ಚಾಮುಂಡಿ ಬೆಟ್ಟದ ರಥದ ಚಕ್ರಕ್ಕೆ ಬಣ್ಣ: ಪ್ರತಾಪ್ ಸಿಂಹ ವಿವಾದಾತ್ಮಕ ಟ್ವೀಟ್
ಚಾಮುಂಡಿ ಬೆಟ್ಟದ ರಥದ ಚಕ್ರಕ್ಕೆ ಹಚ್ಚಿದ ಬಣ್ಣದ ಬಗ್ಗೆ ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿ ಮೈಸೂರು ಸಂಸದ ಪ್ರತಪ್ ಸಿಂಹ ಟ್ವೀಟ್ ಮಾಡಿದ್ದರು. ಚಕ್ರದ ಪರಿಧಿಯಲ್ಲಿ ಅರ್ಧಚಂದ್ರಗಳನ್ನು ಬಿಡಿಸಿದ್ದರ ಬಗ್ಗೆ ತಮ್ಮ ಅನ್ಯ ಕೋಮು ಅಸಹನೆಯನ್ನು ತೋರಿಸಿಕೊಂಡು ಪರೋಕ್ಷವಾಗಿ ಆಕ್ಷೇಪಿಸಿದ್ದರು.
ಪ್ರತಾಪ್ ಸಿಂಹ ನೇರವಾಗಿ ಈ ಚಿತ್ರಗಳ ಬಗ್ಗೆ ಏನನ್ನೂ ಬರೆಯದೇ ಇದ್ದರೂ, ಅರ್ಧಚಂದ್ರ ಒಂದು ನಿರ್ಧಿಷ್ಟಕೋಮಿನ ಲಾಂಚನ ಎಂಬ ಅರ್ಥ ಬರುವಂತೆ ಅವರ ಟ್ವಿಟ್ಟರ್ ಬೆಂಬಲಿಗರು ಮುಗಿಬಿದ್ದು, ಕೋಮು ದ್ವೇಷ ಕಾರಿಕೊಂಡಿದ್ದರು. ಪ್ರತಾಪ್ ಸಿಂಹ ಅವರೇ ಮತ್ತೊಂದು ಟ್ವೀಟ್ ಮಾಡಿ “ಪಾಠ ಕಲಿಸದೇ ಬಿಡುವುದಿಲ್ಲ” ಎಂದು ಬರೆದುಕೊಂಡಿದ್ದರು.
ಚಾಮುಂಡಿ ಬೆಟ್ಟದ ರಥದ ಚಕ್ರಕ್ಕೆ ಮಾಡಿರುವ ಪೇಂಟಿಂಗ್ ನೋಡಿ… ಇಂಥದ್ದನ್ನ ಸಹಿಸಬೇಕಾ ಹೇಳಿ? pic.twitter.com/Foh9tArr4W
— Pratap Simha (@mepratap) March 10, 2020
ಈಗ ಆ ಅರ್ಧಚಂದ್ರದ ಚಿತ್ರಗಳನ್ನು ಬದಲಿಸಿ ಹೊಸ ಬಣ್ಣ ಬಳಿಯಲಾಗಿರುವ ಚಕ್ರದ ಫೋಟೋವನ್ನು ಕೂಡ ಪತಾಪ್ ಸಿಂಹ ಹಂಚಿಕೊಂಡಿದ್ದಾರೆ.
ಭಾರತ ಮತ್ತು ಕರ್ನಾಟಕ ಮೊದಲಿಂದಲೂ ಬಹು ಜನರ, ಬಹು ಸಂಸ್ಕೃತಿಯ ತಾಣ. ವಿವಿಧ ಧರ್ಮಗಳ, ವಿವಿಧ ಸಮುದಾಯಗಳ ಸಾಂಸ್ಕೃತಿಕ ಚಿಹ್ನೆಗಳು, ಆಚರಣೆಗಳು ಕೂಡಿಕೊಂಡಿವೆ. ಭಾವೈಕ್ಯತೆಗೆ ಧಕ್ಕೆ ತರುವ ಇಂತಹ ಕೆಲಸಗಳನ್ನು ಮಾಡುವುದು ಸಂಸದರಿಗೆ ಸಲ್ಲ ಎಂದು ಕೂಡ ಹಲವರು ಟ್ವೀಟ್ ಮಾಡಿ ಬುದ್ಧಿ ಹೇಳಿದ್ದಾರೆ.
ಇನ್ನೂ ಕೆಲವು ಟ್ವಿಟ್ಟರ್ ಬಳಕೆದಾರರು, ಕರ್ನಾಟಕವನ್ನು ಭಾಧಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸದೆ ಇಂತಹ ಬೇಡವಾದ ವಿಷಯಗಳ ಬಗ್ಗೆ ಬರೆದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://twitter.com/mepratap/status/1237389524306518022

