ನಿಖಿಲ್ ಮದುವೆಗೆ ನೀಡಿದ್ದ ವಾಹನ ಪಾಸ್ ಮಾಹಿತಿ ಕೇಳಿದ ಹೈಕೋರ್ಟ್
ನಿಖಿಲ್ ಕುಮಾರಸ್ವಾಮಿ ವಿವಾಹಕ್ಕೆ ಸಂಬಂಧಿಸಿದಂತೆ ಎಷ್ಟು ವಾಹನಗಳಿಗೆ ಪಾಸ್ ನೀಡಲಾಗಿತ್ತು ಎಂದು ಸ್ಪಷ್ಟನೆ ನೀಡಿವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ದೇಶಾದ್ಯಂತ ಲಾಕ್ಡೌನ್ ಇದ್ದಿದ್ದರಿಂದಾಗಿ, ನಿಖಿಲ್ ಮದುವೆಯನ್ನು ಸರಳವಾಗಿ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಧರಿಸಿದ್ದರು. ಅದರಂತೆ ಲಾಕ್ಡೌನ್ ಸಂದರ್ಭದಲ್ಲಿ ನಿಖಿಲ್ ವಿವಾಹ ನಡೆದಿತ್ತು. ಆದರೆ, ನಿಖಿಲ್ ಕುಮಾರಸ್ವಾಮಿ ಮದುವೆಯಲ್ಲಿ ಲಾಕ್ಡೌನ್ ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಮದುವೆಗಾಗಿ ವಾಹನಗಳಿಗೆ ಅನುಮತಿ ನೀಡುವ ವಾಹನಗಳ ಸಂಖ್ಯೆಯನ್ನು ಜಿಲ್ಲಾಧಿಕಾರಿ ನಮೂದಿಸಿರಲಿಲ್ಲ. ವಿವಾಹದಲ್ಲಿ ಪಾಲ್ಗೊಳ್ಳುವುದಕ್ಕೆ ಜನರ ಮಿತಿ ನಿಗದಿಪಡಿಸಬೇಕು. ಕೇಂದ್ರದ ಮಾರ್ಗಸೂಚಿಯಲ್ಲಿ ಡಿಸಿಗೆ ವಿವಾಹ ನಿಯಂತ್ರಣ ಅಧಿಕಾರವಿತ್ತು. ಆದರೆ ಏ.15. ರ ಮಾರ್ಗಸೂಚಿಯಲ್ಲಿ ವಿವಾಹಕ್ಕೆ ಸಂಖ್ಯಾ ಮಿತಿ ನಿಗದಿಪಡಿಸಿರಲಿಲ್ಲ. ಮೇ.1 ರ ಮಾರ್ಗಸೂಚಿಯಲ್ಲಿ 50 ಜನರ ಮಿತಿ ನಿಗದಿಪಡಿಸಲಾಗಿತ್ತು. ಈ ಕಾರಣದಿಂದ ಏ.17 ರಂದು ನಡೆದ ನಿಖಿಲ್ ವಿವಾಹಕ್ಕೆ ಸಂಖ್ಯಾ ಮಿತಿ ವಿಧಿಸಬೇಕಿತ್ತು ಎಂದು ಹೇಳಿದೆ.
ಮುಂದೆ ಇಂಥ ಲೋಪ ಮರುಕಳಿಸಲಿಲ್ಲ ಎಂದು ಸರ್ಕಾರಿ ವಕೀಲ ವಿಕ್ರಮ್ ಹುಯಿಲಗೋಳ ಹೈಕೋರ್ಟ್ ಗೆ ವಿನಂತಿ ಮಾಡಿಕೊಂಡಿದ್ದಾರೆ. ಆದರೆ ವಾಹನಗಳ ವಿಚಾರದಲ್ಲಿ ಖಡಕ್ ನಿರ್ಧಾರ ತೆಗೆದುಕೊಂಡಿರುವ ಹೈಕೋರ್ಟ್ ಅನುಮತಿ ನೀಡಿದ್ದರ ಬಗ್ಗೆ ವಿವರಣೆ ಕೇಳಿದೆ.

