ಖರ್ಗೆ, ದೇವೇಗೌಡರು ಸೇರಿ ರಾಜ್ಯಸಭೆಗೆ ನಾಲ್ಕೂ ಅಭ್ಯರ್ಥಿಗಳ ಅವಿರೋಧ ಆಯ್ಕೆ

ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳ ರಾಜ್ಯಸಭಾ ಚುನಾಚಣೆ ಜೂನ್ 19 ಕ್ಕೆ ನಡೆಯಬೇಕಿತ್ತು. ನಾಲ್ಕಕ್ಕಿಂತ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ಎಲ್ಲ ಅಭ್ರರ್ಥಿಗಳೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅಧಿಕೃತವಾಗಿ ಘೋಷಿಸಿದ್ದಾರೆ.

ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್‌ನಿಂದ ಹೆಚ್.ಡಿ. ದೇವೇಗೌಡ ಮತ್ತು ಬಿಜೆಪಿಯ ಅಭ್ಯರ್ಥಿಗಳಾದ ಈರಣ್ಣ ಕಡಾಡಿ ಮತ್ತು ಅಶೋಕ ಗಸ್ತಿಯವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯಲ್ಲಿ ಸದ್ಯಕ್ಕೆ 222 ಸ್ಥಾನಗಳಿದ್ದು, ಎರಡು ಸ್ಥಾನಗಳು ಖಾಲಿ ಉಳಿದಿವೆ. ಒಬ್ಬ ಅಭ್ಯರ್ಥಿ ಗೆಲ್ಲಲು ಪ್ರಥಮ ಪ್ರಾಸಶ್ತ್ಯದ 48 ಮತಗಳ ಅಗತ್ಯವಿತ್ತು. ಜೆಡಿಎಸ್‌ 34, ಕಾಂಗ್ರೆಸ್‌ 68, ಬಿಜೆಪಿ 117, ಬಿಎಸ್‌ಪಿ 01 ಮತ್ತು 03 ಸ್ವತಂತ್ರ ಶಾಸಕರಿದ್ದಾರೆ. ಕಾಂಗ್ರೆಸ್‌ ಮಲ್ಲಿಕಾರ್ಜುನ ಖರ್ಗೆಯವರ ಜೊತೆಗೆ ಉಳಿದ ಮತಗಳನ್ನು ಜೆಡಿಎಸ್‌ನ ದೇವೇಗೌಡರಿಗೆ ಚಲಾಯಿಸುವುದಾಗಿ ಮೊದಲೇ ಘೋಷಿಸಿತ್ತು. ನಾಲ್ಕು ಸ್ಥಾನಗಳಿಗೆ ನಾಲ್ಕು ನಾಮಪತ್ರಗಳು ಮಾತ್ರ ಸಲ್ಲಿಕೆಯಾದ್ದರಿಂದ ಚುನಾವಣೆ ನಡೆಸದೇ ಅವಿರೋಧ ಆಯ್ಕೆ ಮಾಡಲಾಗಿದೆ.

ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಈ ಕುರಿತ ಹೇಳಿಕೆ ನೀಡಿದ್ದು, “ರಾಜ್ಯಸಭಾ ಚುನಾವಣೆ-2020ರಲ್ಲಿ ಕರ್ನಾಟಕದಲ್ಲಿ ನಾಲ್ಕೂ ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ” ಎಂದು ತಿಳಿಸಿದ್ದಾರೆ.

ರಾಜ್ಯಸಭೆ ಫಲಿತಾಂಶ ಘೋಷಣೆಯಾದ ನಂತರ ಬಿಜೆಪಿ ಪಕ್ಷದ ಅಭ್ಯರ್ಥಿಗಳಾದ ಈರಣ್ಣ ಕಡಾಡಿ, ಅಶೋಕ ಗಸ್ತಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಖರ್ಗೆ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರಿಂದ ಅಧಿಕೃತ ಘೋಷಣೆ ಪತ್ರವನ್ನ ಪಡೆದುಕೊಂಡಿದ್ದಾರೆ.

https://twitter.com/INCKarnataka/status/1271407871499132929?s=20

ನಂತರ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆಯವರು, ರಾಜ್ಯದ- ದೇಶದ ಸಮಸ್ಯೆಗಳನ್ನು ಸಮರ್ಥವಾಗಿ ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇನೆ. ಆ ಮೂಲಕ ಜನಪರವಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಸೋನಿಯಾ ಗಾಂಧಿ ಅವರು ನನ್ನ ಮೇಲೆ ನಂಬಿಕೆ ಇಟ್ಟು ರಾಜ್ಯಸಭೆಗೆ ಕಳುಹಿಸಿದ್ದಾರೆ. ಅವರಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ಹಿಂಬಾಗಿಲಿನ ಮೂಲಕ ರಾಜ್ಯಸಭೆಗೆ ಪ್ರವೇಶಿಸಿದ್ದಾರೆ ಎಂದು ಬಿಜೆಪಿಯವರು ನನ್ನ ಆಯ್ಕೆಯ ಬಗ್ಗೆ ಟೀಕಿಸಿದ್ದಾರೆ.  ನೇರವಾಗಿ ನನ್ನಷ್ಟು ವರ್ಷ ವಿಧಾನಸಭೆಗೆ ಆಯ್ಕೆಯಾದವರು ಬಿಜೆಪಿಯಲ್ಲಿ ಯಾರಿದ್ದಾರೆ ಎಂದು ಹೇಳಲಿ ಎಂದು ಸವಾಲು ಹಾಕಿದ್ದಾರೆ. ಬಿಜೆಪಿಯವರು ನನ್ನಷ್ಟು ವರ್ಷ ರಾಜಕಾರಣ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಕೂಡ ಖರ್ಗೆಯವರು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights