ಕೊರೊನಾ ಸಂಕಷ್ಟದ ನಡುವೆಯೂ ಗರಿಗೆದರುತ್ತಿದೆ ಬಿಹಾರ ರಾಜಕೀಯ

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಸಮ್ಮಿಶ್ರ ರಾಜ್ಯ ಸರ್ಕಾರದ ಅಧಿಕಾರಾವಧಿ ಮುಗಿಯುತ್ತಾ ಬಂದಿದೆ. 2020ರ ಅಕ್ಟೋಬರ್‌ಗೆ ಬಿಹಾರ ಸರ್ಕಾರದ ಅಧಿಕಾರ ಮುಗಿದು. ಮತ್ತೆ ವಿಧಾನಸಭಾ ಚುನಾವಣೆ ನಡೆಯಲಿದೆ.

ಇಂದು ದೇಶವನ್ನು ಸಂಕಷ್ಟಕ್ಕೆ ದೂಡಿರುವ ಕೊರೊನಾ ಸೋಂಕಿನಿಂದಾಗಿ ಇಡೀ ದೇಶವೇ ಲಾಕ್‌ಡೌನ್‌ ಆಗಿದ್ದು, ಎಲ್ಲಾ ರೀತಿಯ ವ್ಯವಹಾರಗಳೂ ನಿಂತುಹೋಗಿವೆ. ಕಳೆದ ವಾರದಿಂದ ಲಾಕ್‌ಡೌನ್‌ ಸಡಿಲ ಮಾಡಿದ್ದರೂ, ವಲಸೆ ಕಾರ್ಮಿಕರ ಸಂಕಷ್ಟ, ರೈತರ ಸಮಸ್ಯೆಗಳು, ಆರ್ಥಿಕ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಅಘೋಷಿತ ಅಸ್ಥಿರತೆ ಉಂಟಾಗಿದೆ. ಆ ಕಾರಣದಿಂದಾಗಿ ಚುನಾವಣೆಗಳನ್ನೂ ಮುಂದೂಡುವ ಸಾಧ್ಯತೆ ಇದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಯಾವುದೇ ಕ್ಷೇತ್ರದಿಂದಲೂ ಚುನಾಯಿತರಾಗದ ಕಾರಣ, ಮುಖ್ಯಮಂತ್ರಿಯಾಗಿ ಆರು ತಿಂಗಳೊಳಗೆ ಯಾವುದಾದರೂ ಕ್ಷೇತ್ರದಿಂದ ಚುನಾಯಿತರಾಗಬೇಕಿತ್ತು. ಆದರೆ, ಕೊರೊನಾ ಸಂಕಷ್ಟದಿಂದ ಅವರ ಸ್ಥಾನಕ್ಕೂ ಸಂಕಷ್ಟ ಎದುರಾಗಿದೆ. ಚುನಾವಣಾ ಆಯೋಗ ಸಧ್ಯಕ್ಕೆ ಚುನಾವಣೆ ನಡೆಸಲು ಸಾಧ್ಯವಿಲ್ಲವೆಂದು ಹೇಳಿದ್ದು, ವಿರೋಧ ಪಕ್ಷ ಬಿಜೆಪಿ ಠಾಕ್ರೆಯನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ಹರಸಾಹಸ ಪಡುತ್ತಿದೆ.

ಈ ನಡುವೆ ಬಿಹಾರ ಚುನಾವಣಾ ತಯಾರಿ, ಹಗ್ಗಜಗ್ಗಾಟ ಸುದ್ದಿಯಾಗದೇ ಸದ್ದುಮಾಡುತ್ತಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸರ್ಕಾರವನ್ನು ವಿರೋಧ ಪಕ್ಷದ ಆರ್‌ಜೆಡಿಯಿಂದ ಮಾತ್ರವಲ್ಲ, ಆಡಳಿತಾರೂಢ ಮೈತ್ರಿಕೂಟದ ಸಹಪಕ್ಷಗಳೂ ಟೀಕೆ ಮಾಡಲು ಆರಂಭಿಸಿವೆ.

ಸಧ್ಯ ಸರ್ಕಾರದ ಅಧಿಕಾರವಧಿಯ ಮುಗಿಯುವ ಸಮಯ ಸಮೀಪಿಸುತ್ತಿದ್ದಂತೆಯೇ ಬಿಹಾರ ರಾಜಕೀಯ ರೆಕ್ಕೆ ಬಿಚ್ಚಲು ಆರಂಭಿಸಿದೆ. ನಿತೀಶ್‌ ಸರ್ಕಾರದ ಮೈತ್ರಿಕೂಟದಲ್ಲಿರುವ ಎಲ್‌ಜೆಪಿ ಸರ್ಕಾರ ಮೇಲೆ ತೀವ್ರ ಆರೋಪಗಳನ್ನು ಮಾಡಲು ಆರಂಭಿಸಿದೆ.

ಈಗ ಎಲ್ಲವೂ ಕೊರೊನಾ ಮಯವಾಗಿದೆ ಎಂದು ಹೇಳುವಂತೆ ಬಿಹಾರದ ರಾಜಕೀಯಕ್ಕೂ ಕೊರೊನಾವೇ ಅಸ್ತ್ರವಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ದೇಶಾದ್ಯಂತ 81 81 ಕೋಟಿ ಜನರಿಗೆ ಆಹಾರ ಧಾನ್ಯಗಳನ್ನು ಒಡಗಿಸುತ್ತಿದೆ. ಆದರೆ, ಬಿಹಾರಕ್ಕೆ ಮಾತ್ರ ನೀಡಲಾಗಿಲ್ಲ. ಏಕೆಂದರೆ, ಬಿಹಾರ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಎಲ್‌ಜೆಪಿಯ ಮಾಜಿ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್  ಅವರಿ ನಿತೀಶ್‌ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ(ಎನ್‌ಎಫ್‌ಎಸ್‌ಎ) ಅಡಿಯಲ್ಲಿ ನವೀಕರಿಸಲ್ಪಟ್ಟ 14 ಲಕ್ಷ ಫಲಾನುಭವಿಗಳನ್ನು ಒಳಗೊಂಡ ಪಟ್ಟಿಯನ್ನು ಬಿಹಾರ ಸರ್ಕಾರ ನೀಡಿಲ್ಲ, ಇದರಿಂದಾಗಿ ಫಲಾನುಭವಿಗಳು ಆಹಾರ ಧಾನ್ಯಗಳಿಂದ ವಂಚಿತರಾಗಿದ್ದಾರೆ.

ನವೀಕರಿಸಲ್ಪಟ್ಟ ಪಟ್ಟಿಯನ್ನು ಕಳಿಸಿ ಎಂದು ಕೇಳಿದರೂ ಅವರು ಪಟ್ಟಿ ಕಳಿಸಿಲ್ಲ. ಎನ್‌ಎಫ್‌ಎಸ್‌ಎ ಅಡಿಯಲ್ಲಿ ಬಿಹಾರದ 8.71 ಕೋಟಿ ಜನರು ಆಹಾರ ಧಾನ್ಯಗಳನ್ನು ಪಡೆಯಲು ಅರ್ಹರಾಗಿದ್ದಾರೆ, ಆದರೆ ಪ್ರಸ್ತುತ ಕೇವಲ 8.57 ಕೋಟಿ ಜನರಿಗೆ ಮಾತ್ರ ಪಡಿತರ ಸಿಗುತ್ತದೆ. ಉಳಿದ 14 ಲಕ್ಷ ಹೊಸದಾಗಿ ಸೇರ್ಪಡೆಗೊಂಡ ಫಲಾನುಭವಿಗಳ ಪಟ್ಟಿ ನೀಡದೇ ಇರುವುದು ಇದಕ್ಕೆ ಕಾರಣ. ಸರ್ಕಾರ ಈ ನಿರ್ಲಕ್ಷ್ಯತನ ರಾಜ್ಯದ ಜನರಿಗೆ ಮಾಡುತ್ತಿರುವ ದ್ರೋಹ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರವು ಈಗಾಗಲೇ ಎನ್‌ಎಫ್‌ಎಸ್‌ಎ ಫಲಾನುಭವಿಗಳ ದಾಖಲೆಗಳನ್ನು ಹೊಂದಿರುವ ಎನ್‌ಐಸಿಯಲ್ಲಿ ಅರ್ಹರ ಪಟ್ಟಿಯನ್ನು ನವೀಕರಿಸಿದ್ದೇವೆ. ಪಾಸ್ವಾನ್ ಅವರು ರಾಜಕೀಯ ಮಾಡುತ್ತಿದ್ದಾರೆ. ಬಡವರಿಗೆ ಪಡಿತರ ನೀಡುವ ಬಗ್ಗೆ ಅವರು ಗಂಭೀರವಾಗಿಲ್ಲ. ಒಂದು ಕೋಟಿ ಹೆಚ್ಚು ಜನರಿಗೆ ಆಹಾರ ಧಾನ್ಯಗಳನ್ನು ನೀಡಬೇಕೆಂದು ಬಿಹಾರ ಸರ್ಕಾರದ ಮನವಿ ಮಾಡಿತ್ತು. ಆದರೆ, ಧಾನ್ಯಗಳನ್ನು ಪಡೆಯಲು 2021ರ ಜನಗಣತಿಯವರೆಗೆ ಕಾಯಿರಿ ಎಂದು ರಾಮ್ ವಿಲಾಸ್ ಹೇಳುತ್ತಿದ್ದಾರೆ ಎಂದು ರಾಜ್ಯ ಆಹಾರ ಸಚಿವ ಮದನ್ ಸಾಹ್ನಿ ತಿರುಗೇಟು ನೀಡಿದ್ದಾರೆ.

ಒಟ್ಟಾರೆ ಬಡಜನರ ಪಡಿತರ ಆಹಾರ ಧಾನ್ಯವನ್ನು ಬಿಹಾರ ರಾಜಕೀಯದ ಕೇಂದ್ರವನ್ನಾಗಿಸಿಕೊಂಡು ಸರ್ಕಾರದ ಮೈತ್ರಿ ಪಕ್ಷಗಳೇ ಕಚ್ಚಾಟಕ್ಕೆ ಇಳಿದಿವೆ. ಇವರ ರಾಜಕೀಯ ಕಾಳಗದಿಂದಾಗಿ ಬಿಹಾರದ ಬಡಜನರು ಹಸಿವಿನಿಂದ ಬಳಲುತ್ತಿದ್ದಾರೆ.

2015ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿ(ಯು), ಕಾಂಗ್ರೆಸ್‌ ಮತ್ತು ಆರ್‌ಜೆಪಿ ಪಕ್ಷಗಳು ಮಹಾಘಟಬಂಧನ್ (ಚುನಾವಣೋತ್ತರ ಮೈತ್ರಿ) ಮಾಡಿಕೊಂಡು ಚುನಾವಣೆ ಎದುರಿಸಿದ್ದವು. ಚುನಾವಣೆ ಮುಗಿದ ನಂತರ ಮಹಾಘಟ್‌ಬಂಧನ್‌ ಮಿತ್ರಪಕ್ಷಗಳು ಸೇರಿ ಜೆಡಿ(ಯು) ಪಕ್ಷದ ನಿತೀಶ್‌ ಕುಮಾರ್‌ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿದ್ದವು. ಸರ್ಕಾರ ರಚನೆಯಾದ ಕೆಲವೇ ತಿಂಗಳಲ್ಲಿ ನಿತೀಶ್‌ ಕುಮಾರ್‌ ಮಹಾಘಟಬಂಧನ್‌ಗೆ ಬ್ರೇಕ್‌ ಹಾಕಿ ಬಿಜೆಪಿ ಮತ್ತು ಎಲ್‌ಜೆಪಿ(ಲೋಕ್ ಜನಶಕ್ತಿ ಪಕ್ಷ) ಪಕ್ಷಗಳೊಂದಿಗೆ ಮೈತ್ರಿಕೂಟ ರಚಿಸಿ ಮತ್ತೆ ಸರ್ಕಾರ ರಚಿಸಿದರು. ಆಗಲೂ ನಿತೀಶ್‌ ಕುಮಾರ್‌ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆದರು.

ಆದರೆ, ಸರ್ಕಾರದ ಅಧಿಕಾರಾವಧಿ ಮುಗಿದಿದ್ದು, ಚುನಾವಣೆಗೆ ಎಲ್ಲಾ ಪಕ್ಷಗಳು ತಯಾರಿ ಆರೋಪ-ಪ್ರತ್ಯಾರೋಪಗಳಿಗೆ ಇಳಿದಿವೆ. 2015ರ ಚುನಾವಣೆಯಲ್ಲಿ ಕೇಲವ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಲೋಕ್‌ ಜನಶಕ್ತಿ ಪಕ್ಷ (ಎಲ್‌ಜೆಪಿ)ವು ಚುನಾವಣಾ ಅಕಾಡಕ್ಕೆ ಈಗಿಂದಲೇ ಉಳಿದ ಪಕ್ಷಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಇದು ಬಿಜೆಪಿಯ ಒಳ ಸಂಚೂ ಇರಬಹುದು. ಎಲ್‌ಜೆಪಿಯನ್ನು ಮುಂದೆಬಿಟ್ಟು ತನ್ನ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ಚುನಾವಣೆಯಲ್ಲಿ ತೇಜಸ್ವಿ ಯಾದವ್‌ ನೇತೃತ್ವದ ಆರ್‌ಜೆಡಿ(ರಾಷ್ಟ್ರೀಯ ಜನತಾ ದಳ್‌) ಯು 80 ಸೀಟುಗಳನ್ನು ಪಡೆದು ಉಳಿದೆಲ್ಲಾ ಪಕ್ಷಗಳಿಗಿಂತಲೂ ಹೆಚ್ಚು ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಸಧ್ಯ ಬಿಜೆಪಿಯೊಂದಿಗಿನ ಮೈತ್ರಿಯಿಂದಾಗಿ ಆಡಳಿತ ವಿರೋಧಿ ಜನಭಿಪ್ರಾಯ ಹೊಂದಿರುವ ನಿತೀಶ್‌ ಕುಮಾರ್ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಭವಿಷ್ಯವಿಲ್ಲವೆಂದು ಹೇಳಲಾಗುತ್ತಿದೆ.

ಈ ಎಲ್ಲಾ ಕಾರಣಗಳಿಂದಾಗಿ ಮುಂದಿನ ಚುನಾವಣೆಯು ಕಾಂಗ್ರೆಸ್‌+ಆರ್‌ಜೆಡಿ ಮತ್ತು ಜೆಡಿ(ಯು)+ಬಿಜೆಪಿಯಾಗಿರಲಿದ್ದು, ಇದರ ಮಧ್ಯೆ ತನ್ನ ಅಸ್ತಿತ್ವಕ್ಕಾಗಿ ಎಲ್‌ಜೆಪಿ ಹವಣಿಸುತ್ತಿದ್ದು, ತನ್ನ ರಾಜಕೀಯ ಇರುವಿಕೆಯನ್ನು ಸೂಚಿಸಲು ಈಗಿನಿಂದಲೇ ಶುರುಹಚ್ಚಿಕೊಂಡಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights