ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ : ಅಧ್ಯಕ್ಷರಾಗಿ ಕಲ್ಕುಳಿ ವಿಠಲ ಹೆಗ್ಗಡೆ CT ravi ವಿರೋದ..

ಜನವರಿ 10-11ರಂದು ನಡೆಯುವ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಕಲ್ಕುಳಿ ವಿಠಲ ಹೆಗ್ಗಡೆಯವರನ್ನು ಬದಲಿಸಿದರೆ ಬೆಂಗಳೂರಿನ ಕ.ಸಾ.ಪ ಕಚೇರಿ ಎದುರು ಧರಣಿ ನಡೆಸುತ್ತೇನೆ ಎಂದು ಹಿರಿಯ ಸಾಹಿತಿಗಳಾದ ಜಗದೀಶ್‌ ಕೊಪ್ಪ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪತ್ರವನ್ನು ಬರೆದಿರುವ ಅವರು ಇದಕ್ಕೆ ಆಸ್ಪದ ಕೊಡುವುದಿಲ್ಲ ಎಂದು ನಂಬಿದ್ದೇನೆ. ಆದರೆ ಒಂದು ವೇಳೆ ಹಾಗೇನಾದರೂ ಆದರೆ ಧರಣಿ ನಿಶ್ಚಿತ. ನನ್ನೊಡನೆ ಸಮಾನ ಮನಸ್ಕರು ಜೊತೆಗೂಡಿ ಎಂದು ಮನವಿ ಮಾಡಿದ್ದಾರೆ. ಅವರು ಬರೆದ ಪತ್ರ ಕೆಳಗಿನಂತಿದೆ.

ಕನ್ನಡದ ಬಂಧು ಬಾಂಧವರಲ್ಲಿ ವಿನಂತಿ.

ಆತ್ಮೀಯರೇ, ಇದೇ ಜನವರಿ ೧೦ ಮತ್ತು ೧೧ ರಂದು ನಡೆಯುವ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನನ್ನ ಮೂರು ದಶಕಗಳ ಮಿತ್ರ ಹಾಗೂ ಸಾಮಾಜಿಕ ಚಳುವಳಿಯ ಹೋರಾಟಗಾರ ಕಲ್ಕುಳಿ ಹೆಗ್ಗಡೆ ಆಯ್ಕೆಯಾಗಿದ್ದಾರೆ. ಆದರೆ, ಅಲ್ಲಿನ ಸಂಘ ಪರಿವಾರದ ವಿ.ಹೆಚ್.ಪಿ ಮತ್ತು ಶ್ರೀ ರಾಮಸೇನೆಯ ಕಪಿ ಪುಂಗವರು ತಮ್ಮ ಬುಡಕ್ಕೆ ಮೆಣಸಿನಕಾಯಿ ಇಟ್ಟುಕೊಂಡು ಅಧ್ಯಕ್ಷರನ್ನು ಬದಲಿಸುವಂತೆ ಹೋರಾಟ ನಡೆಸುತ್ತಿದ್ದಾರೆ.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಈವರೆಗೆ ಮೌನವಾಗಿದೆ. ಸಮ್ಮೇಳನದ ಹಣವನ್ನು ಈವರೆಗೆ ಬಿಡುಗಡೆ ಮಾಡಿಲ್ಲ. ಜಿಲ್ಲಾಧ್ಯಕ್ಷ ಮತ್ತು ಶೃಂಗೇರಿ ತಾಲೂಕಿನ ಅಧ್ಯಕ್ಷ ಇಬ್ಬರೂ ಸರ್ಕಾರಿ ನೌಕರರಾಗಿರುವ ಕಾರಣ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್ತು ಒಂದು ಸ್ವಾಯತ್ತ ಸಂಸ್ಥೆ. ಅದರ ಮೇಲೆ ಕನ್ನಡಿಗರಿಗೆ ಮಾತ್ರ ಹಕ್ಕಿದೆಯೇ ಹೊರತು, ಎದೆ ಸೀಳಿದರೆ ಮೂರಕ್ಷರವೂ ಇಲ್ಲದ ದೊಣ್ಣೆ ನಾಯಕರಿಗೆ ಯಾವ ಹಕ್ಕಿಲ್ಲ. ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಅವಿರೋಧವಾಗಿ ಆಯ್ಕೆಯಾದ ಸಮ್ಮೇಳನದ ಅಧ್ಯಕ್ಷರನ್ನು ಬದಲಾಯಿಸಿದ ಘಟನೆಗಳು ಜರುಗಿಲ್ಲ. ಒಂದು ವೇಳೆ ಅಂತಹ ಬದಲಾವಣೆಯಾದರೆ, ನಾವೆಲ್ಲಾ ಸಾಮೂಹಿಕವಾಗಿ ಪ್ರತಿಭಟಿಸುವುದು ನಮ್ಮ ಕರ್ತವ್ಯವಾಗಿದೆ. ಏಕೆಂದರೆ, ಮತೀಯ ಶಕ್ತಿಗಳಿಗೆ ನಾವು ಮಣಿದರೆ, ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂಘ ಪರಿವಾರದ ಶಾಖಾ ಮಠವಾಗುವುದರಲ್ಲಿ ಸಂಶಯವಿಲ್ಲ.

ಕನ್ನಡವನ್ನು ಮಾಧ್ಯಮ ಭಾಷೆಯಾಗಿ ಉಳಿಸುವ ಕೆಲಸವನ್ನು ಹೊರತು ಪಡಿಸಿ, ಈವೆಂಟ್ ಮೇನೇಜ್ ಮೆಂಟ್ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಯ ಸ್ವರೂಪವನ್ನು ಬದಲಾಯಿಸಿಕೊಳ್ಳಲು ಒತ್ತಾಯ ಮಾಡುವುದರ ಜೊತೆಗೆ ನಾವೆಲ್ಲಾ ಕಲ್ಕುಳಿ ವಿಠಲ ಹೆಗ್ಗಡೆಯವರ ಪರ ನಿಲ್ಲೋಣ.

ನನಗೆ ಕಳೆದ ಹದಿನೈದು ವರ್ಷಗಳಿಂದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆ ಸಂಪರ್ಕವಿಲ್ಲ. ಈಗಿನ ಅಧ್ಯಕ್ಷ ಮನು ಬಳಿಗಾರ್ ಜೊತೆ ಸಂಪರ್ಕ ಇರುವ ನನ್ನ ಅನೇಕ ಮಿತ್ರರಿದ್ದಾರೆ. ಅವರೆಲ್ಲರೂ ಈ ವಿಷಯ ಕುರಿತಾಗಿ ಅವರ ಜೊತೆ ಮಾತನಾಡಬೇಕಾಗಿ ನನ್ನ ವಿನಂತಿ.

ಸರ್ಕಾರ ಅಥವಾ ಇತರೆ ಬಾಹ್ಯ ಒತ್ತಡಕ್ಕೆ ಮಣಿದು ಹೆಗ್ಗಡೆಯವರನ್ನು ಬದಲಿಸಿದರೆ, ನಾನು ಸಮಾನ ಮನಸ್ಕ ಮಿತ್ರರ ಜೊತೆಗೂಡಿ ಕೇಂದ್ರ ಸಾಹಿತ್ಯ ಪರಿಷತ್ತಿನ ಕಚೇರಿಯ ಮುಂದೆ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾನೆ. ನಿಮ್ಮೆಲ್ಲರ ಬೆಂಬಲವನ್ನು ಕೋರುತ್ತೇನೆ.
– ಜಗದೀಶ್ ಕೊಪ್ಪ

ಜಗದೀಶ್ ಕೊಪ್ಪ

ಈ ಪತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬೆಂಬಲದ ಮಹಾಪೂರವೇ ಹರಿದುಬಂದಿದೆ. ದೆಹಲಿಯ ಪ್ರಾಧ್ಯಾಪಕರಾದ ಪ್ರೊ.ಪುರುಷೋತ್ತಮ ಬಿಳಿಮಲೆ, ಹೋರಾಟಗಾರರಾದ ಡಾ.ವಾಸು ಎಚ್‌.ವಿ, ಚಿತ್ರನಿರ್ದೇಶಕರಾದ ಕೇಸರಿ ಹರವೂ ಸೇರಿದಂತೆ ಹಲವಾರು ಹೋರಾಟಕ್ಕೆ ಜೊತೆಗೂಡುವುದಾಗಿ ಘೋಷಿಸಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಕಸಾಪದ ಮಾಜಿ ರಾಜ್ಯಾಧ್ಯಕ್ಷರು ಮತ್ತು ಹಿರಿಯ ಸಾಹಿತಿ, ಹೋರಾಟಗಾರರಾದ ಚಂಪಾರವರನ್ನು ಮಾತಾಡಿಸಿತು. ಅವರು “ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಒಂದು ಸ್ವಾಯುತ್ತ ಸಂಸ್ಥೆಯಾಗಿದೆ. ಅದು ಕೇಂದ್ರ ಘಟಕದ ಅಡಿಯಲ್ಲಿ ಕೆಲಸ ಮಾಡುತ್ತದೆ. ಅದು ತಮ್ಮ ಕಾರ್ಯಕಾರಿ ಸಮಿತಿಯಲ್ಲಿ ಸರ್ವಾನುಮತದಿಂದ ಒಬ್ಬ ಅಧ್ಯಕ್ಷರನ್ನು ಆಯ್ಕೆ ಮಾಡಿರುವುದು ಕ್ರಮಬದ್ಧವಾದ ನಡವಳಿಕೆಯಾಗಿದೆ. ಆದ್ದರಿಂದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನವರು ಹಣ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಲಾಗುವುದಿಲ್ಲ, ಕೂಡಲೇ ಹಣ ಬಿಡುಗಡೆ ಮಾಡಲು ಒಬ್ಬ ಮಾಜಿ ಅಧ್ಯಕ್ಷನಾಗಿ ಆಗ್ರಹಿಸುತ್ತೇನೆ. ಈ ರೀತಿಯ ರಾಜಕೀಯ ಹಸ್ತಕ್ಷೇಪ ಯಾರಿಗೂ ಸಲ್ಲದು” ಎಂದು ತಿಳಿಸಿದ್ದಾರೆ.

ಚಂಪಾ

ಇನ್ನು ಈ ಕುರಿತು ಪ್ರತಿಕ್ರಿಯೆ ಪಡೆಯಲು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಮನು ಬಳಿಗಾರ್‌ರವರನ್ನು ಸಂಪರ್ಕಿಸಲು ಪ್ರಯತ್ನಿಸಿತ್ತಾದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ..

ಕಲ್ಕುಳಿ ವಿಠಲ ಹೆಗ್ಡೆ ಅವರ ಮಂಗನ ಬ್ಯಾಟೆ ಕನ್ನಡದ ವಿಶಿಷ್ಟ ಕೃತಿ. ದಶಕಕ್ಕೆ ಮುಂಚೆಯೇ ಶಿವಮೊಗ್ಗದಲ್ಲಿ ಜರುಗಿದ ಅಖಿಲಭಾರತ ಸಮ್ಮೇಳನದಲ್ಲಿ‌ ಮಾತನಾಡಿದ್ದಾರೆ ಹೆಗ್ಡೆ. ಅವರ ಮೇಲೆ ಪೂರ್ವಾಗ್ರಹಪೀಡಿತ ಪ್ರಕರಣಗಳು ಹೂಡಲ್ಪಟ್ಟಿವೆ ಎಂಬುದು ಎಲ್ಲರೂ ಅರಿತ ಸಂಗತಿಯೇ. ಕೆಲ ಪಟ್ಟಭದ್ರರಿಗೆ ಮೆಚ್ಚಾಗಲಿಲ್ಲವೆಂದು ಅವರ ನಿಯೋಜನೆಯನ್ನು ತಪ್ಪಿಸುವ ಯತ್ನ ಮಾಡಿದರೆ ಅದೊಂದು ಕೆಟ್ಟ ಪರಂಪರೆಯಾಗುವ ಸಂಭವವಿದೆ. ಇದನ್ನು ತೀವ್ರವಾಗಿ ವಿರೋಧಿಸಬೇಕಿದೆ ಎಂದು ರೋಹಿತ್‌ ಅಗಸರಹಳ್ಳಿ ಅಭಿಪ್ರಾಯಪಟ್ಟಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights