ಕಠೀಲ್‌ ಕಾಮಗಾರಿಯ ಪಂಪ್‌ವೆಲ್ ಫ್ಲೈಓವರ್‌ನಲ್ಲಿ ಬಿರುಕು; ಜನರಲ್ಲಿ ಆತಂಕ

ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66ರ ಕಾಸರಗೋಡು-ಉಡುಪಿ ರಸ್ತೆಯ ಪಂಪ್‌ವೆಲ್ ಮೇಲ್ಸೇತುವೆ 3 ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದು, ಇದೀಗ ಮೇಲ್ಸೇತುವೆಯ ಮಧ್ಯಭಾಗದ ಎರಡು ರಸ್ತೆ ಹಾಗೂ ತಡೆಗೋಡೆ ಉದ್ದಕ್ಕೆ ಬಿರುಕು ಬಿಟ್ಟಿದ್ದು, ವಾಹನ ಸವಾರರನ್ನು ಆತಂಕಕ್ಕೀಡು ಮಾಡಿದೆ.

600 ಮೀ. ಉದ್ದ ಹಾಗೂ 20 ಮೀ. ಅಗಲವಿರುವ ಈ ಫ್ಲೈಓವರ್‌ ಕರ್ಣಾಟಕ ಬ್ಯಾಂಕ್‌ ಪ್ರಧಾನ ಕಚೇರಿಯಿಂದ ಇಂಡಿಯಾನ ಆಸ್ಪತ್ರೆ ಮುಂಭಾಗದವರೆಗೆ ನಿರ್ಮಾಣವಾಗಿದೆ. ಇಷ್ಟು ಉದ್ದದ ಮೇಲ್ಸೇತುವೆ 10 ವರ್ಷಗಳಿಂದ ಕುಂಟುತ್ತಾ ಸಾಗಿ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.

ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇವಲ ಮೂರು ತಿಂಗಳಲ್ಲೇ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲಾಗಿತ್ತು. ಎರಡು ಕಡೆಗಳಿಂದಲೂ ಕಾಂಕ್ರೀಟ್‌ ಪ್ಯಾನೆಲ್‌ಗಳನ್ನು ಒಂದರ ಮೇಲೆ ಒಂದರಂತೆ ಸುಮಾರು 4.5 ಮೀ. ಎತ್ತರಕ್ಕೆ ಜೋಡಿಸಿ, ಪ್ಯಾನೆಲ್‌ಗಳ ಹಿಂದಿರುವ ಹುಕ್‌ಗಳಿಗೆ 7 ಮೀ. ಪ್ಲಾಸ್ಟಿಕ್‌ ರೋಪ್‌ ಮಾದರಿಯ ಶೀಟ್‌ಗಳನ್ನು ಹಾಸಿ ಅದರ ಮೇಲೆ ಮಣ್ಣು ಹಾಕಲಾಗಿದೆ. ಫ್ಲೈ ಓವರ್‌ನ ಎರಡು ಬದಿಯಲ್ಲೂ ಪ್ಯಾನೆಲ್‌ನ 1 ಅಡಿ ಗ್ಯಾಪ್‌ಗೆ ಜಲ್ಲಿಕಲ್ಲುಗಳನ್ನು ಹಾಕಿ ಫಿಲ್‌ ಮಾಡಲಾಗಿದ್ದು, ಅದರ ಮೇಲೆ ಕಾಂಕ್ರೀಟ್‌ ಫಿನಿಶಿಂಗ್‌ ಮಾಡಲಾಗಿದೆ. ಈ ಎಲ್ಲ ಕಾಮಗಾರಿಗಳು ಕೇವಲ 3 ತಿಂಗಳ ಅಂತರದಲ್ಲಿ ನಡೆದಿದ್ದು, ಆಗಲೇ ಎಲ್ಲರ ಅನುಮಾನಕ್ಕೆ ಕಾರಣವಾಗಿತ್ತು.

ಪಂಪ್‌ವೆಲ್‌ ಫ್ಲೈಓವರ್‌ ತ್ವರಿತವಾಗಿ ಮುಗಿಸುವ ಉದ್ದೇಶದಿಂದ ಕೇವಲ 2 ತಿಂಗಳಲ್ಲಿ ಟಿಪ್ಪರ್‌ಗಳಲ್ಲಿ ಲೋಡ್‌ಗಟ್ಟಲೆ ಮಣ್ಣು ತಂದು ಸುರಿಯಲಾಗಿತ್ತು. ಇದನ್ನು ನೀರು ಹಾಕಿ ಹದ ಮಾಡುವ ಅಥವಾ ರೋಲರ್‌ ಬಳಸಿ ಮತ್ತಷ್ಟು ಗಟ್ಟಿಗೊಳಿಸುವ ಪ್ರಕ್ರಿಯೆ ನಡೆದಿರಲೇ ಇಲ್ಲ. ಇದೇ ರೀತಿ ಸುಮಾರು 4.5 ಮೀ.ನಷ್ಟು ಮಣ್ಣನ್ನು ಸುರಿದು ಕೋಟೆಯಂತೆ ತುಂಬಿಸಲಾಗಿತ್ತು. ಈ ರೀತಿ ಮಣ್ಣು ಹಾಕಿದ್ದರಿಂದಲೇ ಈಗ ಮೇಲ್ಸೇತುವೆ ಮೇಲ್ಭಾಗದಲ್ಲಿ ಬಿರುಕು ಬಿದ್ದಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವಾಗ ಅದಕ್ಕೆ ಗುಣಮಟ್ಟದ ಮಾನದಂಡವಿದ್ದು, ಅದೆಲ್ಲವೂ ಪಂಪ್‌ವೆಲ್‌ ಫ್ಲೈಓವರ್‌ ಕಾಮಗಾರಿಯಲ್ಲಿ ಉಲ್ಲಂಘನೆಯಾಗಿದೆ. ಸರ್ವಿಸ್‌ ರಸ್ತೆಗಳ ನಿರ್ಮಾಣ, ಹೆದ್ದಾರಿ ಜೋಡಣೆ ಪ್ರಮುಖ ರಸ್ತೆಗಳ ಬಗ್ಗೆಯೂ ಕಾಂಟ್ರ್ಯಾಕ್ಟ್ ದಾರರು ಗಮನಹರಿಸಿದಂತಿಲ್ಲ. ಈ ಫ್ಲೈ ಓವರ್‌ ಕಳಪೆಯಾಗಿರುವ ಬಗ್ಗೆ ಹಿರಿಯ ವಕೀಲರಾದ ದಯಾನಾಥ್‌ ಕೋಟ್ಯಾನ್‌ ಆಕ್ಷೇಪ ಮಾಡಿದ್ದರು.

2017ರ ಅಕ್ಟೋಬರ್‌ನಲ್ಲಿ ಫ್ಲೈಓವರ್‌ನ ಗರ್ಡರ್‌(ಕಾಂಕ್ರೀಟ್‌ನ ಉದ್ದದ ಸ್ತಂಭ)ನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದಾಗ, ಒಂದು ಗರ್ಡರ್‌ನಲ್ಲಿ ಬಿರುಕು ಇರುವುದನ್ನು ಪತ್ತೆ ಹಚ್ಚಿದ್ದರು. ಗರ್ಡರ್‌ ಜೋಡಿಸುವಾಗ ಆದ ಎಡವಟ್ಟಿನಿಂದಾಗಿ ಈ ಬಿರುಕು ಕಾಣಿಸಿಕೊಂಡಿತ್ತು. ಅಧಿಕಾರಿಗಳ ಸೂಚನೆ ಮೇರೆಗೆ ಹಿಟಾಚಿ ನೆರವಿನೊಂದಿಗೆ ಗರ್ಡರ್‌ ತೆರವು ಮಾಡಿ ಹೊಸ ಗರ್ಡರ್‌ ಅಳವಡಿಕೆ ಮಾಡಲಾಗಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights