್ಳಲು ರೈಲು ಹಳಿಗಳ ಮೇಲೆ ನಡೆಯಲು ನಿರ್ಧರಿಸಿದ್ದರು.

ಶನಿವಾರ ರಾತ್ರಿ ನಡೆದ ಮತ್ತೊಂದು ಘಟನೆಯಲ್ಲಿ, ತೆಲಂಗಾಣದ ಹೈದರಾಬಾದ್‌ ನಗರದಿಂದ ಉತ್ತರ ಪ್ರದೇಶದ ಆಗ್ರಾಕ್ಕೆ ಮಾವಿನಕಾಯಿ ಸಾಗಿಸುತ್ತಿದ್ದ ಟ್ರಕ್ ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯ ಪಾಥಾ ಗ್ರಾಮದಲ್ಲಿ ಪಲ್ಟಿ ಹೊಡೆದು ಅಫಘಾತಕ್ಕೀಡಾಯಿತು. ಆ ಟ್ರಕ್‌ನಲ್ಲಿದ್ದ 18 ಕಾರ್ಮಿಕರಲ್ಲಿ ಕನಿಷ್ಠ ಐದು ವಲಸೆ ಕಾರ್ಮಿಕರು ಸಾವನ್ನಪ್ಪಿದರು ಮತ್ತು 13 ಮಂದಿ ಗಾಯಗೊಂಡಿದ್ದಾರೆ.

ಈ ಎರಡು ಅಪಘಾತಗಳಲ್ಲಿ ಸಾವನ್ನಪ್ಪಿದ ಕಾರ್ಮಿಕರು ಕೊವಿಡ್-19 ಹೊರತುಪಡಿಸಿ ಇತರ ಕಾರಣಗಳಿಂದಾಗಿ ಲಾಕ್‌ಡೌನ್ ಸಮಯದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಲಾಕ್‌ಡೌನ್‌ನಿಂದದಾ ಸಾವುಗಳು (ಮೇ 10 2020 ರವರೆಗೆ) 

ಸಾವಿಗೆ ಕಾರಣಗಳು ಮತ್ತು ಸಾವಿನ ಸಂಖ್ಯೆ   

  • ಹಸಿವು ಮತ್ತು ಆರ್ಥಿಕ ತೊಂದರೆ – 47·
  • ಬಳಲಿಕೆ (ನಡೆದು ಪ್ರಯಾಣ, ಸರತಿ ಸಾಲಿನಲ್ಲಿ ನಿಂತಿರುವುದು)- 26·
  • ಪೊಲೀಸ್ ದೌರ್ಜನ್ಯ ಅಥವಾ ಸರ್ಕಾರದ ಹಿಂಸೆ -12·
  • ವೈದ್ಯಕೀಯ ಆರೈಕೆಯ ಕೊರತೆ (ವೃದ್ಧರು ಅಥವಾ ರೋಗಿಗಳು) – 40·
  • ಸೋಂಕಿನ ಭಯ, ಒಂಟಿತನ ಮತ್ತು ನಡೆದಾಡುವ ಸ್ವಾತಂತ್ರ್ಯದ ಕೊರತೆಯಿಂದಾಗಿ ಆತ್ಮಹತ್ಯೆಗಳು – 83·
  • ಮದ್ಯ ನಿಷೇಧ (ಸಂಬಂಧಿತ ಸಾವುಗಳು ಮತ್ತು ಆತ್ಮಹತ್ಯೆಗಳು) – 46·
  • ನಡೆದು ಪ್ರಯಾಣ / ವಲಸೆಯ ಕಾರಣದಿಂದಾಗಿ ರಸ್ತೆ ಅಥವಾ ರೈಲು ಅಪಘಾತಗಳು – 74·
  • ಲಾಕ್‌ಡೌನ್‌ಗೆ ಸಂಬಂಧಿಸಿದ ಅಪರಾಧಗಳಿಂದ ಸಾವು (ಕೋಮುವಾದವಲ್ಲ)-14·
  • ವರ್ಗೀಕರಿಸದ (ವರ್ಗೀಕರಿಸಲು ಸಾಧ್ಯವಿಲ್ಲ, ಹೆಚ್ಚಿನ ವಿವರಗಳು ಬೇಕು)- 41

(ಮಧ್ಯಪ್ರದೇಶದಲ್ಲಿ ಶನಿವಾರ ರಾತ್ರಿ ಪ್ರಯಾಣಿಸುತ್ತಿದ್ದ ಟ್ರಕ್ ಪಲ್ಟಿಯಾಗಿ ಮೃತಪಟ್ಟ ಐದು ಕಾರ್ಮಿಕರನ್ನು ಪಟ್ಟಿ ಒಳಗೊಂಡಿದೆ)

ಇದು ಸುದ್ದಿ ವರದಿಗಳಿಂದ ಮಾಹಿತಿ ಹಾಗೂ “ಸ್ವತಂತ್ರ ಅಧ್ಯಯನಕಾರರು ಮತ್ತು ಕ್ರಿಯಾತ್ಮಕ ಸಂಶೋಧನೆ, ಸಾಮಾಜಿಕ-ಆರ್ಥಿಕ ಹಕ್ಕುಗಳು ಮತ್ತು ಸಂಬಂಧಿತ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿ ಸ್ವಯಂಸೇವಕರು” ಕಲೆ ಹಾಕಿರುವ ಮಾಹಿತಿ.

ತಮ್ಮ ಮನೆಗಳಿಗೆ ಹಿಂದಿರುಗುವಾಗ ರಸ್ತೆ ಅಪಘಾತಗಳು, ಹಸಿವು, ವೈದ್ಯಕೀಯ ಆರೈಕೆ ನಿರಾಕರಣೆ, ಪೊಲೀಸ್ ದೌರ್ಜನ್ಯ, ಬಳಲಿಕೆ, ಆತ್ಮಹತ್ಯೆಗಳು – ಲಾಕ್‌ಡೌನ್‌ನ ಎಲ್ಲಾ ಪರಿಣಾಮಗಳಿಂದಾಗಿ ಹೆಚ್ಚಿನ ಸಂಖ್ಯೆಯ ಜನರು ಸಾವನ್ನಪ್ಪಿದ್ದಾರೆ ಎಂದು ತೋರಿಸುತ್ತದೆ.

 “ಲಾಕ್ ಡೌನ್ ಆದ ಕೂಡಲೇ, ನಾವು ಸಾಕಷ್ಟು ಸಾವಿನ ವರದಿಗಳನ್ನು ನೋಡಲಾರಂಭಿಸಿದೆವು. ಮನೆಗೆ ಹಿಂದಿರುಗುವಾಗ ಜನರು ಸಾಯುತ್ತಿದ್ದಾರೆ, ಆರೋಗ್ಯ ರಕ್ಷಣೆಯ ನಿರಾಕರಣೆಯಿಂದ ಮಹಿಳೆಯರು ಸಾಯುತ್ತಿದ್ದಾರೆ. ಈ ಸಾವುಗಳು ತುಂಬಾ ದುಃಖಕರವಾಗಿದ್ದವು” ಎಂದು ಅಮೆರಿಕದ ಅಟ್ಲಾಂಟಾದ ಎಮೋರಿ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಪಿಎಚ್‌ಡಿ ಓದುತ್ತಿರುವ ಶರ್ಮಾ ಅವರು ತಿಳಿದ್ದಾರೆ ಎಂದು ದಿ ವೈರ್‌ ವರದಿ ಮಾಡಿದೆ.

ಅವರ ಪ್ರಕಾರ, ಔರಂಗಾಬಾದ್‌ನಲ್ಲಿ ನಡೆದ ಘಟನೆಯಲ್ಲಿ 16 ವಲಸೆ ಕಾರ್ಮಿಕರು ಸಾವನ್ನಪ್ಪಿರುವುದು ಒಂದೇ ದುರುಂತದಲ್ಲಿ ಅತಿ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮಾರ್ಚ್ 28 ರಂದು ಲಾಕ್‌ಡೌನ್‌ ಮಾಡಿದ ಕೆಲವು ದಿನಗಳ ನಂತರ, ಮನೆಗೆ ಹಿಂದಿರುಗಿ ಹೊರಟಿದ್ದ 08 ವಲಸಿಗರು ಕರ್ನಾಟಕದ ರಾಯಚೂರಿನಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು.

ಮದ್ಯ ನಿಷೇಧ, ಸೋಂಕಿನ ಲಕ್ಷಣಗಳ ಭಯ ಮತ್ತು ಉದ್ಯೋಗ ಕಳೆದುಕೊಳ್ಳುವಂತಹ ಕಾರಣಗಳಿಗಾಗಿ ಇದುವರೆಗೆ ಅತಿ ಹೆಚ್ಚು ಸಂಖ್ಯೆಯ ಸಾವುಗಳು(83) ಆತ್ಮಹತ್ಯೆಗಳಿಂದಾಗಿವೆ. ಹಸಿವಿನಿಂದಾಗಿ, ವೈದ್ಯಕೀಯ ಆರೈಕೆ ನಿರಾಕರಣೆ ಮತ್ತು ಪಡಿತರ ಅಥವಾ ಹಣಕ್ಕಾಗಿ ಕ್ಯೂನಲ್ಲಿ ನಿಂತು ಬಳಲಿಕೆಗೆ ತುತ್ತಾಗಿ ಹೆಚ್ಚಿನ ಸಂಖ್ಯೆಯ ಜನರು ಸಾವನ್ನಪ್ಪಿದ್ದಾರೆ.

ಮಾಹಿತಿಯನ್ನು ಕಲೆಹಾಕಲು ಸಂಶೋಧಕರು ಕನ್ನಡ, ಮರಾಠಿ, ಒಡಿಯಾ, ತೆಲುಗು, ಬಂಗಾಳಿ, ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ಗೂಗಲ್ ಅಲರ್ಟ್‌ಗಳನ್ನು ಇಟ್ಟುಕೊಂಡು ಸಂಗ್ರಹಿಸಲಾಗುತ್ತಿದ್ದು, ವಾಲೆಂಟಿಯರ್ಸ್‌ ಅವಗಳನ್ನು ಭಾಷಾಂತರ ಮಾಡಲು ಸಹಾಯ ಮಾಡುತ್ತಾರೆ. ನಾವು ಅವುಗಳನ್ನು ಪರಿಶೀಲಿಸಿ ಸತ್ಯಾಸತ್ಯತೆಯನ್ನು ಗುರುತಿಸುತ್ತೇವೆ ಎಂದು ಶರ್ಮಾ ತಿಳಿಸಿದ್ದಾರೆ.

“ನಾವು ತಳಹಂತದ ವರದಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ‘ವಿಶ್ವಾಸಾರ್ಹ’ ಸುದ್ದಿ ಮೂಲಗಳಿಂದ ವರದಿಯಾದ ಆ ಸಾವುಗಳನ್ನು ಮಾತ್ರ ಸಂಶೋಧಕರು ಗಣನೆಗೆ ತೆಗೆದುಕೊಳ್ಳುತ್ತಾರೆ. ಸ್ಥಳೀಯ ಮಾಧ್ಯಮಗಳ ವರದಿಗಳು ನಮ್ಮನ್ನು ತಲುಪುತ್ತಿಲ್ಲ. ಇದರಿಂದಾಗಿ ನಾವು ಸಾಕಷ್ಟು ಸಾವುಗಳ ವರದಿಯನ್ನು ಕಳೆದುಕೊಂಡಿದ್ದೇವೆ. ಅಲ್ಲದೆ, ಬಹಳಷ್ಟು ಸಾವುಗಳು ವರದಿ ಆಗುವುದೇಯಿಲ್ಲ,” ಎಂದು ಅವರು ಹೇಳಿದರು.

ತಮಿಳುನಾಡಿನ ಬಸ್ ನಿಲ್ದಾಣದ ಬಳಿ ವಾಸಿಸುತ್ತಿದ್ದ ಮತ್ತು ಆಹಾರಕ್ಕಾಗಿ ಪ್ರಯಾಣಿಕರ ಮೇಲೆ ಅವಲಂಬಿತನಾಗಿದ್ದ 80 ವರ್ಷದ ವ್ಯಕ್ತಿಯೊಬ್ಬ ಲಾಕ್‌ಡೌನ್‌ ಆದ ನಂತರ ಸಾವನ್ನಪ್ಪಿದ್ದಾನೆ. ಲಾಕ್‌ಡೌನ್ ಅನ್ನು ಮೊದಲ ಬಾರಿಗೆ ವಿಸ್ತರಿಸಿದ ನಂತರ ಮನೆಗೆ ತೆರಳಲು 100 ಕಿಲೋಮೀಟರ್ ನಡೆದು 12 ವರ್ಷದ ಬಾಲಕಿ, ಮನೆ ತಲುಪುವ 40 ನಿಮಿಷ ಮುಂಚೆ ಬಳಲಿಕೆಯಿಂದ ಸಾವನ್ನಪ್ಪಿದ್ದಾಳೆ.

ಶರ್ಮಾ ಪ್ರಕಾರ, “ಸಾಯುತ್ತಿರುವವರು ಬಡ ಸಮುದಾಯದವರು. ಇವರು ಕಾರ್ಮಿಕ ವರ್ಗದ ಜನರು. ವರದಿಯಾದ ಸಾವುಗಳಲ್ಲಿ ಮಹಿಳೆಯರಿಗಿಂತ ಹೆಚ್ಚಿನ ಪುರುಷರು ಸೇರಿದ್ದಾರೆ. ಏಕೆಂದರೆ ಕೆಲಸಕ್ಕಾಗಿ ವಲಸೆ ಹೋಗಿದ್ದವರಲ್ಲಿ ಪುರುಷರ ಸಂಖ್ಯೆ ಹೆಚ್ಚು” ಎಂದು ಅವರು ಹೇಳಿದರು.

COVID-19 ಭಯದಿಂದಾಗಿ ಆಸ್ಪತ್ರೆಗಳು ಮತ್ತು ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸುವುದು ಸಾವಿಗೆ ಮತ್ತೊಂದು ಕಾರಣವಾಗಿದೆ. ತೆಲಂಗಾಣದಲ್ಲಿ ಗರ್ಭಿಣಿ ಮಹಿಳೆಯನ್ನು ಆರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡದೆ ಅಲೆದಾಡಿಸಿವೆ ಎಂದು ಟೈಮ್ಸ್ ಆಫ್ ಇಂಡಿಯಾ ಏಪ್ರಿಲ್‌ನಲ್ಲಿ ವರದಿ ಮಾಡಿದೆ. ಆಕೆ COVID-19 ಪರೀಕ್ಷಿಸಲ್ಪಟ್ಟಳು ಮತ್ತು ಫಲಿತಾಂಶಗಳು ನಕಾರಾತ್ಮಕವಾಗಿ ಬಂದ ನಂತರವೇ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದಳು. ವಿಳಂಬದಿಂದಾಗಿ, ಮಗು ಸತ್ತುಹೋಯಿತು. ಒಂದು ದಿನದ ನಂತರ, ಮಹಿಳೆ ಸಹ ಸಾವನ್ನಪ್ಪಿದರು.

ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಅವಳಿ ಮಕ್ಕಳೊಂದಿಗೆ ಗರ್ಭಿಣಿಯಾಗಿದ್ದ ಮಹಿಳೆ ಸಾವನ್ನಪ್ಪಿದರು. ಆಕೆ ಸ್ಥಳೀಯ ಆಡಳಿತವು ‘ಕೆಂಪು ವಲಯ’ ಎಂದು ವರ್ಗೀಕರಿಸಲ್ಪಟ್ಟ ಪ್ರದೇಶದ ನಿವಾಸಿ. ಆ ಕಾರಣಕ್ಕಾಗಿ ವೈದ್ಯರು ಆಕೆಗೆ ಚಿಕಿತ್ಸೆ ನೀಡಲು ಹಿಂಜರಿದ್ದರು.

ಲಾಕ್‌ಡೌನ್‌ನ ಪರಿಣಾಮವಾಗಿ ಸಂಭವಿಸಿದ ಎಲ್ಲಾ ಸಾವುಗಳ ಮಾಹಿತಿಯನ್ನು ಪಡೆಯಲಾಗಿಲ್ಲ ಎಂದು ಸಂಶೋಧಕರು ಗಮನಸೆಳೆದಿದ್ದಾರೆ. “ಗುರುತಿಸಲಾಗಿರುವ ಸಾವುಗಳ ಸಂಖ್ಯೆ ಕಡಿಮೆ ಎಂದು ಒತ್ತಿಹೇಳಬೇಕು: ಸಾವಿನ ಒಂದು ಭಾಗವನ್ನು ಮಾತ್ರ ಮಾಧ್ಯಮಗಳು ವರದಿ ಮಾಡಿವೆ ಮತ್ತು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾದ ಕೆಲವು ಸಾವುಗಳ ವರದಿ ನಮೆಗೆ ದೊರೆತಿಲ್ಲ” ಎಂದು ಅವರು ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights