ಕೋವಿಡ್ -19: ದೆಹಲಿ ಮ್ಯಾಕ್ಸ್ ಆಸ್ಪತ್ರೆಯಲ್ಲಿ 33 ಜನ ಕೊರೊನ ಪಾಸಿಟಿವ್; 145 ನರ್ಸ್ ಗಳು ಕ್ವಾರಂಟೈನ್

ದೆಹಲಿಯ ಪತ್ಪರ್ಗಂಜ್ ಪ್ರದೇಶದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕನಿಷ್ಠ 33 ಜನ ಆರೋಗ್ಯ ಕಾರ್ಯಕರ್ತರು ಕೊರೊನ ಸೋಂಕಿಗೆ ಪಾಸಿಟಿವ್ ಆಗಿರುವುದಾಗಿ ದ ಇಂಡಿಯನ್ ಎಕ್ಸ್ಪ್ರೆಸ್ ಸೋಮವಾರ ವರದಿ ಮಾಡಿದೆ. ಇವರಲ್ಲಿ ಇಬ್ಬರು ವೈದ್ಯರು ಮತ್ತು 23 ಜನ ನರ್ಸ್ ಸಿಬ್ಬಂದಿ ಎಂದು ತಿಳಿದುಬಂದಿದೆ. ಉಳಿದವರು ಕೆಲಸಗಾರರು ಮತ್ತು ತಾಂತ್ರಿಕ ಸಿಬ್ಬಂದಿ.

“ನಮ್ಮಲ್ಲಿ ದಾಖಲಾಗುವ ಎಲ್ಲ ರೋಗಿಗಳು ಮತ್ತು ಆರೋಗ್ಯ ಕಾರ್ಯಕರ್ತರನ್ನು ಪರೀಕ್ಷಿಸುವ ಅಂಗವಾಗಿ ನಡೆದ ಪ್ರಕ್ರಿಯೆಯಲ್ಲಿ 33 ಜನಕ್ಕೆ ಸೋಂಕು ಕಂಡುಬಂದಿದೆ” ಎಂದು ಪತ್ರಿಕೆಗೆ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದು ಅವರೆಲ್ಲರನ್ನು ಪೂರ್ವ ವಿಭಾಗದ ಕೋವಿಡ್ ಮಾತ್ರ ಮ್ಯಾಕ್ಸ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ತಿಳಿಯಲಾಗಿದೆ.

ಪತ್ಪರ್ಗಂಜ್ ವಿಭಾಗದ ಆಸ್ಪತ್ರೆಯ 145 ನರ್ಸ್ ಗಳನ್ನು ಮುಂಜಾಗ್ರತಾ ಕ್ರಮವಾಗಿ ಒಂದು ಖಾಸಗಿ ಹಾಸ್ಟೆಲ್ ನಲ್ಲಿ 14 ದಿನಗಳ ವರೆಗೆ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ತಿಳಿಯಲಾಗಿದೆ. ಆ ಇಡೀ ಹಾಸ್ಟೆಲ್ ಸಮುಚ್ಚಯವನ್ನು ಪ್ರಾದೇಶಿಕ ಅಧಿಕಾರಿಗಳು ಸೀಲ್ ಮಾಡಿದ್ದಾರೆ.

ದೆಹಲಿಯಲ್ಲಿ ಸೋಮುವಾರಕ್ಕೆ ಒಟ್ಟು ಕೊರೊನ ಸೋಂಕಿನ ಸಂಖ್ಯೆ 2918ಕ್ಕೆ ಏರಿದ್ದು ಇಲ್ಲಿಯವರೆಗೂ 54 ಜನ ಮೃತಪಟ್ಟಿದ್ದಾರೆ. ಭಾರತದಲ್ಲಿ ಒಟ್ಟು ಕೊರೊನ ಸೋಂಕಿತರ ಸಂಖ್ಯೆ 27,892ಕ್ಕೆ ಏರಿದ್ದು, ಒಟ್ಟು 872 ಜನ ಮೃತಪಟ್ಟಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights