ಗೌತಮ್ ನವ್ಲಖಾ ಏಳು ದಿನಗಳವರೆಗೆ ಪೋಲಿಸ್ ವಶಕ್ಕೆ – ಇಲ್ಲಿಯವರೆಗೂ ನಡೆದಿದ್ದೇನು?

ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ನಾಗರಿಕ ಹಕ್ಕುಗಳ ಹೋರಾಟಗಾರ ಗೌತಮ್ ನವ್ಲಖಾ ಅವರನ್ನು ಏಳು ದಿನಗಳ ಕಾಲ ಪೋಲಿಸ್ ವಶಕ್ಕೆ ನೀಡಿ ಕೋರ್ಟ್ ಬುಧವಾರ ಆದೇಶ ಹೊರಡಿಸಿದೆ. 2018ರ ಭೀಮ್ ಕೊಂರೆಗಾವ್ ಗಲಭೆಗಳಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಎದುರಿಸುತ್ತಿರುವ ನವ್ಲಖಾ ಮಂಗಳವಾರ ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) ಎದುರು ಶರಣಾಗಿದ್ದರು.

10 ದಿನಗಳ ವಶಕ್ಕಾಗಿ ಎನ್ ಐ ಎ  ಮನವಿಗೆ, ಆರೋಗ್ಯ ಮತ್ತು ವಯೋಮಾನದ ದೃಷ್ಟಿಯಿಂದ ನವ್ಲಖಾ ಪರ ವಕೀಲರು ವಿರೋಧಿಸಿದರೂ, ಏಳು ದಿನಗಳ ವಶಕ್ಕೆ ಕೋರ್ಟ್ ಆದೇಶಿಸಿದ್ದು, ಕೊರೊನ ಸಾಂಕ್ರಾಮಿಕ ವ್ಯಾಪಕವಾಗಿರುವ ಈ ಸಮಯದಲ್ಲಿ ಹೆಚ್ಚುವರಿ ಸುರಕ್ಷತೆ ತೆಗೆದುಕೊಳ್ಳಬೇಕಾಗಿ ಸುಪ್ರೀಂ ಕೋರ್ಟ್ ಸೂಚಿಸಿದೆ. ಪ್ರತಿ 48 ಘಂಟೆಗೊಮ್ಮೆ ಅವರ ಆರೋಗ್ಯ ತಪಾಸಣೆ ಮಾಡಬೇಕೆಂದು ಕೂಡ ಸೂಚಿಸಿದೆ.

ಮಾರ್ಚ್ 16 ರಂದು ಗೌತಮ್ ನವ್ಲಖಾ ಮತ್ತು ಆನಾದ್ ತೇಲ್ತುಂಬ್ಡೆ ಅವರ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿದ್ದ ಸುಪ್ರೀಂ ಕೋರ್ಟ್ ಪೊಲೀಸರಿಗೆ ಶರಣಾಗುವಂತೆ ಸೂಚಿಸಿತ್ತು. ಇವರುಗಳ ವಿರುದ್ಧದ ಪ್ರಕರಣವನ್ನು ಪುಣೆ ಎನ್ ಐ ಎ ಗೆ ಜನವರಿಯಲ್ಲಿ ವರ್ಗಾಯಿಸಲಾಗಿತ್ತು. ಇವರು ಇಬ್ಬರ ವಿರುದ್ಧ ಬಹಳ ಕಠಿಣ ಕಾನೂನಾದ ಕಾನೂನುವಿರೋಧಿ ಚಟುವಟಿಕೆ (ತಡೆ) ಕಾಯ್ದೆ (ಯು ಎ ಪಿ ಎ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಭೀಮ್ ಕೊಂರೆಗಾವ್ ಮತ್ತು ಎಲ್ಗಾರ್ ಪರಿಷತ್ ಹಿನ್ನೋಟ

ಕೊಂರೆಗಾವ್ ಯುದ್ಧದ 200ನೆ ವರ್ಷದ ನೆನಪಿನಲ್ಲಿ ಮಹಾರಾಷ್ಟ್ರದ ಪುಣೆಯ ಭೀಮ ಕೊಂರೆಗಾವ್ ಗ್ರಾಮದಲ್ಲಿ ಲಕ್ಷಾಂತರ ದಲಿತರು ಜನವರಿ 1, 2018 ರಂದು ನೆರೆದಿದ್ದರು. 1818ರ ಯುದ್ಧದಲ್ಲಿ ಬ್ರಿಟಿಶ್ ಸೇನೆಯ ಜೊತೆಗೆ ದಲಿತ್ ಮಹರ್ ಯೋಧರು ಸೇರಿಕೊಂಡು ಬ್ರಾಹ್ಮಣ ಪೇಶ್ವರನ್ನು ಸೋಲಿಸಿದ್ದರ ನೆನಪು ಅದಾಗಿತ್ತು. ಅಂದು ಅಲ್ಲಿನ ಈ ಕಾರ್ಯಕ್ರಮ, ದಲಿತರು ಮತ್ತು ಮರಾಠರ ನಡುವೆ ಹಿಂಸೆಗೆ ತಿರುಗಿಕೊಂಡಿತು. ಒಂದು ದಿನದ ಹಿಂದೆ ಪುಣೆಯ ಎಲ್ಗಾರ್ ಪರಿಷತ್ ನಲ್ಲಿ ಈ ಯುದ್ಧದ ನೆನಪಿಗಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜನವರಿ 1 ರ ಹಿಂಸಾಚಾರದಲ್ಲಿ ಒಬ್ಬ ದಲಿತ ವ್ಯಕ್ತಿ ಸಾವಿಗೀಡಾಗಿದ್ದರು ಮತ್ತು ಈ ಕಾರಣಕ್ಕಾಗಿ ದಲಿತ ಸಂಘಟನೆಗಳು ಜನವರಿ 2 ರಂದು ಬಂದ್ ಗೆ ಕರೆಕೊಟ್ಟಿದ್ದರು.

ಎಲ್ಗಾರ್ ಪರಿಷತ್ ಸಮಾವೇಶವನ್ನು ಆಯೋಜಿಸಿದ್ದವರು ಪುಣೆ ಮೂಲದ ಇಬ್ಬರು ಮಾಜಿ ನ್ಯಾಯಮೂರ್ತಿಗಳಾದ ಬಿ ಜಿ ಕೊಲ್ಸೆ- ಪಾಟೀಲ್ ಮತ್ತು ಪಿಬಿ ಸಾವಂತ್. ಕೊಮುವಾದಾದ ವಿರುದ್ಧ ಸಂದೇಶ ಹರಡುವುದಕ್ಕೆ ಈಸಮಾವೇಶವನ್ನು ಆಯೋಜಿಸಿದ್ದಾಗಿ ಈ ನ್ಯಾಯಮೂರ್ತಿಗಳು ಹೇಳಿದ್ದರು.

ಆದರೆ ಎಲ್ಗಾರ್ ಪರಿಷತ್ ನಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳು ಹಿಂಸಾಚಾರಕ್ಕೆ ಕಾರಣ ಎಂದು 2018 ಏಪ್ರಿಲ್ ನಲ್ಲಿ ಪುಣೆ ಪೊಲೀಸರು 10 ಜನ ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ತನಿಖೆ ನಡೆಸಿತ್ತು. ಜೂನ್ ಆರರಂದು ದಲಿತ ಕಾರ್ಯಕರತ ಸುರೇಂದ್ರ ಗಾಡ್ಲಿಂಗ್, ನಾಗಪುರ ವಿಶ್ವವಿದ್ಯಾಲಯದ ಇಂಗ್ಲಿಶ್ ವಿಭಾಗ ಮುಖ್ಯಸ್ಥರಾದ ಶೋಮ ಸೆನ್ ಮತ್ತು ಸಾಮಾಜಿಕ ಕಾರ್ಯಕರ್ತ ಮಹೇಶ್ ರಾವತ್ ಅವರುಗಳನ್ನು ನಾಗಪುರದಿಂದ ಮತ್ತು ಮುಂಬೈನಿಂದ ದಲಿತ ಹೋರಾಟಗಾರ ಮತ್ತು ವಿರೋಧಿ ಪತ್ರಿಕೆಯ ಸಂಪಾದಕ ಸುಧೀರ್ ಧವಳೆ, ದೆಹಲಿಯಿಂದ ಸಾಮಾಜಿಕ ಕಾರ್ಯಕರ್ತ ರೋಣ ವಿಲ್ಸನ್ ಅವರನ್ನು ಬಂಧಿಸಿದರು. ಆಗಸ್ಟ್ 28 ರಂದು ವಕೀಲೆ – ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್, ಮಾನವ ಹಕ್ಕುಗಳ ಕಾರ್ಯಕರ್ತ ಅರುಣ್ ಫೆರ್ರೆರಾ, ಸಾಮಾಜಿಕ ಕಾರ್ಯಕರ್ತ ವೆರ್ನನ್ ಗೊಂಸ್ಲೆವ್ಸ್, ಕವಿ ಮತ್ತು ಸಾಮಾಜಿಕ ಕಾರ್ಯಕರ್ತ ವರವರ ರಾವ್ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವ್ಲಖಾ ಅವರನ್ನು ಬಂಧಿಸಲಾಗಿತ್ತು.

ಭೀಮ ಕೊಂರೆಗಾವ್ ಹಿಂಸೆಗೆ ಪ್ರಚೋದನೆ ಕೊಟ್ಟ ಆರೋಪ ಅಲ್ಲದೆ, ಸರ್ಕಾರವನ್ನು ಕೆಳಗಿಳಿಸಲು ಫ್ಯಾಸಸಿಸ್ಟ್ ವಿರೋಧಿ ಪಡೆ ಕಟ್ಟುವ ರಾಷ್ಟ್ರವ್ಯಾಪಿ “ಮಾವೋವಾದಿ” ಪಿತೂರಿ ಜೊತೆಗೆ ಪ್ರಧಾನಿಯನ್ನು ಕೊಲೆ ಮಾಡುವ ಪಿತೂರಿ ಆರೋಪವನ್ನು ಹೊರಿಸಲಾಯಿತು. ಆರೋಪಿಗಳಿಗೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ) ಸದಸ್ಯರು ಮತ್ತು ಅರ್ಬನ್ ನಕ್ಸಲರು ಎಂಬ ಬಣ್ಣ ಬಳೆಯಲಾಯಿತು.

ಎಲ್ಗಾರ್ ಪರಿಷತ್ ಸಮಾವೇಶದ ಆಯೋಜನೆಗೆ ಬಂಧಿತರಾಗಿರುವ ಯಾವ ಸಾಮಾಜಿಕ ಕಾರ್ಯಕರ್ತರೂ ಹಿಂಸೆಗೆ ಕಾರಣರಲ್ಲ ಎಂದು ತಿಳಿಸಿದ್ದ ಸಮಾವೇಶ ಆಯೋಜಿಸಿದ್ದ ನ್ಯಾಯಮೂರ್ತಿಗಳು, ಕಾರ್ಯಕರ್ತರ ಮೇಲೆ ಹೊರಿಸಿರುವ ಆರೋಪಗಳನ್ನು ಅಲ್ಲಗೆಳೆದಿದ್ದರು.

ಈ ಎರಡೂ ಪ್ರಕರಣಗಳನ್ನು ಪುಣೆ ಪೊಲೀಸರು ತನಿಖೆ ನಡೆಸುತ್ತಿದ್ದರು. ಆದರೆ ಶಿವಸೇನ ಅಧ್ಯಕ್ಷ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಒಪ್ಪಿಗೆಯೊಂದಿಗೆ ಈ ಪ್ರಕರಣಗಳನ್ನು ಪುಣೆ ಪೋಲಿಸರಿಂದ ಎನ್ ಐ ಎ ಗೆ ವರ್ಗಾಯಿಸಲಾಗಿತ್ತು. ಈ ನಡೆಯನ್ನು ಶಿವಸೇನೆ ಮಿತ್ರಪಕ್ಷ ಎನ್ ಸಿ ಪಿ ಅಧ್ಯಕ್ಷ ಶರದ್ ಪವಾರ್ ಖಂಡಿಸಿದ್ದರು.

ಈ ಬಂಧನಗಳ ಸರ್ಕಾರದ ನಡೆಯನ್ನು ವಿರೋಧಿಸಿ ದೇಶ ವಿದೇಶಗಳಿಂದ ಹಲವು ಚಿಂತಕರು ಪತ್ರ ಬರೆದು ಖಂಡಿಸಿದ್ದರು.

ಗೌತಮ್ ನವ್ಲಖಾ ಅವರ ಹಿನ್ನಲೆ ಮತ್ತು ಶರಣು

ಗೌತಮ್ ನವ್ಲಖಾ ನಾಗರಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಹೋರಾಟಗಾರ. ಮೊದಲಿನಿದಲೂ ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್ ಸಂಸ್ಥೆಯ ಜೊತೆಗೆ ಸಕ್ರಿಯವಾಗಿದ್ದವರು. ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ನಾಗರಿಕ ಟ್ರಿಬ್ಯುನಲ್ ನ ಸಂಚಾಲಕರಗಿದ್ದವರು. ಕಾಶ್ಮೀರದಲ್ಲಿ ಮಿಲಿಟರಿಯನ್ನು ವಾಪಸ್ ಕರೆದುಕೊಳ್ಳಬೇಕು ಎಂಬುದನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದ ನವ್ಲಖಾ ಅವರು ಚತ್ತೀಸ್ ಘರ್ ನ ಮಾವೋವಾದಿ ಪ್ರಭಾವದ ಪ್ರದೇಶದಲ್ಲಿ ಅಧ್ಯಯನ ನಡೆಸಿ “ಡೇಸ್ ಅಂಡ್ ನೈಟ್ಸ್ ಇನ್ ದ ಹಾರ್ಟ್ ಲ್ಯಾಂಡ್ ಆಫ್ ರೆಬೆಲಿಯನ್” ಎಂಬ ಪುಸ್ತಕವನ್ನು ಬರೆದಿದ್ದಾರೆ. ರಾಜಕೀಯ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಪ್ರತಿಷ್ಠಿತ ಎಕನಾಮಿಕ್ ಅಂದ ಪೊಲಿಟಿಕಲ್ ವೀಕ್ಲಿಯಲ್ಲಿ ಸತತವಾಗಿ ಲೇಖನಗಳನ್ನು ಪ್ರಕಟ ಮಾಡಿದ್ದಾರೆ.

ಇವರನ್ನು ಮೊದಲು ಗೃಹಬಂಧನದಲ್ಲಿ ಇರಿಸಿದ್ದನ್ನು ಕೋರ್ಟ್ ಮುಕ್ತಗೊಳಿಸಿತ್ತು. ಮತ್ತೆ ಭಂದನದ ಭೀತಿ ಒದಗಿದಾಗ ಕಳೆದ ವರ್ಷ ಪುಣೆ ಸೆಷನ್ಸ್ ಕೋರ್ಟ್ ನವ್ಲಖಾ  ಅವರಿಗೆ ನಿರೀಕ್ಷಣ ಜಾಮೀನು ನಿರಾಕರಿಸಿತ್ತು. ನಂತರ ಹೈಕೋರ್ಟ್ ಮೊರೆ ಹೋಗಿ ಕೊನೆಗೆ ಸುಪ್ರೀಂ ಕೋರ್ಟ್ ವರೆಗೂ ಅದು ನಡೆದು ಬಂದು ಕಳೆದ ತಿಂಗಳು ಸುಪ್ರೀಂ ಕೋರ್ಟ್ ಕೂಡ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು.

ಈ ಆದೇಶದ ನಂತರ ಮುಕ್ತ ಪತ್ರ ಬರೆದಿದ್ದ ನವ್ಲಖಾ  ತಮಗೆ ಶರಣಾಗಲು ಮೂರು ವಾರ ಕೊಟ್ಟಿದ್ದ ನ್ಯಾಯಾಧೀಶರಿಗೆ ಮತ್ತು ತಮ್ಮನ್ನು ಕೋರ್ಟ್ ನಲ್ಲಿ ಸಮರ್ಥಿಸಿ ವಾದಿಸಿದ್ದ ಹಿರಿಯ ವಕೀಲರಿಗೆ ಧನ್ಯವಾದ ತಿಳಿಸಿ, ವಿಚಾರಣೆ ಬೇಗ ಮುಗಿದು ನನ್ನ ಮೇಲೆ ಪಿತೂರಿ ಮಾಡಿ ಆರೋಪ ಹೊರಿಸಿರುವ ಪ್ರಕರಣದಿಂದ ಬೇಗ ಹೊರಬರುವಂತೆ ಆಗಲಿ ಎಂದಿದ್ದರು. ಈಗ ನನ್ನ ಜೀವನ ಟೆಸ್ಟ್ ಕ್ರಿಕೆಟ್ ಪಂದ್ಯದಂತೆ ಎಂದಿದ್ದ ನವ್ಲಖಾ ಅವರು ನಾನು ಈಗ ಹೆಚ್ಚು ತಾಳ್ಮೆ ತಂದುಕೊಲ್ಲಬೇಕಿದೆ ಎಂದಿದರು. ಲಿಯೋನಾರ್ಡ್ ಕೋಹೆನ್ ಅವರ ಪದ್ಯವೊಂದನ್ನು ಉದಾಹರಿಸಿ ಎಲ್ಲವೂ ಬಿರುಕುಬಿಟ್ಟಿದೆ, ಆದರೆ ಬೆಳಕು ಮೂಡುವುದು ಬಿರುಕಿನಿಂದಲೇ ಎಂದು ಬರೆದಿದ್ದರು. ರೋಮಿಲಾ ಥಾಪರ್, ಅರುಂಧತಿ ರಾಯ್ ಹೀಗೆ ಮುಂತಾದ ಹಲವು ಚಿಂತಕರು ನವ್ಲಖಾ ಅವರನ್ನು ಬಂಧಿಸಿದಂತೆ ಮಾಡಿದ ಮೊರೆ ಫಲ ನೀಡಲಿಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights