ಕೋವಿಡ್-19 ಮತ್ತು ಕುಸಿಯುತ್ತಿರುವ ಜಾಗತಿಕ ವ್ಯವಸ್ಥೆ

ಕೋವಿಡ್-19 ನಮ್ಮ ತಿಳುವಳಿಕೆಯ ಜಗತ್ತನ್ನು ಮೂಲಭೂತವಾಗಿ ಬದಲಿಸಬಲ್ಲದು: ಈಗಿರುವ ಜಾಗತಿಕ ವ್ಯವಸ್ಥೆ, ಶಕ್ತಿ ಕೇಂದ್ರಗಳ ಸಮತೋಲನ, ರಾಷ್ಟ್ರ ಭದ್ರತೆಯ ಕುರಿತ ಸಾಂಪ್ರದಾಯಿಕ ಕಲ್ಪನೆಗಳು ಮತ್ತು ಜಾಗತೀಕರಣದ ಭವಿಷ್ಯ – ಈ ಎಲ್ಲವನ್ನೂ. ಪರಸ್ಪರ ಅವಲಂಬಿತ ಜಗತ್ತು ಮತ್ತು ಮದ್ದಿಲ್ಲದ ಭಯಂಕರ ವೈರಾಣು ಇವೆರಡರ ಮಾರಕ ಸಂಯೋಜನೆ ಮನುಷ್ಯತ್ವವನ್ನು ಈ ಹಿಂದೆಂದೂ ನೋಡದ ಸನ್ನಿವೇಶಗಳಿಗೆ ತಂದೊಡ್ಡಿದೆ. ಈ  ಲಾಕ್ ಡೌನ್ ನಿಂದ ಹೊರಬಂದಾದಮೇಲೆ ಹೊಸ ರಾಜಕೀಯ ಮತ್ತು ಸಾಮಾಜಿಕ ವಾಸ್ತವಗಳ್ಳನ್ನು ಎದುರಿಸಬೇಕಾಗಿದೆ.

ಕುಸಿಯುತ್ತಿರುವ ಜಾಗತಿಕ ವ್ಯವಸ್ಥೆ

ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವುದು ನಮ್ಮ ಸಮಕಾಲೀನ ಜಾಗತಿಕ  ವ್ಯವಸ್ಥೆಗಳು ಮತ್ತದರ ಸಂಸ್ಥೆಗಳ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಎರಡನೇ ಮಹಾಯುದ್ಧದ ವಿಜಯಶಾಲಿಗಳಿಂದ ಸೃಷ್ಟಿಯಾದ ಸಂಸ್ಥೆಗಳ ಪಳೆಯುಳಿಕೆಯಂತಿರುವ ಸಮಕಾಲೀನ ಜಾಗತಿಕ ವ್ಯವಸ್ಥೆ ಅಲ್ಲಲ್ಲಿ ತಲೆದೋರುವ ರಾಜಕೀಯ ಮತ್ತು ಸೇನಾ ಬಿಕ್ಕಟ್ಟುಗಳನ್ನು ನಿಭಾಯಿಸಲು ಹುಟ್ಟಿದ ಯಜಮಾನ್ಯ ಅಭ್ಯಾಸವಾಗಿತ್ತೆ ಹೊರತು ಎಂದಿಗೂ ಮಾನವೀಯತೆಗೆ ಸೇವೆ ಸಲ್ಲಿಸಲು ಇದ್ದದ್ದಲ್ಲ. ಈಗ ಕೋವಿಡ್-19 ಇವೆಲ್ಲವನ್ನೂ ಬಯಲು ಮಾಡಿರುವುದಲ್ಲದೆ ಇಂತಹ ಭೀಕರ ಬಿಕ್ಕಟ್ಟಿನಲ್ಲಿ ಜಗತ್ತಿನ ನಾಯಕರ ನಿಜವಾದ ಸಕುಂಚಿತ ಮನಸ್ಥಿತಿಗಳನ್ನು ಅನಾವರಣಗೊಳಿಸಿದೆ. ಈ ಸಾಂಕ್ರಾಮಿಕವನ್ನು ಚರ್ಚಿಸಲು ವಿಶ್ವಸಂಸ್ಥೆಯ ರಕ್ಷಣಾ ಮಂಡಲಿ ಅತೀ ವಿಳಂಬವಾಗಿ ಭೇಟಿಯಾಗಿದ್ದು (ಅದೂ ಯಾವುದೇ ಒಮ್ಮತಕ್ಕೆ ಬರದೆ), ವಿಶ್ವಸಂಸ್ಥೆಯ ಅಪ್ರಸ್ತುತೆಗೆ ಸಾಕ್ಷಿಯಾಗಿದೆ.

ಪ್ರಾದೇಶಿಕ ಸಂಸ್ಥೆಗಳ ನಡವಳಿಕೆಗಳೂ ಉತ್ತೇಜನಕಾರಿಯಾಗಿಲ್ಲ. ಬಹುತೇಕ ಸತ್ತಿದ್ದ ಸಾರ್ಕ್ ಸಂಸ್ಥೆಯ ಕುತೂಹಲಕಾರಿ ಪುನಶ್ಚೇತನಕ್ಕೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿಯವರ ಕ್ರಮ ಕೂಡ ಹುಟ್ಟುತ್ತಲೇ ಕಮರಿಹೋಯಿತು. ಈ ವೈರಾಣು ಐರೋಪ್ಯ ದೇಶಗಳಲ್ಲೆಲ್ಲೆಡೆ ಕಾಳ್ಗಿಚ್ಚಿನಂತೆ ವ್ಯಾಪಿಸುವಾಗ, ಅತ್ಯಂಥ ಪ್ರಗತಿಶೀಲ ಬಹು ರಾಷ್ಟ್ರಗಳ ಒಕ್ಕೂಟ ಯೂರೋಪಿಯನ್ ಯೂನಿಯನ್ ಸಹ ಕೈಚೆಲ್ಲಿ ಕೂತಿತ್ತು. ಅದರ ಸದಸ್ಯ ರಾಷ್ಟ್ರಗಳು ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಅಂತರ್ಮುಖಿಯಾದವು: ಪ್ರಾದೇಶಿಕ ಹೊಂದಾಣಿಕೆ ಕಡೆಗಣಿಸಿ ಸ್ವ-ಸಹಾಯ ಅವರ ಪ್ರಥಮ ಆದ್ಯತೆಯಾಯಿತು. ಇದರಿಂದ ಭಾರಿ ನಷ್ಟ ಅನುಭವಿಸಿದ್ದು ಬ್ರಸೆಲ್ಸ್.

ಇವೆಲ್ಲವೂ, ಇದಕ್ಕೂ ದೊಡ್ಡದಾದ ಅಸ್ವಸ್ಥತೆಯನ್ನು ಸೂಚಿಸುತ್ತದೆ: ಜಾಗತಿಕ ಸಂಸ್ಥೆಗಳ ವ್ಯವಸ್ಥೆ ನಿಜವಾಗಿಯು ಎಲ್ಲರ ಪ್ರತಿನಿಧಿಯಾಗಿಲ್ಲ, ಬದಲಾಗಿ ಕೇವಲ ಬಲಿಷ್ಠ ಶಕ್ತಿಗಳ ಗೊಂಬೆಗಳಾಗಿ, ಹಣದ ಕೊರತೆ ಎದುರಿಸುತ್ತಿರುವುದಲ್ಲದೆ ಬಲಿಷ್ಠರ ಭದ್ರತೆ ಸಮಸ್ಯೆಗಳ ಮೇಲೆ ಮಾತ್ರ ಗಮನ ಹರಿಸಿ ಕೂತಿದೆ. 1940ರಲ್ಲಿ ವಿನ್ಯಾಸಗೊಂಡ ಈ ಜಾಗತಿಕ ಸಂಸ್ಥೆಗಳು  2020ರ ಸವಾಲುಗಳನ್ನು ಮನುಷ್ಯತ್ವ ಎದುರಿಸಲು ಸಹಕರಿಸಲಾರವು. ರಾಷ್ಟ್ರಗಳ ನಡುವೆ ಹೊಸ ಸಾಮಾಜಿಕ ಒಡಂಬಡಿಕೆ ಮತ್ತು ಅಂತರಾಷ್ಟ್ರೀಯ ವ್ಯವಸ್ಥೆ ಮಾತ್ರವೆ ಸುಭದ್ರ ಭವಿಷ್ಯದ ಭರವಸೆ ನೀಡಬಲ್ಲವು.

ಈ ವಿಪತ್ತಿಂದ ಬಲಶಾಲಿಯಾಗಿ ಹೊರಹೊಮ್ಮಬಹುದಾಗಿರುವ ದೇಶವೆಂದರೆ ಚೈನಾ. ಚೈನಾ ಈ ಕೋವಿಡ್-19  ಸಾಂಕ್ರಾಮಿಕವನ್ನು ನಿಭಾಯಿಸುವುದರಲ್ಲಿ ಯಶಸ್ವಿಯಾಗಿದೆ ಎಂದು ವರದಿಗಳು ಸೂಚಿಸುತ್ತವೆ, ಮತ್ತು ಉಳಿದೆಲ್ಲಾ ದೇಶಗಳು ಹೊಡೆತ ತಿನ್ನುವ ಸಮಯದಲ್ಲಿ ಅದರ ಉದ್ಯಮಗಳ ಉತ್ಪಾದನೆ ಚೇತರಿಸಿಕೊಳ್ಳುತ್ತಿದೆ. ತೈಲ ಇಂಧನದ ಬೆಲೆ ಕುಸಿದಿರುವುದು ಆ ಚೇತರಿಕಿಗೆ ಇನ್ನಷ್ಟು ವೇಗ ಕೊಡುತ್ತದೆ. ಜಗತ್ತಿನ ಅತಿ ದೊಡ್ಡ ಸೇನಾ ಶಕ್ತಿಯುಳ್ಳ ದೇಶ ಈ ವಿಪತ್ತನ್ನು ನಿರಾಕರಿಸುತ್ತಿದ್ದ ಸಮಯದಲ್ಲಿ, ಯೂರೋಪಿಯನ್ ಯೂನಿಯನ್ ತನ್ನ ಸ್ವಹಿತಾಸಕ್ತಿಯ ಕಡೆಗೆ ಮಾತ್ರ ಮುಖ ಮಾಡಿದ್ದಾಗ, ಚೈನಾ ತನ್ನ ಉತ್ಪಾದನಾ ಪ್ರಾಬಲ್ಯವನ್ನು, ತನ್ನ ಭೂ ರಾಜಕೀಯ ಹಿತಾಸಕ್ತಿಗೆ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಅಗತ್ಯ ರಾಷ್ಟ್ರಗಳಿಗೆ ಚೈನಾ ವೈದ್ಯಕೀಯ ನೆರವಿನ ಮತ್ತು ಪರಿಣಿತಿಯ ಸಹಾಯಹಸ್ತ ಚಾಚಿದೆ; ತನ್ನ ಬದ್ಧ ವೈರಿಯಾದ ಜಪಾನಿನ ಜೊತೆಗೆ ಸಂಬಂಧ ವೃದ್ಧಿಸಿಕೊಂಡಿದೆ. ಚೈನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ವಿಶ್ವ ಸಮುದಾಯ ಹೇಗೆ ಈ ವೈರಾಣು ವಿರುದ್ಧ ಹೋರಾಡಬೇಕು ಎಂಬುದರ ಬಗ್ಗೆ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರೊಂದಿಗೆ ಚರ್ಚಿಸಿದ್ದಾರೆ. ಆ ದೇಶದ ಅತ್ಯಂತ ಶ್ರೀಮಂತ ಜ್ಯಾಕ್ ಮಾ, ಕೋರೋನ ವಿರುದ್ಧದ ಖಾಸಗಿ ವಲಯದ ಹೋರಾಟಕ್ಕೆ ನಾಯಕತ್ವ ವಹಿಸಿಕೊಂಡಿದ್ದಾರೆ. ಇವೆಲ್ಲವನ್ನೂ ಚೈನಾದ ಪ್ರಚಾರ ಮಾಧ್ಯಮಗಳು ದೊಡ್ಡದಾಗಿ ಬಿಂಬಿಸಿಕೊಳ್ಳುತ್ತವೆ. ಭೂರಾಜಕೀಯ ಲಾಭಕ್ಕಾಗಿ ಚೈನಾ ತೆಗೆದುಕೊಂಡಿರುವ ಬುದ್ಧಿವಂತಿಕೆಯ ಆರ್ಥಿಕ ಹೂಡಿಕೆಯ ಕ್ರಮಗಳಿವು. ಜಗತ್ತಿನ ನಾಯಕನಾಗುವುದಕ್ಕೆ ಬೀಜಿಂಗ್ ನ ಆಕಾಂಕ್ಷೆಗಳಿಗೆ, ಜೊತೆಗೆ ಹುವಾವೆ 5ಜಿ ತಂತ್ರಜ್ಞಾನದ ಪರೀಕ್ಷೆಯ ಚೌಕಾಸಿಗೆ, ಜಾಗತಿಕ ಸಂಪರ್ಕದ ಭವಿಷ್ಯವಾಗಿ ತಾನು ವಿವಿಧ ದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಹೂಡಿಕೆಗಳ ಬೃಹತ್ ಯೋಜನೆಗೆ ಇದು ಇನ್ನಷ್ಟು ಸಹಕರಿಸುತ್ತದೆ. ಕೋವಿಡ್-19, ಚೈನಾ ಲಕ್ಷಣಗಳನ್ನು ಒಳಗೊಂಡ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಜಗತ್ತಿಗೆ ಪರಿಚಯಿಸುದಕ್ಕೆ ಇನ್ನಷ್ಟು ಸಹಕರಿಸಲಿದೆ.

ಈ ಸಾಂಕ್ರಾಮಿಕ ನವಉದಾರವಾದ ಆರ್ಥಿಕ ಜಾಗತೀಕರಣಕ್ಕೆ ದೊಡ್ಡ ಹೊಡೆತವನ್ನೇನೋ ಕೊಟ್ಟಿದೆ. ಆರ್ಥಿಕ ತಜ್ಞರು ಸಂಭವಿಸಲಿರುವ ಆರ್ಥಿಕ ಹಿಂಜರಿಕೆಯ ಬಗ್ಗೆ ಎಚ್ಚರಿಸುತ್ತಿದ್ದಾರೆ. ನವಉದಾರವಾದ ಜಾಗತೀಕರಣದ “ಯಶಸ್ಸು”ಗಳನ್ನು ಈ ವೈರಾಣು ಹಿಂದಕ್ಕೆ ತಳ್ಳುತ್ತಿರುವಂತೆಯೇ, ಜಾಗತೀಕರಣದ ರಾಜಕೀಯ ಭಾಗ ಪರಿಸ್ಥಿತಿಯನ್ನು ನಿಭಾಯಿಸಲು ಹೆಣಗಾಡುತ್ತಿರುವುದು ಕಾಣುತ್ತಿದೆ. ಪ್ರಬಲ ಆರ್ಥಿಕತೆ ಹೊಂದಿದ್ದ ಪ್ರತಿ ದೇಶದ ಮೊದಲ ವರ್ತನೆ ಅಂತರ್ಮುಖವಾಗುವುದು ಮತ್ತು ಪ್ರಾದೇಶಿಕವಾಗಿ ಗಡಿ ಮುಚ್ಚಿಕೊಳ್ಳುವುದಾಗಿತ್ತು. ಹಿಂದಿನಿದಲೂ ಉಳಿದಿಕೊಂಡಿರುವ ಜಾಗತಿಕ ವ್ಯವಸ್ಥೆಯ ಸಾಂಸ್ಥಿಕ ಲೋಪಗಳು ಮತ್ತು ಕೋವಿಡ್-19 ಆಘಾತ, ಉಗ್ರ ರಾಷ್ಟ್ರೀಯತೆಯ ಸಹಕಾರದಿಂದ ರಾಷ್ಟ್ರಗಳ ಸಂಕುಚಿತ ರಕ್ಷಣಾತ್ಮಕತೆಗೆ  ಪುಷ್ಟಿ ನೀಡಿವೆ. ಯಾವತ್ತೂ ಅಲ್ಲದೆ ಇದ್ದರೂ ಸದ್ಯಕ್ಕೆ ಹೆಚ್ಚಿನ ಬಹುತ್ವದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆ ಸೃಷ್ಟಿಯಾಗುವುದು ಇನ್ನೂ ದೂರವಿದೆ. ಬದಲಾಗಿ, ಮಾಜಿ ರಾಷ್ಟ್ರೀಯ ಭದ್ರತೆ ಸಲಹೆಗಾರ ಶಿವಶಂಕರ್ ಮೆನನ್ ಎಚ್ಚರಿಸುವಂತೆ “ನಾವು ಇನ್ನಷ್ಟು ಬಡತನದ, ಸಣ್ಣತನದ ಮತ್ತು ಸಣ್ಣದಾದ ಪ್ರಪಂಚವಾಗುತ್ತಿದ್ದೇವೆ”.

ಉತ್ಪಾದನಾ ಕೊಂಡಿಯಲ್ಲಿ ಆಗುವ ಅನಿಶ್ಚಿತತೆಯನ್ನು ತಪ್ಪಿಸಲು, ಭೂರಾಜಕೀಯವಾದ ಸೂಕ್ಷ್ಮ ಪ್ರಾಂತ್ಯಗಳನ್ನು ನಿರ್ಲಕ್ಷಿಸಲು ಮತ್ತು ತುರ್ತು ಪರಿಹಾರಗಳಿಗೆ ರಾಷ್ಟ್ರೀಯ ಬೇಡಿಕೆಗಳಿಗಾಗಿ ಪ್ರಭುತ್ವದ ಹಸ್ತಕ್ಷೇಪ ಹೆಚ್ಚಾಗುತ್ತಿದ್ದಂತೆ ಉತ್ಪಾದನೆ, ದಾಸ್ತಾನು, ವಿತರಣೆ ಕೊಂಡಿಗಳು ಮತ್ತು ಸಮಸ್ಯೆಯಿಂದ ಚೇತರಿಸಿಕೊಳ್ಳುವ ಯೋಜನೆಗಳ ಮೇಲಿನ ದೊಡ್ಡ ಬಂಡವಾಳಶಾಹಿಳ ಹಿಡಿತ ಸಡಿಲವಾಗಿಸುತ್ತದೆ. ಇದರಿಂದ ಈ ದೊಡ್ಡ ಬಂಡವಾಳಶಾಹಿಗಳ ಲಾಭಾಂಶ ಕಮ್ಮಿಯಾಗುತ್ತದೆ ಮತ್ತು ಸ್ಥಿರತೆಗೆಗಾಗಿ ಬೇಡಿಕೆ ಹೆಚ್ಚಾಗುತ್ತದೆ.

ಈ ಎಲ್ಲ ಬೆಳವಣಿಗೆಗಳು ತೀವ್ರ ಜಾಗತೀಕರಣ ಮತ್ತು ಅದರ ಲೋಪಗಳಿಂದ ಪಾರು ಮಾಡುತ್ತದೆಂದು ಕೆಲವರು ಸಂತೋಷದಿಂದ ವಾದಿಸಬಹುದು. ಕೋವಿಡ್-19 ಹೆಚ್ಚು ಸಮತೋಲನದಿಂದ ಮತ್ತು ಬಹುತ್ವದಿಂದ ಕೂಡಿದ ಆರ್ಥಿಕ ಮತ್ತು ರಾಜಕೀಯ ಜಾಗತೀಕರಣಕ್ಕೆ ಕಾರಣವಾಗಬಹುದು ಎಂಬುದು ತಪ್ಪು ಗ್ರಹಿಕೆ. ಆರ್ಥಿಕ ಸಂಗತಿಗಳಲ್ಲಿ ಪ್ರಭುತ್ವದ ಹಸ್ತಕ್ಷೇಪ ಮತ್ತು ರಕ್ಷಣಾತ್ಮಕತೆ ಈಗ ಸದ್ಯಕ್ಕೆ ಅದರ ಮುಂದಿರುವ ಸುಲಭದ ದಾರಿಗಳು ಮತ್ತು ಈ ಬಿಕ್ಕಟ್ಟು ಮುಗಿದ ಮೇಲೆ ದೇಶಗಳು ಈ ಕ್ರಮಗಳಿಗೆ ಮುಂದಾಗುತ್ತವೆ. ಒಳಗೊಳ್ಳುವ ಮತ್ತು ಜಾಗ್ರತ ಜಾಗತೀಕರಣ ಮತ್ತು ಅದಕ್ಕೆ ಸಂಬಂಧಿಸಿದ ರಾಜಕೀಯ ಸವಲತ್ತುಗಳಿಗೆ ಯಾವುದೇ ಇಂಬು ಸಿಗದೆ ಹಿಂಬಾಗಲಿನಿಂದ “ಲೈಸನ್ಸ್ ರಾಜ್” ಮತ್ತೆ ಬರುತ್ತದೆ.

ಪ್ರಭುತ್ವಗಳು ತನ್ನ ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಸನ್ನದ್ಧರಾಗಿದ್ದೇವೆ ಎಂದು ಎಷ್ಟೇ ಕೊಚ್ಚಿಕೊಂಡರೂ ನಮ್ಮನ್ನು ಈ ಸಾಂಕ್ರಾಮಿಕದಿಂದ ಪಾರು ಮಾಡುವುದರಲ್ಲಿ ಸೋತಿವೆ. ಆದರೂ ಪ್ರಭುತ್ವಗಳು ಹೆಚ್ಚಿನ ಅಧಿಕಾರ, ಕಾನೂನು ಸಮ್ಮತವಾಗಿ ಮತ್ತು ಬೇಹುಗಾರಿಕೆ ತಂತ್ರಜ್ಞಾನಗಳೊಂದಿಗೆ ಬಲಶಾಲಿಯಾಗಿ ಹಿಂದಿರುಗಿವೆ. ಪರಿಣಾಮ ಏನೇ ಇರಲಿ ಬದಲಾದ ಪರಿಸ್ಥಿತಿಯಲ್ಲಿ ಬೆದರಿರುವ ನಾಗರಿಕ ಸಮೂಹ ಪ್ರಭುತ್ವ ಸರ್ವಶಕ್ತಿಯೂ ಮತ್ತು ಸರ್ವವ್ಯಾಪಿಯೂ ಆಗಿರಲೆಂದು ಆಶಿಸುತ್ತದೆ. ಜಾಗತಿಕ ಆರ್ಥಿಕ ಶಕ್ತಿಗಳ ಎದುರು ತನ್ನ ಪ್ರಭಾವ ಕಳೆದುಕೊಳ್ಳುತ್ತಿದ್ದ ಪ್ರಭುತ್ವ ಈ ಮುಂಬರುವ ಸಮೂಹ ಅರಾಜಕದ ದಿನಗಳಲ್ಲಿ ಜನರ ಕೊನೆಯ ರಕ್ಷಕನಾಗಿ ಹಿಂದಿರುಗುತ್ತದೆ.

ಜಾಗತೀಕರಣಕ್ಕೆ ಬೀಳುತ್ತಿರುವ ತೀವ್ರ ಹೊಡೆತಗಳಿಂದ, ಪ್ರಭುತ್ವ ಪೋಷಿತ ಜಾಗತೀಕರಣ ಮತ್ತು ಆರ್ಥಿಕ ಅಭಿವೃದ್ಧಿಯ ಮಾದರಿಗಳು ದೊಡ್ಡ ಬಂಡವಾಳಶಾಹಿ ಸಂಸ್ಥೆಗಳ ಮುಂದಾಳತ್ವದ ಜಾಗತೀಕರಣ ಮಾದರಿಗಿಂತ ಹೆಚ್ಚು ಪ್ರಚಲಿತವಾಗುತ್ತವೆ. ಇದರಿಂದ ಜಾಗತೀಕರಣದ ಮೂಲ ಸಮಸ್ಯೆಗಳಿಗೆ ಗುಣಾತ್ಮಕ ನಿಯಂತ್ರಣಗಳು ಮೂಡುತ್ತವೆಯೇ? ಕಾದು ನೋಡಬೇಕು. ಆದರೆ ಪ್ರಮುಖ ಪ್ರಶ್ನೆ ದೊಡ್ಡ ಬಂಡವಾಳವನ್ನು ಎದುರು ಹಾಕಿಕೊಳ್ಳಲು ಪ್ರಭುತ್ವಕ್ಕೆ ಇರುವ ಪ್ರೋತ್ಸಾಹ ಏನೆಂಬುದು. ಪ್ರಭುತ್ವಗಳು ಮತ್ತು  ದೊಡ್ಡ ಬಂಡವಾಳಶಾಹಿಗಳ ನಡುವೆ ಈಗಿರುವ ಅವಿನಾಭಾವ ಸಂಬಂಧವನ್ನು ನೋಡಿದರೆ, ಸಾಮಾನ್ಯ ಜನರ ಹಿತದೃಷ್ಟಿಗೆ ಧಕ್ಕೆಯಾದರೂ ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಪ್ರಭುತ್ವಗಳು ಕಾಪಾಡಿಕೊಂಡು ಬರುತ್ತಿವೆ. ಉದಾಹರಣಗೆ ಪಶ್ಚಿಮ ರಾಷ್ಟ್ರಗಳು ಜನರ ಆರೋಗ್ಯಕ್ಕಾಗಿ ಸ್ಪಂದಿಸುವ ಮೊದಲು ತಮ್ಮ ಬಂಡವಾಳ ಮಾರುಕಟ್ಟೆಗಳ ರಕ್ಷಣೆಗೆ ನಿಂತಿದ್ದು.

ಹೊಸ ಬಗೆಯ  ಜನಾಂಗೀಯವಾದ

 ಈ ಸಾಂಕ್ರಾಮಿಕದ ಮತ್ತೊಂದು ಅನಪೇಕ್ಷಿತ ದುಷ್ಪರಿಣಾಮವೆಂದರೆ ಹೊಸ ರೀತಿಯ ಪಕ್ಷಪಾತಗಳು ಹುಟ್ಟುತ್ತಿರುವುದು. ಪ್ರಪಂಚಾದ್ಯಂತ, ಸಮಾಜಗಳು ಅತಿಯಾಗಿ ಅಂತರ್ಮುಖಿಗಳಾಗಿ, ಸ್ವ-ಆಸಕ್ತಿಯನ್ನಷ್ಟೇ ನೋಡಿಕೊಂಡು, ವಲಸೆ ಮತ್ತು ನಿರಾಶ್ರಿತರ ಪರವಾದ ಉದಾರ ನೀತಿಗಳ ವಿರುದ್ಧವಾಗಿ ಚಲಿಸಬಹುದು. ವಸ್ತುಗಳ ಮೂಲದ ಬಗ್ಗೆ ಹೊಸ ರೀತಿಯ ಪ್ರೆಶ್ನೆಗಳು ಹುಟ್ಟಬಹುದು. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಂದ ಹೊಮ್ಮುವ ಉತ್ಪನ್ನಗಳ ಮೇಲೆ ಕಠಿಣ ಆರೋಗ್ಯ ಸುರಕ್ಷತಾ ನಿರ್ಬಂಧಗಳನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹೇರಬಹುದು. ಹೆಚ್ಚು ಸಂಪ್ರದಾಯವಾದಿ ರಾಷ್ಟ್ರಗಳು ಗಡಿಗಳು ಮುಚ್ಚುವುದರ ಬಗ್ಗೆ ಹೊಂದಿರುವ ನಿಲುವಿಗೆ ಈ ಲಾಕ್ ಡೌನ್ ಮತ್ತು ಪ್ರಯಾಣ ನಿರ್ಬಂಧಗಳು ಅಧಿಕೃತತೆ ತಂದುಕೊಡಬಹುದು. ದುರ್ದೈವ ಎಂದರೆ, ಇಂತಹ ಜಾಗತಿಕ ಸಾಂಕ್ರಾಮಿಕಕ್ಕೆ ರಾಜಕೀಯ ಜಾಗತೀಕರಣ ಒಂದು ಉತ್ತರವಾದರೆ, ಕೋವಿಡ್-19 ಅದನ್ನೇ ಇನ್ನಷ್ಟು ಕುಗ್ಗಿಸಬಹುದು.

ಭಾರತದಲ್ಲೂ ‘ಸಾಮಾಜಿಕ ಅಂತರ’ ಅನಪೇಕ್ಷಿತ ಸಾಮಾಜಿಕ ಆಚರಣೆಗಳನ್ನು ಸೃಷ್ಟಿಸುವ ಮೂಲಕ ಹೊಸ ರೀತಿಯ ತಾರತಮ್ಯಗಳು ತಲೆದೋರಬಹುದು. ಉದಾಹರಣೆಗೆ, ದೆಹಲಿಯಲ್ಲಿ ಒಬ್ಬ ಮಣಿಪುರದ ಮಹಿಳೆಯನ್ನು “ಕೊರೊನವೈರಸ್” ಎಂದು ಹೀಯಾಳಿಸಿ ಪುರುಷನೊಬ್ಬ ಉಗುಳಿದ ಪ್ರಕರಣ, ಗೇಟೆಡ್ ಸಮುದಾಯಗಳು ಕೋವಿಡ್-19 ಪ್ರತ್ಯೇಕತೆಯಲ್ಲಿರುವ ವ್ಯಕ್ತಿಗಳ ಮೇಲೆ ತಾರತಮ್ಯ ಮಾಡುತ್ತಿರುವ ಪ್ರಕರಣಗಳು ಹೊಸ ಬಗೆಯ ತಾರತಮ್ಯಗಳನ್ನು ಸೂಚಿಸಿವೆ. ಹುಟ್ಟು ಮತ್ತು ವರ್ಗಕ್ಕೆ ಸಂಬಂಧಿಸಿದ ಶುದ್ಧಿಯ ಬಡಬಡಿಕೆಗಳು ಮತ್ತು ಅದರ ಜೊತೆಗೆ ಅಂಟುಕೊಂಡ ಶುಚಿತ್ವದ ಹಳಹಳಿಕೆಗಳು ಇನ್ನಷ್ಟು ಚೂಪಾಗಬಹುದು. ಈ ವೈರಾಣು ಹೆಚ್ಚು ದಿನ ಉಳಿದಷ್ಟೂ ಈ ಆಚರಣೆಗಳು ಇನ್ನೂ ಆಳಕ್ಕೆ ಹೋಗುವ ಸಾಧ್ಯತೆಗಳಿವೆ. ಇಂತಹ ಆಚರಣೆಗಳು ಉಂಟು ಮಾಡುವ ಪರಿಣಾಮಗಳ ಬಗ್ಗೆ ತಿಳಿದೇ ಇದೆ; ಇಲ್ಲಿಂದ ಇನ್ನಷ್ಟು ಬಿಗಡಾಯಿಸಬಹುದಷ್ಟೇ!

(ಕೃಪೆ): ದ ಹಿಂದೂ ಪತ್ರಿಕೆ

 

  • ಹ್ಯಾಪಿಮೊನ್ ಜೇಕಬ್, (ದೆಹಲಿಯ JNUನಲ್ಲಿ ರಾಷ್ಟ್ರೀಯ ಭದ್ರತೆಯ ವಿಷಯವನ್ನು ಪಾಠ ಮಾಡುತ್ತಾರೆ)
  • (ಕನ್ನಡಕ್ಕೆ) ಪೃಥ್ವಿ, ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಶ್ ಪಾಠ ಮಾಡುವ ಸಂಶೋಧನಾ ವಿದ್ಯಾರ್ಥಿ
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights