ಕೊರೊನವೈರಸ್ ಗೆ ಕೋಮು ಬಣ್ಣ ನೀಡುವುದರ ವಿರುದ್ಧ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದೆ ಬಿಜೆಪಿ ಅಧ್ಯಕ್ಷ ನಡ್ಡಾ
ಕೋವಿಡ್-19 ಸಾಂಕ್ರಾಮಿಕದ ಹೆಸರಿನಲ್ಲಿ “ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುವುದು” ಅಥವಾ “ಕೋಮು ಬಣ್ಣ” ನೀಡುವುದರಿಂದ ಪಕ್ಷದ ಮುಖಂಡರು ದೂರ ಉಳಿಯಬೇಕೆಂದು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಆಗ್ರಹಿಸಿದ್ದಾರೆ.
ಮಾರ್ಚ್ ಮಧ್ಯಭಾಗದಲ್ಲಿ ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ತಬ್ಲೀಗಿ ಜಮಾತ್ ಮುಸ್ಲಿಂ ಸಮಾವೇಶದಲ್ಲಿ ಭಾಗಿಯಾಗಿದ್ದ ಜನರಲ್ಲಿ 400 ಜನ ಕೊರೊನ ಸೋಂಕಿತರಾಗಿದ್ದು ಮತ್ತು 15 ಜನ ಮೃತಪಟ್ಟಿದ್ದು, ಇಡೀ ಕೊರೊನ ಸಾಂಕ್ರಾಮಿಕಕ್ಕೆ ಕೋಮು ತಿರುವು ನೀಡಲು ಕೆಲವರು ಪ್ರಯತ್ನಿಸಿದ್ದರು. ಈ ಹಿನ್ನಲೆಯಲ್ಲಿ ನಡ್ಡಾ ಈ ಹೇಳಿಕೆ ನೀಡಿದ್ದಾರೆ.
ಗುರುವಾರ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ಮುಖಂಡರ ಜೊತೆಗೆ ನಡೆಸಿದ ಸಭೆಯಲ್ಲಿ, ಯಾವುದೇ ಪಕ್ಷದ ಮುಖಂಡ ಭಿನ್ನಾಭಿಪ್ರಾಯ ಮೂಡಿಸುವಂತಹ, ಪ್ರಚೋದಿಸುವಂತಹ ಹೇಳಿಕೆ ನೀಡಬಾರದು ಆದರೆ ಪ್ರಧಾನ ಮಂತ್ರಿಯವರ ಮತ್ತು ಯಾವುದೇ ಪಕ್ಷದ ರಾಜ್ಯ ಸರ್ಕಾರಗಳ ಕೆಲಸಗಳಿಗೆ ಬೆಂಬಲ ನೀಡಬೇಕು ಎಂದು ಹೇಳಿರುವುದಾಗಿ ಪಕ್ಷದ ಮೂಲಗಳು ತಿಳಿಸಿರುವುದಾಗಿ ದ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಬಿಜೆಪಿ ಪಕ್ಷದ ಕೆಲವು ನಾಯಕರು ಜಮಾತ್ ಸಮಾವೇಶವನ್ನು ಕೊರೊನಜಿಹಾದ್ ಎಂದು ಬಿಂಬಿಸುತ್ತಿದ್ದ ಈ ಸಮಯದಲ್ಲಿ ನಡ್ಡಾ ಅವರ ಈ ಹೇಳಿಕೆ ಪ್ರಾಮುಖ್ಯತೆ ಪಡೆದಿದೆ.
ಎಪ್ರಿಲ್ 1 ರಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿ “ದೆಹಲಿಯ ಕರಾಳತೆ ಸ್ಫೋಟಿಸುತ್ತಿದೆ! ಕಳೆದ ಮೂರು ತಿಂಗಳು ಜಾಮಿಯಾದಿಂದ ಶಾಹಿನ್ ಭಾಗ್ ವರೆಗೆ, ಜಫರ್ ಬಾದ್ ನಿಂದ ಸೀಲಾಮಪುರ್ ವರೆಗೆ ಸಿ ಎ ಎ ವಿರೋಧಿ ಪ್ರತಿಭಟನೆಗಳಿಂದ ಇಸ್ಲಾಮಿಕ್ ಸ್ಫೋಟವಾಗಿತ್ತು. ಮತ್ತೆ ಈಗ ತೀವ್ರವಾದಿ ತಬ್ಲೀಗಿ ಜಮಾತ್ ನವರು ಅಕ್ರಮವಾಗಿ ಸಭೆ ಸೇರಿದ್ದಾರೆ. ಇದನ್ನು ಸರಿಪಡಿಸಬೇಕು!” ಎಂದು ಟ್ವೀಟ್ ಮಾಡಿದ್ದರು.
ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಮುಕ್ತಾರ್ ಅಬ್ಬಾಸ್ ನಖ್ವಿ “ತಬ್ಲೀಗಿ ಜಮಾತ್ ತಾಲಿಬಾನಿ ಅಪರಾಧ ಎಸಗಿದ್ದಾರೆ. ಇದು ಬೇಜವಾಬ್ದಾರಿಯಲ್ಲ. ಗಂಭೀರ ಅಪರಾಧ. ಇಡೀ ದೇಶ ಕೊರೊನ ವಿರುದ್ಧ ಹೋರಾಡುತ್ತಿರುವಾಗ ಈ ಪಾಪಕ್ಕೆ ಕ್ಷಮೆ ಇಲ್ಲ” ಎಂದು ಟ್ವೀಟ್ ಮಾಡಿದ್ದರು.
ಈಗ ಬಿಜೆಪಿ ಅಧ್ಯಕ್ಷರು ಇವುಗಳಿಂದ ದೂರ ಉಳಿಯಲು ನೀಡಿರುವ ಕರೆ ಫಲ ಕೊಡುವುದೇ ಕಾಡು ನೋಡಬೇಕು!
“ರಾಜ್ಯ ಸರ್ಕಾರಗಳು ಮಾಡುತ್ತಿರುವ ಕೆಲಸಕ್ಕೆ ಮತ್ತು ನಿರ್ಧಾರಗಳಿಗೆ ಬೆಂಬಲ ಸೂಚಿಸಲು ರಾಜ್ಯ ಬಿಜೆಪಿ ವಿಭಾಗಗಳಿಗೆ ಸೂಚಿಸಲಾಗಿದೆ ಮತ್ತು ಅವುಗಳನ್ನು ಉಲ್ಲಂಘಿಸದೆ ಇರಲು ಹೇಳಲಾಗಿದೆ” ಎಂದು ಕೂಡ ಮೂಲಗಳು ತಿಳಿಸಿವೆ. “ಉದಾಹರಣೆಗೆ ಬಿಜೆಪಿ ಪಕ್ಷದ ಕಹಿ ವಿರೋಧಿಗಳು ಆಡಳಿತ ನಡೆಸುತ್ತಿದ್ದರೂ ಸಿಪಿಎಂ ಸರ್ಕಾರಕ್ಕೆ ಬಿಜೆಪಿ ಪಕ್ಷದ ರಾಜ್ಯ ವಿಭಾಗ ಕೊರೊನ ಹೊರಾಟದಲ್ಲಿ ಸಂಪೂರ್ಣ ಬೆಂಬಲ ಸೂಚಿಸಬೇಕೆಂದು ತಿಳಿಸಲಾಗಿದೆ” ಎಂದು ತಿಳಿದುಬಂದಿದೆ.

