ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಟೀಕೆ

ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿಯಿಂದೇ ದೇಶದ ಆರ್ಥಿಕತೆ ಕುಸಿದಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಟೀಕಿಸಿದ್ದಾರೆ.

ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ಅವರು, ದೇಶದ ಆರ್ಥಿಕತೆಯನ್ನು ನೋಡಿದಾಗ ಹೆದರಿಕೆ ಆಗುತ್ತಿದೆ. ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ ಶೇ.5ಕ್ಕೆ ಕುಸಿದಿದೆ. ಇದು ದೇಶದ ಆರ್ಥಿಕತೆ ಕುಸಿಯುತ್ತಿರುವುದರ ಮುನ್ಸೂಚನೆ ಎಂದು ಅಭಿಪ್ರಾಯಪಟ್ಟರು.

ಮಾನವ ನಿರ್ಮಿತ ಪ್ರಮಾದ ನೋಟು ನಿಷೇಧ ಮತ್ತು ಸರಿಯಾದ ರೀತಿಯಲ್ಲಿ ಜಿಎಸ್‍ಟಿಯನ್ನು ಅನುಷ್ಠಾನಕ್ಕೆ ತರದ ಕಾರಣ ನಮ್ಮ ಆರ್ಥಿಕತೆ ಚೇತರಿಕೆ ಕಾಣುತ್ತಿಲ್ಲ. ಹೂಡಿಕೆದಾರರು ಭಯದಲ್ಲಿದ್ದಾರೆ. ತನ್ನ ಎದುರಾಳಿಗಳ ವಿರುದ್ಧ ರಾಜಕೀಯ ದ್ವೇಷ ಮಾಡುವುದನ್ನು ಬಿಟ್ಟು ಸರ್ಕಾರ ಆರ್ಥಿಕತೆಯನ್ನು ಮೇಲಕ್ಕೆ ಎತ್ತಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಏಪ್ರಿಲ್‍ನಿಂದ ಜೂನ್ ವರೆಗಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.5ಕ್ಕೆ ಕುಸಿದಿದೆ. ಕಳೆದ ಆರುವರೆ ವರ್ಷಗಳಲ್ಲಿ ಅತ್ಯಂತ ಮಂದಗತಿಯ ಬೆಳವಣಿಗೆ ಇದಾಗಿದ್ದು, ಕೃಷಿ ಮತ್ತು ತಯಾರಿಕಾ ವಲಯದ ಕಳಪೆ ನಿರ್ವಹಣೆಯಿಂದ ಜಿಡಿಪಿ ಕಡಿಮೆ ದಾಖಲಾಗಿದೆ. ಮೇ ಅಂತ್ಯಕ್ಕೆ ಕೊನೆಗೊಂಡ ಕೊನೆಯ ತ್ರೈಮಾಸಿಕದಲ್ಲಿ ಶೇ.5.8 ಜಿಡಿಪಿ ದಾಖಲಾಗಿತ್ತು.

2018-19ರ ಮೊದಲ ತ್ರೈಮಾಸಿಕದಲ್ಲಿ ಉತ್ಪಾದನಾ ವಲಯ ಶೇ.12.1 ರಷ್ಟು ಪ್ರಗತಿ ಸಾಧಿಸಿದ್ದರೆ ಈ ಬಾರಿ ಶೇ.0.6 ಬೆಳವಣಿಗೆ ಸಾಧಿಸಿದೆ. ಕೃಷಿ, ಅರಣ್ಯ, ಮೀನುಗಾರಿಗೆ ಕ್ಷೇತ್ರ ಶೇ.2 ರಷ್ಟು ಬೆಳವಣಿಗೆ ಸಾಧಿಸಿದರೆ ಕಳೆದ ಬಾರಿ ಈ ಅವಧಿಯಲ್ಲಿ ಶೇ.5.1 ರಷ್ಟು ಪ್ರಗತಿ ಸಾಧಿಸಿತ್ತು. ನಿರ್ಮಾಣ ವಲಯ 2018-19 ಮೊದಲ ತ್ರೈಮಾಸಿಕದಲ್ಲಿ ಶೇ.9.6 ರಷ್ಟು ಪ್ರಗತಿ ಸಾಧಿಸಿದ್ದರೆ ಈ ಬಾರಿ ಶೇ.5.7ಕ್ಕೆ ಕುಸಿದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights