ಪಟಾಕಿ ಸಿಡಿತ: ಶಶಿಕಲಾ ಬೆಂಬಲಿಗರ ಕಾರು ಬೆಂಕಿಗಾಹುತಿ!
ನಾಲ್ಕು ವರ್ಷಗಳ ಜೈಲು ವಾಸದ ನಂತರ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಆಪ್ತೆ ಶಶಿಕಲಾ ತಮ್ಮ ರಾಜ್ಯಕ್ಕೆ ಮರಳುತ್ತಿದ್ದಾರೆ. ಈ ವೇಳೆ, ಶಶಿಕಲಾ ಬೆಂಬಲಿಗರ ಕಾರಿಗೆ ಬೆಂಕಿಹೊತ್ತಿಕೊಂಡು ಸುಟ್ಟು ಭಸ್ಮವಾಗಿವೆ.
ಕರ್ನಾಟಕದ ಗಡಿ ದಾಟಿ ಶಶಿಕಲಾ ತಮಿಳುನಾಡಿನತ್ತ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಕೃಷ್ಣಗಿರಿ ಟೋಲ್ ಗೇಟ್ ಸಮೀಪ ಇಬ್ಬರು ಬೆಂಬಲಿಗರ ಕಾರಿನಲ್ಲಿ ತುಂಬಿದ್ದ ಪಟಾಕಿಗಳು ಸಿಡಿದಿವೆ. ಇದರಿಂದಾಗಿ ಬೆಂಕಿಹೊತ್ತಿಕೊಂಡಿದ್ದು, ಪರಿಣಾಮ ಕಾರುಗಳು ಸುಟ್ಟು ಹೋಗಿವೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದ್ದು, ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ.
ಎಐಎಡಿಎಂಕೆಯ ಉಚ್ಛಾಟಿತ ನಾಯಕಿ ವಿ.ಕೆ. ಶಶಿಕಲಾ ತಮಿಳುನಾಡಿನಾದ್ಯಂತ ಹಿಂಸೆ ನಡೆಸಲು ಸಂಚು ರೂಪಿಸುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಡಳಿತ ಪಕ್ಷ ಭಾನುವಾರ ಪೊಲೀಸರಿಗೆ ದೂರು ನೀಡಿತ್ತು. ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆಯಾಗಿರುವ ಶಶಿಕಲಾ ಸೋಮವಾರ ತಮಿಳುನಾಡು ಪ್ರವೇಶಿಸಲಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಕಾಂಗ್ರೆಸ್‌ಗೆ ಶಾಕ್; ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ BJP ಸೇರಿದ ಕೈ ಮುಖಂಡರು!

