ಡಿಜಿ ಹಳ್ಳಿ ದೇವಾಲಯ ರಕ್ಷಸಿದ ಮುಸ್ಲೀಂ ಯುವಕರು: ಯಾರು ಅವರು? ಅವರು ಹೇಳಿದ್ದೇನು?

ಕಳೆದ ಎರಡು ದಿನಗಳಿಂದ ಕರ್ನಾಟಕ ಜನರ ಚಿತ್ತ ಬೆಂಗಳೂರಿನ ಸುತ್ತಲೇ ಇದೆ. ಕನ್ನಡ ಮಾಧ್ಯಮಗಳೂ ನಿನ್ನೆ (ಬುಧವಾರ)ಯಿಂದ  ಬೆಂಗಳೂರಿನ ಡಿಜಿ ಹಳ್ಳಿಯಲ್ಲಾದ ಕೆಲವು ಮುಸ್ಲೀಂ ಕಿಡಿಗೇಡಿಗಳ ಹಿಂಸಾತ್ಮಕ ಪ್ರತಿಭಟನೆಯ ಸುತ್ತಲೇ ಸುದ್ದಿಗಳನ್ನು ಮಾಡುತ್ತಿವೆ. ಸುದ್ದಿ ಮಾಡುವುದಕ್ಕಿಂತ ಮಿಗಿಲಾಗಿ ಮತ್ತಷ್ಟು ಕಿಚ್ಚು ಹೊತ್ತಿಸುವ “ಬೆಂಗಳೂರು ಧಗಧಗ, ಕೊತಕೊತ, ಹೊತ್ತಿ ಹುರಿಯುತ್ತಿದೆ ಬೆಂಗಳೂರು” ಎಂಬಿತ್ಯಾಧಿ ಶೀರ್ಷಿಕೆಯೊಂದಿಗೆ ಸುದ್ದಿಗಳಿಗೆ ದ್ವೇ‍ಷದ ಮಸಾಲೆ ಬೆರಲು ಪ್ರಸಾರ ಮಾಡುತ್ತಿವೆ. ಅದೂ ಕನ್ನಡದ ಫೇಕ್‌ ನ್ಯೂಸ್‌ ಫ್ಯಾಕ್ಟರಿ “ಪೋಸ್ಟ್‌ ಕಾರ್ಡ್‌ ಕನ್ನಡ”ವನ್ನೂ ಮೀರಿಸುವಷ್ಟು.

ಇದೆಲ್ಲರ ನಡುವೆ ಮಿಣುಕಿನಂತೆ ಕಂಡುಬಂದದ್ದು, ಅಲ್ಲಿಯ ದೇವಸ್ಥಾನದ ಮೇಲೆ ದಾಳಿಯಾಗದಂತೆ ಮುಸ್ಲೀಂ ಯುವಕರು ಮಾನವ ಸರಪಳಿ ಮಾಡಿ ರಕ್ಷಿಸಿದ್ದು. ಅಲ್ಲದೆ, ಕೆಲವು ಕಿಡಿಗೇಡಿಗಳು ಮಾಡಿದ ಹಿಂಸಾಚಾರದಿಂದ ‘ಪೈಗಂಬರ್ ವಿರುದ್ಧ ಅವಹೇಳನಕಾರಿ ಫೋಸ್ಟ್‌ ಹಾಕಿದ್ದ ಆರೋಪಿ ನವೀನ್‌’ ಎಂಬಾನತನ ತಾಯಿಯನ್ನೂ ಈ ಮುಸ್ಲೀಂ ಯುವಕರೇ ರಕ್ಷಿಸಿದ್ದರು.

ದೇವಸ್ಥಾನದ ರಕ್ಷಣೆಗೆ ಸರಪಳಿ ಮಾಡಿದ್ದೇಕೆ?

ನವೀವ್ ಎಂಬಾತನನ್ನು ಬಂಧಿಸುವಂತೆ ಮಂಗಳವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಪೊಲೀಸ್‌ ಠಾಣೆ ಮತ್ತು ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಯ ಎದುರು ಹಲವಾರು ಮುಸ್ಲೀಂಮರು ಜಮಾಯಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಅಲ್ಲಿದ್ದ ಕೆಲವು ಪುಂಡ ಕಿಡಿಗೇಡಿ ಶಾಸಕರ ಮೆನೆ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದರಿಂದಾಗಿ ಪ್ರತಿಭಟನೆ ಹಿಂಸೆಗೆ ತಿರುಗಿತ್ತು. ರಸ್ತೆಯಲ್ಲಿದ್ದ ಎರಡು ವಾಹನಗಳಗೂ ಬೆಂಕಿ ಹಚ್ಚಿದ್ದರು.

ನಿಯಂತ್ರಣಕ್ಕೆ ಸಿಗದ ಈ ಪ್ರತಿಭಟನೆಯಲ್ಲಿ ಪುಂಡರು ದೇವಸ್ಥಾನದ ಮೇಲೂ ದಾಳಿ ನಡೆಸಬಹುದು ಎಂದು ಊಹಿಸಿದ ಕೆಲವು ಮುಸ್ಲೀಂ ಯುವಕರು ಶಾಸಕರ ಮನೆಯ ಬಳಿಯೇ ಇದ್ದ ದೇವಾಲಯದ ಸುತ್ತ ಮಾನವ ಸರಪಳಿ ಮಾಡಿ ರಕ್ಷಣೆಗೆ ನಿಂತಿದ್ದರು. ಮೊದಲಿಗೆ 10 ಜನರಿಂದ ಕೂಡಿದ್ದ ಸರಪಳಿಗೆ ನೂರಾರು ಜನರು ಸೇರಿಕೊಂಡು ಪೋಲೀಸರು ಬರುವವರೆಗೂ ಸುಮಾರು ಒಂದೂವರೆ ಗಂಟೆಗಳ ಕಾಲ ರಾತ್ರಿ 12 ಗಂಟೆಗೆಯ ವರೆಗೂ ದೇವಸ್ಥಾನದ ಬಳಿಗೆ ಯಾರೂ ಹೋಗದಂತೆ ರಕ್ಷಿಸಿದ್ದರು.

ಶಾಸಕರ ಮನೆಯ ಮೇಲೆ ದಾಳಿ ಮಾಡಿದವರು ಅಲ್ಲಿಯ ಸ್ಥಳೀಯರಲ್ಲ, ಕಾವಲ್ ಭೈರಸಂದ್ರದ ಹಲವಾರು ಕಡೆಗಳಲ್ಲಿ ಮುಸ್ಲೀಮರೇ ಇದ್ದಾರೆ. ಹಿಂಸೆ ನಡೆಸಿದವರು ಸುತ್ತಮುತ್ತಲ ಪ್ರದೇಶಗಳಿಂದ ಬಂದಿದ್ದರು. ಅವರೊಂದಿಗೆ ಕೆಲವು ಸ್ಥಳೀಯ ಪುಂಡ ಹುಡುಗರು ಸೇರಿ ಇಂತಹ ಕೃತ್ಯ ನಡೆಸಿದ್ದಾರೆ. ತಿಳಿಗೇಡಿಯ ತಪ್ಪಿಗೆ ಆತನ ಸಮುದಾಯದ ಆಸ್ತಿಯನ್ನು ನಾಶ ಮಾಡುವುದು ಸರಿಯಲ್ಲ. ಅದು ಮತ್ತಷ್ಟು ಗಲಬೆಗೆ ಕಾರಣವಾಗುತ್ತದೆ. ನಮ್ಮ ಏರಿಯಾದಲ್ಲಿ ಇಂತಹ ಘಟನೆಗಳನ್ನು ನಾವು ಸಹಿಸಲ್ಲ, ಇಲ್ಲಿ ಎಲ್ಲರೂ ಸಹಬಾಳ್ವೆಯಿಂದ ಇದ್ದೇವೆ. ಅದನ್ನು ಉಳಿಸಿಕೊಳ್ಳಬೇಕು ಎಂದು ಅಲ್ಲಿಯ ಯುವಕರು ತಿಳಿಸಿದ್ದಾರೆ.

“ಯಾರೋ ಒಬ್ಬ ಕೋಮು ವಿರೋಧಿ ಅನ್ಯ ಧರ್ಮದ ವಿರುದ್ಧ ಮಾಡುವಂತಹ ಕೃತ್ಯಗಳಿಂದ ಇಡೀ ಸಮುದಾಯವನ್ನು ಹೊಣೆಯನ್ನಾಗಿಸಬಾರದು. ನವೀನ್ ಎಂಬಾತನ ತಪ್ಪಿಗೆ ಆತನಿಗೆ ಶಿಕ್ಷೆಯಾಗಬೇಕು. ಆದರೆ, ಅದು ಎರಡು ಸಮುದಾಯಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಬಾರದು. ಎಲ್ಲಾ ಸಮುದಾಯಗಳಲ್ಲೂ ಮೂರ್ಖರು ಇದ್ದೇ ಇರುತ್ತಾರೆ. ಅಂತಹ ಮೂರ್ಖರಿಂದ ಆಗುವ ಅನಾಹುತಗಳಿಗೆ ಇಡೀ ಸಮುದಾಯವನ್ನೇ ಹೊಣೆ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ದೇವಸ್ಥಾನವನ್ನು ರಕ್ಷಿಸಿವುದು ನಮ್ಮ ಕರ್ತವ್ಯ ಎಂದು ಭಾವಿಸುತ್ತೇವೆ” ಎಂದು ಸ್ಥಳೀಯ ನಜೀಮ್ ಹೇಳಿದ್ದಾರೆ.

ದೇವಸ್ಥಾನದ ಮೇಲೆ ಯಾರೂ ದಾಳಿ ಮಾಡಲಿಲ್ಲ:

ಹಿಂಸೆಗೆ ತಿರುಗಿದ್ದ ಪ್ರತಿಭಟನೆಯಿಂದಾಗಿ ದೇವಸ್ಥಾನದ ಮೇಲೆ ಯಾರಾದರೂ ಕಲ್ಲು ತೂರಬಹುದು ಎಂದು ಮುಸ್ಲೀಂ ಯುವಕರು ಭಾವಿಸಿ, ಅದರ ರಕ್ಷಣೆಗೆ ಮುಂದಾಗಿದ್ದರು. ಆದರೆ, ಯಾರೂ ಕೂಡ ದೇವಸ್ಥಾನದ ಗೊಡವೆಗೆ ಹೋಗಲಿಲ್ಲ. ಆದರೂ, ಉದ್ರಿಕ್ತಗೊಂಡಿದ್ದ ಕೆಲವರಿಂದ ದೇವಸ್ಥಾನಕ್ಕೆ ಅಪಾಯ ಎದುರಾಗಬಹುದು ಎಂದು ಭಾವಿಸಿದ್ದ ಯುವಕರು ಸರಪಳಿ ಮಾಡಿ ನಿಂತಿದ್ದರು. ಶಾಸಕರ ಮೆನೆ ಮೇಲೆ ಕಲ್ಲು ತೂರಿದ ಹಾಗೂ ವಾಹನಗಳಿಗೆ ಬೀದಿಗಳಲ್ಲಿ ಬೆಂಕಿ ಹಚ್ಚಿದ್ದವರು ದೇವಸ್ಥಾನ ಕಡೆ ಮುಖ ಮಾಡಲಿಲ್ಲ. ಎಲ್ಲರನ್ನೂ ದೂರದದಲ್ಲೇ ತಡೆಯಲಾಯಿತು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

ಪೊಲೀಸರು ಬರುವವರೆಗೂ ಹಿಂಸೆಯನ್ನು ನಿಯಂತ್ರಿಸಲು ಯುವಕರು ಶ್ರಮಿಸಿದ್ದರು. ನಂತರ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಕಿಡಿಗೇಡಿಗಳು ಹಿಂಸೆಯನ್ನು ಮತ್ತಷ್ಟು ಹೆಚ್ಚಿಸಿದ್ದರು, ಹಾಗಾಗಿ ನಿಯಂತ್ರಣ ತಪ್ಪಿತು ಎಂದು ಹೇಳಿದ್ದಾರೆ.

ಯಾವುದೇ ಸಂಘಟನೆಗೂ ಸೇರದ ಯುವಕರು: 

ದೇವಸ್ಥಾನದ ರಕ್ಷಣೆಗಾಗಿ ಧಾವಿಸಿದ್ದ ಯುವಕರು ಯಾವುದೇ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವವರಲ್ಲ. ಅವರೆಲ್ಲರೂ ವಿವಿಧ ರೀತಿಯ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವಾರು ಸಂದರ್ಭಗಳಲ್ಲಿ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿರುವ ಯುವಕರು, ಇತ್ತೀಚೆಗೆ ಕೊರೊನಾ ಸಂದರ್ಭದ ಲಾಕ್‌ಡೌನ್‌ನಲ್ಲಿ ವಾಲೆಂಟಿಯರ್ ಆಗಿ ಸೇವೆ ಸಲ್ಲಿಸಿದ್ದರು. ರಸ್ತೆಗಗಳಲ್ಲಿ ಅನಗತ್ಯವಾಗಿ ತಿರುಗದಂತೆ ಜನರಿಗೆ ಅರಿವು ಮೂಢಿಸಿ, ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಹಲವಾರು ಜನರಿಗೆ ಆಹಾರ ಕಿಟ್‌ಗಳು, ಊಟ, ಮಾಸ್ಕ್‌ಗಳನ್ನೂ ಒದಗಿಸಿದ್ದರು.

ಸಮಾಜಮುಖಿ ಮನಸ್ಸುಳ್ಳ ಮುಸ್ಲೀಂ ಯುವಕರು ಇಂತಹ ಕೆಲಸಗಳನ್ನು ಮೊದಲಿನಿಂದಲೂ ಮಾಡುತ್ತಿದ್ದು, ಕೋಮು ಸಹಬಾಳ್ವೆಯನ್ನು ಬಯಸುವವರು. ದೇವಸ್ಥಾನದ ಮೇಲಿನ ದಾಳಿ ಕೋಮು ದ್ವೇಷಕ್ಕೆ ಕಾರಣವಾಗಬಾರದು ಎಂದು ದೇವಸ್ಥಾನದ ರಕ್ಷಣೆಗಾಗಿ ನಿಂತಿದ್ದರು.


ReadAlsoಧರ್ಮದ ಹೆಸರಲ್ಲಿ ಯಾರೇ ಗೂಂಡಾಗಿರಿ ಮಾಡಿದರೂ ಅವರನ್ನು ಮಟ್ಟಹಾಕಬೇಕು: ಹೆಚ್‌ಡಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights