ರೈತ ಹೋರಾಟದ ನಡುವೆ ಪಂಜಾಬ್‌ ಚುನಾವಣೆ: BJPಗೆ ಸೋಲೆಂದು ಕೇಸರಿ ಮುಖಂಡರ ಸ್ವತಂತ್ರ ಸ್ಪರ್ಧೆ!

ಫೆಬ್ರವರಿ 14 ರಂದು ನಡೆಯಲಿರುವ ಪಂಜಾಬ್‌ನ ನಗರ ನಾಗರಿಕ ಸಂಸ್ಥೆಗಳಿಗೆ ಚುನಾವಣೆಗಳು ನಡೆಯಲಿವೆ. ಈ ಚುನಾವಣೆಗಳು ರೈತರ ಪ್ರತಿಭಟನೆಯ ಪ್ರಭಾವದಲ್ಲಿ ನಡೆಯಲಿದ್ದು, ಹೆಚ್ಚಿನ ಅಭ್ಯರ್ಥಿಗಳು ಸ್ವತಂತ್ರರಾಗಿ ಕಣಕ್ಕಿಳಿಯಲಿದ್ದಾರೆ. ಆದರೆ, ಹೆಚ್ಚಿನ ಸ್ವತಂತ್ರ ಅಭ್ಯರ್ಥಿಗಳು ಎಸ್‌ಎಡಿ ಅಥವಾ ಬಿಜೆಪಿಗೆ ನಿಷ್ಠರಾಗಿರುವವರು ಎಂದು ಮೂಲಗಳು ತಿಳಿಸಿವೆ.

ಸಾರ್ವಜನಿಕರ ಮನಸ್ಥಿತಿ ತಮ್ಮ ವಿರುದ್ಧವಾಗಿದೆ ಎಂದು ಅರಿತುಕೊಂಡಿರುವ ಎಸ್‌ಎಡಿ ಅಥವಾ ಬಿಜೆಪಿ ಪಕ್ಷಗಳ ಅನೇಕ ಅಭ್ಯರ್ಥಿಗಳು ಸ್ವತಂತ್ರರಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

“ರೈತರ ಕೋಪವು ಬಿಜೆಪಿಯ ಕಡೆಗೆ ಮಾತ್ರ. ಆದರೆ, ಇತರ ರಾಜಕೀಯ ಪಕ್ಷಗಳಿಗೆ ಇದು ಭಾರೀ ಅವಕಾಶ ಕೊಡುವಂತಿಲ್ಲ. ಹಾಗಾಗಿ ಉಳಿದ ಪಕ್ಷಗಳು ಪ್ರತಿ ಹೆಜ್ಜೆಯನ್ನೂ ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳುತ್ತಿವೆ” ಎಂದು ರಾಜಕೀಯ ವಿಶ್ಲೇಷಕರೊಬ್ಬರು ಹೇಳಿದ್ದಾರೆ.

ರಾಜ್ಯ ಚುನಾವಣಾ ಆಯೋಗದ ಪ್ರಕಾರ, ಎಂಟು ಮಹಾನಗರ ಪಾಲಿಕೆಗಳು ಮತ್ತು 109 ಪುರಸಭೆಗಳ ಚುನಾವಣೆಗೆ ಒಟ್ಟು 15,305 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಅವರಲ್ಲಿ ನಾಮಪತ್ರ ವಾಪಸಾತಿಯ ನಂತರ 9,222 ಅಭ್ಯರ್ಥಿಗಳು ಮಾತ್ರ ಚುನಾವಣಾ ಕಣದಲ್ಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಅವರಲ್ಲಿ 2,822 ಮಂದಿ ಸ್ವತಂತ್ರರು. ಉಳಿದಂತೆ, ಆಡಳಿತಾರೂಢ ಕಾಂಗ್ರೆಸ್‌ನ 2,037, ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) 1,569 ಅಭ್ಯರ್ಥಿಗಳಿದ್ದಾರೆ. ಈ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಎಎಪಿಯ 1,606 ಅಭ್ಯರ್ಥಿಗಳಿದ್ದಾರೆ. ಬಿಜೆಪಿಯ 1,003 ಅಭ್ಯರ್ಥಿಗಳು ಮೊದಲ ಬಾರಿಗೆ ಎಸ್‌ಎಡಿ ಬೆಂಬಲವಿಲ್ಲದೆ ಸ್ವಂತವಾಗಿ ಸ್ಪರ್ಧಿಸುತ್ತಿದ್ದಾರೆ.

ಬಿಜೆಪಿಯ ಬತ್ನ್‌ಡಾ ಜಿಲ್ಲಾ ಘಟಕದ ಅಧ್ಯಕ್ಷ ವಿನೋದ್ ಕುಮಾರ್ ಬಿಂಟಾ ಅವರು ಭುಚೋ ಮಂಡಿ ಮುನ್ಸಿಪಲ್ ಕೌನ್ಸಿಲ್‌ಗೆ ಸ್ವತಂತ್ರರಾಗಿ ಸ್ಪರ್ಧಿಸುತ್ತಿದ್ದಾರೆ. “ನಾವು ರೈತರೊಂದಿಗೆ ಮುಖಾಮುಖಿಯನ್ನು ತಪ್ಪಿಸಲು ಬಯಸುತ್ತೇವೆ, ಆದ್ದರಿಂದ ನಾನು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದೇನೆ” ಎಂದು ಅವರು ಹೇಳಿದರು.

ಅಲ್ಲದೆ, ಕರ್ತಾಪುರ ಪುರಸಭೆ ಹಾಗೂ ಲೋಹಿಯಾನ್ ಮತ್ತು ಮೆಹ್ತಾಪುರ ನಗರ ಪಂಚಾಯತ್‌ಗಳಲ್ಲಿ ಕೇಸರಿ ಪಕ್ಷದಿಂದ ಯಾವುದೇ ಅಭ್ಯರ್ಥಿಗಳು ಕಣಕ್ಕಿಳಿದಿಲ್ಲ.

ಚುನಾವಣೆಗಳನ್ನು ಕೇಂದ್ರದ ಕೃಷಿ ಕಾನೂನುಗಳ ಬಗೆಗಿನ ಕಿರು-ಜನಾಭಿಪ್ರಾಯ ಸಂಗ್ರಹವಾಗಿ ನೋಡಲಾಗುತ್ತದೆ. ಬಿಜೆಪಿಯನ್ನು ಹೊರತುಪಡಿಸಿ, ಎಲ್ಲಾ ಪಕ್ಷಗಳು ತಮ್ಮ ಮತ ಸಂಖ್ಯೆಯನ್ನು ಬಲಪಡಿಸಲು ರೈತರ ಆಕ್ರೋಶವನ್ನು ನಿವಾರಿಸುವ ಪ್ರಯತ್ನದಲ್ಲಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಜಸ್ಥಾನ: 50 ನಗರಸಭೆಗಳಲ್ಲಿ ಕಾಂಗ್ರೆಸ್‌ಗೆ ಅಧಿಕಾರ; 37ಕ್ಕೆ ಕುಸಿದ BJP

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights