ದಲಿತರು –ಒಕ್ಕಲಿಗರ ನಡುವೆ ಮಾರಾಮಾರಿ; 20 ಜನರ ವಿರುದ್ಧ ದೂರು

ಹೆಚ್.ಡಿ.ಕೋಟೆ ತಾಲ್ಲೂಕಿನ ಲಬೊಪ್ಪನಹಳ್ಳಿ ಗ್ರಾಮದಲ್ಲಿ ದಲಿತರು ಮತ್ತು ಒಕ್ಕಲಿಗ ಸಮುದಾಯದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಒಕ್ಕಲಿಗ ಸಮುದಾಯದ 20 ಜನರ ಮೇಲೆ ಹೆಚ್.ಡಿ.ಕೋಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ದಲಿತ ಸಮುದಾಯ ರಾಜಣ್ಣ ಎಂಬಾತ ಟ್ರ್ಯಾಕ್ಟರ್‌ನಲ್ಲಿ ಗೊಬ್ಬರ ತುಂಬಿಸಿಕೊಂಡು ಒಕ್ಕಲಿಗ ಸಮುದಾಯದ ವ್ಯಕ್ತಿಯ ಜಮೀನಿನ ಮೇಲೆ ಹಾದುಹೋಗಿರುವ ಕಾರಣಕ್ಕೆ ಜಗಳ ಶುರುವಾಗಿತ್ತು. ಇಬ್ಬರು ವ್ಯಕ್ತಿಗಳ ನಡುವಿನ ಜಗಳ ಎರಡು ಗುಂಪುಗಳ ಘರ್ಷಣೆಯಾಗಿ ಮಾರ್ಪಟ್ಟಿದೆ. ತಕ್ಷಣ ಬಂದ ಪೊಲೀಸರು ಗುಂಪುಗಳನ್ನು ಚದುರಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಮಾರಮ್ಮನ ದೇವಸ್ಥಾನಕ್ಕೆ ದಲಿತರಿಗೂ ಪ್ರವೇಶ ನೀಡುವುದರ ವಿಚಾರವಾಗಿ ಎರಡೂ ಸಮುದಾಯದ ನಡುವೆ ವೈಷಮ್ಯವಿತ್ತು. ಈಗ ಮರಮ್ಮನ ಹಬ್ಬಕ್ಕೆ ತಯಾರಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ತಮಗೂ ದೇವಸ್ಥಾನಕ್ಕೆ ಮುಕ್ತ ಪ್ರವೇಶ ನೀಡಬೇಕೆಂದು ಆಗ್ರಹಿದ್ದರು. ಒಕ್ಕಲಿಗ ಸಮುದಾಯದವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ನಂತರ ತಹಶೀಲ್ದಾರ್‌ ಗ್ರಾಮಕ್ಕೆ ಭೇಟಿ ನೀಡಿ, ಎರಡೂ ಸಮುದಾಯದ ನಡುವೆ ಮಾತುಕತೆ ನಡೆಸಿದ್ದರು. ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಿಸುವುದು ಕಾನೂನು ಬಾಹಿರ. ಅವರಿಗೆ ಪ್ರವೇಶ ನೀಡದಿದ್ದರೆ ಹಬ್ಬವನ್ನು ಮಾಡುವಂತಿಲ್ಲ ಎಂದು ಆದೇಶಿಸಿದ್ದರು. ಇದಕ್ಕೆ ಗ್ರಾಮಸ್ಥರು ಒಪ್ಪಿಕೊಂಡಿದ್ದರಾದರೂ ಮನಸ್ಥಾಪ ಹಾಗೆ ಉಳಿದಿತ್ತು. ಈ ಕಾರಣ ಒಂದು ಕ್ಷುಲ್ಲಕ ಕಾರಣವನ್ನಿಟ್ಟುಕೊಂಡು ಬೀದಿ ರಂಪಾಟಕ್ಕಿಳಿದ್ದಾರೆ ಎಂದು ತಿಳಿದುಬಂದಿದೆ.

ಹಿಂದೂ ನಾವೆಲ್ಲಾ ಒಂದು ಎಂದು ಬೊಬ್ಬೆ ಹೊಡೆಯುವ ಸಂಘಪರಿವಾರ ನಮ್ಮಲ್ಲಿ ಜಾತೀಯತೆಯೇ ಇಲ್ಲವೆಂದು ಗೂಳಿಡುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಒಂದಾದಮೇಲೊಂದರಂತೆ ಜಾತಿ ನಿಂದನೆ, ದೇವಸ್ಥಾನ ನಿರಾಕರಣೆಯಂತಹವು ಬೆಳಕಿಗೆ ಬರುತ್ತಿವೆ. ಕಳೆದ ವಾರ ರಾಯಚೂರು ಜಿಲ್ಲೆಯ ಜಾಗಟಗಲ್‌ ಗ್ರಾಮದಲ್ಲಿ ದಲಿತ ಸಮುದಾಯದವರು ಸಾವನ್ನಪ್ಪಿದರೆ ಇಡೀ ಊರಿನ ಅಂಗಡಿಗಳನ್ನೇ ಮುಚ್ಚುವ ಹೀನ ಮನಸ್ಥಿತಿ ಬಗ್ಗೆ ವರದಿಯಾಗಿತ್ತು. ಮೊನ್ನೆಯಷ್ಟೇ ನಂಜನಗೂಡು ತಾಲ್ಲೂಕಿನ ನಗರ್ಲೆಯಲ್ಲಿಯೂ ದೇವಸ್ಥಾನ ಪ್ರವೇಶಕ್ಕೆ ನಿರಾಕರಿಸಿದ ಬಗ್ಗೆ ಹೋರಾಟ ನಡೆದಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights